ಸಜ್ಜಕ ತಿನ್ನೋ ಆಸೆ ರಾಜ್ಯ ಪ್ರಶಸ್ತಿ ಗಳಿಸಿತು

Karadi Majal Kelur40 ವರ್ಷದ ಹಿಂದೆ ಕರಡಿ ಮಜಲು ಅಂದ್ರ ಗೊತ್ತಿರಲಿಲ್ಲ. ಹಳೆಯ ಮೇಳ ಇದ್ದವು. ಲಗ್ನದಾಗ ಬಾರಿಸುವ ಕರಡಿಮಜಲಿನವರಿಗೆ ಕೊಡುವ ಗೌರವ, ಅವರಿಗೆ ಹಾಕಿಸೋ ಸಜ್ಜಕದ ಊಟ ನೋಡಿ ನಮ್ಮ ಬಾಯಾಗ ನೀರು ಬರ್ತಿದ್ವು. ಅವಾಗ ನಾವು ಸಣ್ಣವರಿದ್ವಿ. ನಮ್ಮನ್ನು ಬೈದು ಹೊರಗ ಕಳಸ್ತಿದ್ದರು. ನಾವೂ ಹಿಂಗ ಕಲಿತ್ರ ನಮ್ಮನ್ನೂ ಹೀಗೆ ಕರೆದು ಊಟಾ ಮಾಡಿಸ್ತಾರ ಅಂತ ಮನಸ್ಸು ಅಂದೇ ಮಾಡಿದೆ. ನಾವೆಲ್ಲ ಅವಾಗ ಮಾಳಿಗೆಯ ಮೇಲೆ ಮಲಗುತ್ತಿದ್ದೆವು. ನನ್ನ ಜೊತೆಗಿದ್ದ  ಹಿರಿಯರೊಂದಿಗೆ ನಾವು ಕರಡಿಮಜಲು ಭಜಂತ್ರಿಯವರಿಂದ ಕಲಿಬೇಕಂತ ಮಾಡೀವಿ ಅಂತ ಅಂದೆ. ಅವಾಗ ನನ್ನ ತಾಯಿ ಕೆಳಗಿನಿಂದಲೇ ಬೆಳಕಿಂಡಿ ಮೂಲಕ ಕಲಿತ್ರ ಯರಕದ ಕರವೀರಪ್ಪನವರಿಂದಲೇ ಕಲಿ ಎಂದಳು. ಸಜ್ಜಕ ಉಣ್ಣಾಕ ಅಂತ ಕಲೀತು ಇವತ್ತು ರಾಜ್ಯ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಯ ಮುಡಿಗೇರಿಸಿಕೊಳ್ಳುವಂತಾಯ್ತು ಎಂದು ಮಾತಿಗೆ ಶುರುವಿಟ್ಟುಕೊಂಡರು ಕೆಲೂರಿನ ಸಂಗಪ್ಪ ಫಕೀರಪ್ಪ ಹೂಗಾರವರು.

ಕೆಲೂರು ಹುನಗುಂದದಿಂದ ನೈರುತ್ಯಕ್ಕೆ 18 ಕಿಲೋಮೀಟರ ದೂರವಿರುವ ಒಂದು ಪುಟ್ಟ ಗ್ರಾಮ. ವ್ಯವಸಾಯ, ಹೈನುಗಾರಿಕೆಯ ಒಂದು ಆಯಕಟ್ಟಿನ ಸ್ಥಳ. ಕೆಲೂರು ಬರೀ ಕೆಲೂರಾಗಿರದೆ ಕೆಲ್ವಡಿ(ಕೆಳ್ವಡಿ- ತಾವರಗೆರೆ ಶಿಲಾ ಶಾಸನದಲ್ಲಿ ಉಲ್ಲೇಖ) ಕಾಳೂರ(ಹುನಗುಂದ ತಾಲೂಕಾ ದರ್ಶನದಲ್ಲಿ ಉಲ್ಲೇಖ) ಆಗಿತ್ತೆಂದು ತಿಳಿದು ಬರುತ್ತದೆ. ಇಂಥ ಗ್ರಾಮದಲ್ಲಿ ಆರ್ಥಿಕ ಸಂಕಷ್ಟ ಒಂದೆಡೆ, ಮತ್ತೊಂದೆಡೆ ಶಿಕ್ಷಣದ ಕೊರತೆ. ಇವೆರಡರ ಮಧ್ಯೆ ಕೆಲವು ವರ್ಷ ಒಕ್ಕಲುತನ ಶುರುವಿಟ್ಟುಕೊಂಡ ಸಂಗಪ್ಪ ನಂತರ ಕರಡಿಮಜಲನ್ನು ಜೋತಿಷ್ಯ, ಶಿಲ್ಪಕಲೆ, ಸಂಗೀತ, ಕಂಚುಗಾರಿಕೆ, ಬಡಿಗತನ ಎಂಬ ಪಂಚ ಮಹಾವಿದ್ಯೆಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದ ಗುಡೂರಿನ ಕರವೀರಪ್ಪನವರು ಯರಕದ  ಇವರ ಹತ್ತಿರ 5 ವರ್ಷ ವಿದ್ಯೆ ಕಲಿತರು.

