ತಾಲೂಕಿನ ಕೆರೆಗಳು

ತಾಲೂಕಿನ ಕೆರೆಗಳು

– ಸಿದ್ಧಲಿಂಗಪ್ಪ ಬೀಳಗಿ

ಜೀವವಿಕಾಸದ ಚರಿತ್ರೆಯನ್ನು ಅಭ್ಯಸಿಸಿದರೆ ಮಾನವ ಆದಿಮಾನವ ಹಂತವನ್ನು ದಾಟಿ ಸಂಘಜೀವಿಯಾಗಿ ನೆಲೆನಿಂತು ಕಾಲಾಂತರದಲ್ಲಿ ನಿಸರ್ಗದತ್ತವಾದ ಸಂಪನ್ಮೂಲಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡದ್ದು ಕಂಡುಬರುತ್ತದೆ. ಮಳೆಗಾಲದಲ್ಲಿ ಭೂಮಿಗೆ ಬಿದ್ದ ನೀರನ್ನು ಹಿಡಿದಿಟ್ಟು ವರ್ಷವಿಡೀ ಕುಡಿಯಲು, ಜನಜಾನುವಾರು ಪೋಷಣೆಗೆ ಅನುಕೂಲವಾಗಲೆಂದು ಕೆರೆ, ಕಲ್ಯಾಣಿ, ಕ್ರಮೇಣ ಕೃಷಿ, ವಿದ್ಯುತ್, ಮೀನುಗಾರಿಕೆ, ವಿವಿಧೋದ್ದೇಶ ಯೋಜನೆಗಳಿಗಾಗಿ ಬೃಹತ್ ಆಣೆಕಟ್ಟುಗಳನ್ನು ನಿರ್ಮಿಸಿ ಸಂಗ್ರಹಿಸಿದ ನೀರನ್ನು ಜನಸಮುದಾಯದ ಅಗತ್ಯ ಪೂರೈಕೆಗೆ ಬಳಸಲಾರಂಭಿಸಿದ.

ಕೆರೆ ಎಂಬುದು ತುಂಬ ಪ್ರಾಚೀನ ಕಾಲದಿಂದಲೂ ಬದುಕಿನ ಭಾಗವಾದ ವ್ಯವಸ್ಥೆ ಮಳೆಯ ನೀರನ್ನು ಸಂಗ್ರಹಿಸಿ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮಾನವ ಕಂಡುಕೊಂಡ ಸರಳ ವಿಧಾನಗಳಲ್ಲಿ ಕೆರೆ ಒಂದು. ಬೇಸಾಯದ ಕಪ್ಪು ಮಣ್ಣಿನ ಭೂಮಿ ಹೊಂದಿರುವ ಹುನಗುಂದ ತಾಲೂಕಿನಲ್ಲಿ ಹಲವಾರು ಕೆರೆಗಳಿವೆ. ಕೆಲವು ಇತ್ತಿಚಿನ ಕೆರೆಗಳಾದರೆ ಕೆಲವು ತುಂಬಾ ಪುರಾತನ ಕೆರೆಗಳಾಗಿವೆ.

ಊರವರ ದಿನಬಳಕೆ, ಪಶು-ಪಕ್ಷಿ ಪೋಷಣೆ, ಲಘುಪ್ರಮಾಣದ ನೀರಾವರಿಗೆ ಅನುಕೂಲವಾಗುವ ಸಣ್ಣ ಮತ್ತು ಮಧ್ಯಮ ಗಾತ್ರದ ಕೆರೆಗಳು ಈ ತಾಲೂಕಿನಲ್ಲಿವೆ. ಆಧುನಿಕ ಸೌಲಭ್ಯಗಳ ಪರಿಣಾಮ, ಅಕಾಲಿಕ ಮಳೆಯ / ಅನಾವೃಷ್ಠಿಯಿಂದ ಕೆಲ ಕೆರೆಗಳು ವಿನಾಶದ ಅಂಚಿನಲ್ಲಿದ್ದರೆ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಾ ಹೊರಟಿವೆಯಲ್ಲದೆ ಕೆಲವಂತೂ ನಾಮಕಾವಸ್ಥೇ ಉಳಿದುಕೊಂಡಿವೆ.

ತಾಲೂಕಿನಾದ್ಯಂತ ಇರುವ ಕೆರೆಗಳನ್ನು ಅವುಗಳ ಗಾತ್ರ, ನೀರಿನ ಸಂಗ್ರಹ ಸಾಮಥ್ರ್ಯ, ನೀರಿನ ಬಳಕೆಗೆ ಅನುಗುಣವಾಗಿ ಸಣ್ಣ ಕೆರೆಗಳು, ಮಧ್ಯಮ ಗಾತ್ರದ ಕೆರೆಗಳು ಮತ್ತು ದೊಡ್ಡ ಕೆರೆಗಳೆಂದು ವಿಂಗಡಿಸಬಹುದು. ಸಣ್ಣ ಕೆರೆಗಳು ಕೇವಲ ತಮ್ಮ ಸುತ್ತಲ ಜನಸಮುದಾಯದ ಮತ್ತು ದನಕರುಗಳ ದಾಹ ತಣಿಸಲು ಮತ್ತು ದಿನಬಳಕೆ, ಉಪಯೋಗವಾದರೆ ಕೆಲವು ಐತಿಹಾಸಿಕ, ಬೃಹತ್ ಗಾತ್ರದ ಕೆರೆಗಳೂ ದಿನಬಳಕೆ, ದನಕರುಗಳಿಗೆ, ನೀರಾವರಿ, ಮೀನುಗಾರಿಕೆಗೂ ಬಳಸಲ್ಪಡುತ್ತವೆ.

ತಾಲೂಕಿನ ಒಟ್ಟು 1,32,776,46 ಹೆಕ್ಟರ್ ಭೌಗೋಳಿಕ ಕ್ಷೇತ್ರದಲ್ಲಿ ಬಲಕುಂದಿ, ಸಿಂಗನಗುತ್ತಿ, ಚಿಕ್ಕ ಕೊಡಗಲಿ, ಹಿರೇಮಾಗಿ, ದಮ್ಮೂರ ಕೆರೆಗಳು ಬೃಹತ್ ಪ್ರಮಾಣದ ಕೆರೆಗಳಾಗಿದ್ದು ಸಾಕಷ್ಟು ಪ್ರಮಾಣದ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮಥ್ರ್ಯವನ್ನು ಹೊಂದಿವೆ. ಸುತ್ತಲು 4-6 ಕಿಲೋಮೀಟರ್ ವ್ಯಾಪ್ತಿಯ ಜನ – ಜಾನುವಾರುಗಳಿಗೆ ಸಹಕಾರಿಯಾಗುವ ಈ ಕೆರೆಗಳ ನೀರಿನಿಂದ 30-80 ಎಕರೆ ನೀರಾವರಿಯನ್ನು ಮಾಡಲಾಗುತ್ತದೆ.

ಹಿರೇಮಾಗಿ, ಬಲಕುಂದಿ ಕೆರೆಗಳಿಂದ ಇಂದು ನೀರಾವರಿ ಮಾಡುವದನ್ನು ನಿಲ್ಲಿಸಲಾಗಿದೆಯಾದರೂ ಚಿಕ್ಕ ಕೊಡಗಲಿ ಸಿಂಗನಗುತ್ತಿ, ದಮ್ಮೂರಿನ ಕೆರೆಗಳು ತಮ್ಮ ಮೂಲ ಆಶಯದಿಂದ ದೂರ ಸರಿದಿಲ್ಲವಲ್ಲದೇ ಅವುಗಳ ಪುನರುಜ್ಜೀವನ ಮಾಡಿ ನೀರಾವರಿ, ಮೀನುಗಾರಿಕೆ ಅಭಿವೃದ್ಧಿ ಪಡಿಸಲಾಗಿದೆ.