ಜನಪದ ವಾದ್ಯಗಳಲ್ಲಿ ಒಂದು ವಿಶಿಷ್ಟ ವಾದ್ಯ ಕರಡಿ ಮಜಲು. ಇದು ವೀರಭದ್ರ ದೇವರ ಆರಾಧನೆಯ ಸಂದರ್ಭದಲ್ಲಿ ಬಾರಿಸುವ ವಾದ್ಯವಾಗಿದೆ. ಜೊತೆಯಲ್ಲಿ ದಿಮ್ಮು, ಜಾಗಡ, ತಾಳ,ಸುತ್ತಿ, ಸನಾದಿ ಮೇಳವನ್ನು ಒಳಗೊಂಡಿರುತ್ತದೆ. ಪುರವಂತಿಕೆಯ ವೇಶಕ್ಕೆ ರೌದ್ರತೆ ಒದಗಿಸುವದು ಇದರ ಉದ್ದೇಶ. ಇದಕ್ಕೆ ಕಲಾತ್ಮಕ ರೂಪ ನೀಡುವ ಕಲಾವಿದರ ಮೇಳಗಳಿವೆ.

1975 ರಿಂದ ಪ್ರಾರಂಭವಾದ ಅವರ ಕರಡಿ ಮಜಲು ಹೀಗೆ ನಿರಾತಂಕವಾಗಿ, ಸುದೀರ್ಘ ಪಯಣದಲ್ಲಿ ಬೆಳೆದು ಬಂದಿತು. ಸಂಗಪ್ಪನವರು ವ್ಯಕ್ತಿಯಾಗಿ, ಗ್ರಾಮದ ಶಕ್ತಿಯಾಗಿ ಬೆಳೆದರು. ಬಸಪ್ಪ ಗುರುಬಸಪ್ಪ ಹೂಗಾರ, ಸಂಗಪ್ಪ ಮಹಾಂತಪ್ಪ ಕಡಪಟ್ಟಿ, ಪುರುಷೋತ್ತಮ ಈರಸಂಗಪ್ಪ ಜನಿವಾರದ, ಶಿವಪ್ಪ ಮಲ್ಲಪ್ಪ ಕೊಪ್ಪದ, ಯಮುನಪ್ಪ ನಿಂಗಪ್ಪ ಗೋಡಿ, ಶರಣಪ್ಪ ಬಾಳಪ್ಪ ಭಜಂತ್ರಿ,  ಪವಾಡೆಪ್ಪ ಭೀಮಪ್ಪ ಭಜಂತ್ರಿ, ಬಸಪ್ಪ ನಿಂಗಪ್ಪ ಭಜಂತ್ರಿ,  ಮೊದಲಾದವರು ಸಂಗಪ್ಪನವರಿಗೆ ಶಹನಾಯಿ, ಶೃತಿ, ಕರಡೆ, ಚೌಗಡ, ದಿಮ್ಮುಗಳ ಲಯಬದ್ಧವಾದ ಸಾಥ್ ನೀಡಿದ್ದಾರೆ. ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ, ಚಾಲುಕ್ಯ ಉತ್ಸವ ಪ್ರಶಸ್ತಿ, ಮೈಸೂರು ದಸರಾ ಉತ್ಸವ ಪ್ರಶಸ್ತಿ, ಧಾರವಾಡ ಆಕಾಶವಾಣಿ ಕೇಂದ್ರದ ‘ಬಿ’ ಹೈಗ್ರೇಡ್ ತಾಳವಾದ್ಯ ಕಲಾವಿದರಾಗಿ, ಹೆಚ್ಚಿನ ಸಂಭಾವನೆ ನಿರೀಕ್ಷಿಸದೇ ಶಾರದಾ ಕರಡಿ ಮಜಲು ತಂಡ ಕಟ್ಟಿಕೊಂಡು ಊರೂರು ಸುತ್ತಿ ಕಲೆ ಪ್ರದರ್ಶನ ಮಾಡಿ ಸಾರ್ಥಕತೆ ಪಡೆದಿದ್ದಾರೆ. ನಾಗಪುರದವರು ಏರ್ಪಡಿಸಿದ ಲೋಕ ಕಲಾಯಾತ್ರೆ, ಕೇರಳದ ಓಣಂ ಹಬ್ಬ, ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದು. ಸರ್ಕಾರದಿಂದ ಮಾಶಾಸನ ಪಡೆಯುತ್ತಿರುವ ಇವರು ನನ್ನಂತೆ ಎಲ್ಲರಿಗೂ ಪ್ರಶಸ್ತಿ ಬರಲಿ  ಈಗಿನ ತಲೆಮಾರು ಕಷ್ಟಪಟ್ಟು ಕಲಿಯಲಿಕ್ಕೆ ಒಲ್ಲದ ಕರಡಿಮಜಲು ಮುಂದಿನ ತಲೆಮಾರು ಉಳಿಸಿಕೊಂಡು ಹೋಗಲಿ ಎನ್ನುವದು ಅವರ ಅಪೇಕ್ಷೆ.

ತಾಯಿಯ ಭಾವನೆಯಂತೆ ಭಾಷೆ, ಆ ಭಾಷೆಯಂತೆ ಬಾಂಧ್ಯವ್ಯ, ಆ ಬಾಂಧವ್ಯದಂತೆ ಬದುಕು, ರೀತಿ, ನೀತಿ ಖ್ಯಾತಿಯಾಗಿಸುವದರಲ್ಲಿ ಸಂಗಪ್ಪನವರು ಬಡತನದಲ್ಲೂ ಬದುಕನ್ನು ಸುಂದರವಾಗಿ ಇಡೀ ಜಗತ್ತೇ ಬೆರಗಾಗುವಂತೆ ಕಟ್ಟಿಕೊಂಡವರು. ಆ ತಂಡದ ಯಾರ ಹತ್ತಿರವೂ ಕಡ್ಡಿಪಟ್ಟಣ ಸುಳಿಯದ್ದೊಂದು ಅವರ ವಿಶೇಷ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಮನಸ್ಸು ಮಾಡಬೇಕಷ್ಟೇ ಎಂಬುದು ತಿಳಿಯುತ್ತದೆ.

ಅಬ್ಬರದ ಸಂಗೀತ, ದ್ವಂದ್ವ ಸಾಹಿತ್ಯಕ್ಕೆ ಮಾರು ಹೋಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಈ ನೆಲದ ಸೊಗಡನ್ನು ಸಂಗಪ್ಪನವರಂತಹ ಗ್ರಾಮೀಣ ಪರಿಸರದ ಮಲ್ಲಿಗೆಯ ಹೂಗಳು ತಮ್ಮ ಕಲೆಯ ಮೂಲಕ ಸುವಾಸನೆ ಬೀರುತ್ತಾ ನಾಡು-ನುಡಿಯ ಸೇವೆ ಗೈಯುತ್ತಿರುವದು ನಿಜಕ್ಕೂ ಹೆಮ್ಮೆಯ ವಿಷಯ.

-ದಾನೇಶ್ವರಿ ಬಿ.ಸಾರಂಗಮಠ

ಹುನಗುಂದ

Leave A Comment