ತಾಲೂಕಿನ ನೈಋತ್ಯ ಭಾಗಕ್ಕಿರುವ ದಮ್ಮೂರ ಕೆರೆ ಇಂದು ತಾಲೂಕಿಗೆ, ರಾಜ್ಯಕ್ಕೆ ಮಾದರಿಯಾದ ಕೆರೆಯಾಗಿ ಮಾರ್ಪಟ್ಟಿದೆ. ಸ್ಥಳೀಯ ದಿಡಗಿನ ಬಸವೇಶ್ವರ ಕೆರೆ ಅಭಿವೃದ್ಧಿ ಸಂಘದ ಸದಸ್ಯರ ಕ್ರಿಯಾಶೀಲತೆ, ಗ್ರಾಮಸ್ತರ ಸಹಕಾರ, ಜಲಸಂವರ್ಧನಾ ಯೋಜನೆ, ಔಟ್‍ರಿಚ್, ಕೃಷಿ ವಿಶ್ವವಿದ್ಯಾಲಯ, ಸಣ್ಣ ನೀರಾವರಿ ಇಲಾಖೆಗಳ ಸಹಯೋಗದಲ್ಲಿ ಇಡೀ ಕೆರೆಯಲ್ಲಿನ ಹೂಳನ್ನು ತೆಗೆದು ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಲಾಗಿದೆಯಲ್ಲದೆ ಕೆರೆಗೆ ಗೇಟ್‍ವಾಲ್ವ, ಗೈಡ್‍ವಾಲ್ವ, ಅಳವಡಿಸಿ ಕೆರೆ ಅಭಿವೃದ್ಧಿ ಸಂಘದ ಸದಸ್ಯರ 80 ಎಕರೆ ಭೂಮಿಗೆ ಆಧುನಿಕ ಪದ್ಧತಿ ಮೂಲಕ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಲೂಕಿನಾದ್ಯಂತ ಸಾಕಷ್ಟು ಸಣ್ಣ ಪ್ರಮಾಣದ ಕೆರೆಗಳಿರುವ ಬಗ್ಗೆ ದಾಖಲೆಗಳಿವೆ. ಕೆಲವು ಕೆರೆಗಳು ಇಂದು ಅಸ್ತಿತ್ವದಲ್ಲಿಲ್ಲವಾದರೂ ಅವುಗಳ ಪ್ರತೀತಿ ಮಾತ್ರ ನಿಚ್ಚಳವಾಗಿವೆ. ಹುನಗುಂದದ ಪಶ್ಚಿಮ ದಿಕ್ಕಿಗೆ ಇದ್ದ ಪ್ರಸಿದ್ಧ ಹೊನ್ನಮ್ಮನ ಕೆರೆ ಇಂದು ನಾಮಕಾವಸ್ಥೆ ಕೆರೆಯಾಗಿದೆ. ಧನ್ನೂರ ರಸ್ತೆಗೆ ಹೊಂದಿಕೊಂಡಿರುವ ಹೊಸಕೆರೆ 8-10 ತಿಂಗಳು ತನ್ನತನವನು ಪ್ರತಿನಿಧಿಸುತ್ತದೆ. ಹುನಗುಂದ  ಮರೋಳ ಮಾರ್ಗ ಮಧ್ಯದಲ್ಲಿನ ಕಡಪಟ್ಟಿ ಕೆರೆಪಟ್ಟ ಬಹುಜನರಿಗೆ ಅಪರಿಚಿತ  ಕೆರೆಯಾದರೂ ಹುನಗುಂದ ರೈತರ (ಆಧಾರಸ್ಥಂಭ) ಕೆರೆಯಾಗಿದೆ.

ನಂದವಾಡಗಿ, ಚಿತ್ತರಗಿ, ಅಮೀನಗಡ, ಬಸರಿಕಟ್ಟಿ, ಸೂಳೇಭಾವಿ, ಕೆಲೂರ ಹೊನ್ನರಹಳ್ಳಿ, ಸೋಮಲಾಪೂರ, ಕಡಿವಾಲ ಇನಾಂ, ಕರಡಿ, ಇಲಾಳ, ಕೆಂಗಲ್ಲ ಕಡಪಟ್ಟಿ, ಮುರುಡಿ, ತಿಮ್ಮಾಪೂರ, ಐಹೊಳೆ, ಹಿರೇಮಳಗಾವಿ ಗಂಜಿಹಾಳ, ಬಿಸಲದಿನ್ನಿಗಳಲ್ಲಿಯೂ ಕೆರೆಗಳಿರುವ ಬಗ್ಗೆ ಮಾಹಿತಿ ಇದೆ.

ತಾಲೂಕಿನ ಕೆಲ ಕೆರೆಗಳು ತಮ್ಮ ಊರು, ಪರಿಸರ ಖ್ಯಾತಿಗೆ ಕಾರಣವಾದರೆ ಕೆಲ ಕೆರೆಗಳು ಕುಖ್ಯಾತಿಗೂ ಹೆಸರುವಾಸಿಯಾಗಿವೆ. ಕಂದಗಲ್ಲಿನಲ್ಲಿ ಊರ ಸುತ್ತ ಏಳು ಕೆರೆಗಳಿದ್ದು ಊರಿನ ಘನತೆಯ ಸಂಖೇತವಾದರೆ ಚಿಕ್ಕ ಕೊಡಗಲಿ, ದಮ್ಮೂರ ಕೆರೆಗಳೂ ಇಂದಿಗೂ ತಮ್ಮ ಗೌರವ ಕುಂದಿಸಿಕೊಂಡಿಲ್ಲ. ಉನಗುಂದ ಇಲಕಲ್ಲ ಮಧ್ಯೆ ಇರುವ ಸಕ್ರಿಕೆರೆ ನಿರ್ವಹಣೆ ಕೊರತೆಯಿಂದ, ಸಮರ್ಪಕ ಬಳಕೆಯಿಲ್ಲದೇ ಹಾಳು ಬಿದ್ದು ‘ದೆವ್ವ ಕೆರೆ’ ಎಂತಲೂ ಪ್ರತೀತಿ ಪಡೆದಿದೆ.

ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿಯುತ್ತಿರುವ ಹನಿನೀರಿಗೂ ಹಾಹಾಕಾರ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕೃಷಿ, ನೀರಾವರಿ ಇಲಾಖೆಯಿಂದ ತಾಲೂಕಿನಾದ್ಯಂತ ಅಲ್ಲಲ್ಲಿ ನಾಲಾಬಂಡ್, ಚಕ್‍ಡ್ಯಾಂ, ಕೃಷಿ , ನೀರಾವರಿ ಇಲಾಖೆಯಿಂದ ತಾಲೂಕಿನಾದ್ಯಂತ   ಅಲ್ಲಲ್ಲಿ ನಾಲಾಬಂಡ್, ಚಕ್‍ಡ್ಯಾಂ, ಕೃಷಿ, ನೀರಾವರಿ ಇಲಾಖೆಯಿಂದ ತಾಲೂಕಿನಾದ್ಯಂತ ಅಲ್ಲಲ್ಲಿ ನಾಲಾಬಂಡ್, ಚಕ್‍ಡ್ಯಾಂ, ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ‘ಜಲಜೀವಸಂಜೀವಿನಿ’ ಯಾದ ಇಂದಿನ ಸಂದರ್ಭದಲ್ಲಿ ಅಳಿದುಳಿದ ಕೆರೆಗಳ ಅಭಿವೃದ್ಧಿ ಕೆರೆ ನೀರಿನ ಸದ್ಭಳಕೆ ಮಾಡುವುದರ ತುರ್ತು ಅಗತ್ಯವಿದೆ.

Comments
2 Responses to “ತಾಲೂಕಿನ ಕೆರೆಗಳು”
  1. admin says:

    test comment 1

Leave A Comment