ಜನಪದ ಜಲ ಶಿಲ್ಪಿಗಳು / ಜಲದಕಣ್ಣು ತೋರಿದವರು

ಪೀಠಿಕೆ:

      ಡಾ. ಹಾ.ಮಾ. ನಾಯಕರ ಪ್ರಕಾರ “ಜನಪದ ಎನ್ನುವುದು ಬಿಡಿಬಿಡಿಯಾದ ಅಂಶಗಳಿಗೂ; ಜಾನಪದ ಎಂಬುದು ಇವೆಲ್ಲವುಗಳ ಇಡಿಯಾದ ವಿಭಾಗಕ್ಕೂ ಅನ್ವಯಿಸುತ್ತದೆ. ಉದಾಹರಣೆಗೆ: ಜನಪದ ಗೀತೆ, ಜನಪದ ಸಾಹಿತ್ಯ, ಜನಪದ ಕಲೆ, ಆಟ, ಹಬ್ಬ, ಆಚರಣೆ, ವೈದ್ಯ, ಸಂಸ್ಕøತಿ ಹೀಗೆ. ಬಿಡಿಬಿಡಿ ಅಂಶಗಳು ಜನಪದ ಪ್ರಕಾರಗಳೆನಿಸಿದರೆ; ಈ ಜನಪದ ಎಲ್ಲವನ್ನು ಒಳಗೊಂಡ ಸಮಗ್ರ ಘಟಕವೇ ಜಾನಪದ ಎನಿಸಿಕೊಳ್ಳುತ್ತದೆ.

     ಕ್ರಿ.ಶ. 9ನೇ ಶತಮಾನದ ಶ್ರೀವಿಜಯನು ತನ್ನ ಕೃತಿ ‘ಕವಿರಾಜಮಾರ್ಗ’ ದಲ್ಲಿ ಕನ್ನಡ ನಾಡಿನ ಜನಪದವನ್ನು ಕುರಿತು:-

       “ಚದುರರ್ ನಿಜದಿಂ ಕುರಿತೋ

        ದದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್”

  ಅಂದರೆ ಕನ್ನಡಿಗರು ಉದ್ದೇಶ ಪೂರ್ವಕ ಕಲಿತವರಲ್ಲದಿದ್ದರೂ ಕಾವ್ಯರಚಿಸಬಲ್ಲ ಚತುರರಾಗಿದ್ದಾರೆ ಎನ್ನುತ್ತಾನೆ. ಅದೇ ಹಿನ್ನೆಲೆಯಲ್ಲಿ ಈಗಲೂ ವಿಶ್ವವಿದ್ಯಾಲಯದ ಪದವಿ ಪಡೆದಿದ್ದರು ಕನ್ನಡಿಗರು ಪಾರಂಪರಿಕವಾದ ವಿದ್ಯೆ, ಜ್ಞಾನ, ಕಲೆಗಳನ್ನು ಇಂದು ತಮ್ಮೊಂದಿಗೆ ಉಳಿಸಿಕೊಂಡು ಬಂದ ಜನಪದರು ಸಿಗುತ್ತಾರೆ.

Jatteppa sabanna hiremani1.            ಅಂಥವರಲ್ಲಿ ಹುನುಗುಂದ ತಾಲೂಕಿನ, ವೀರಾಪುರ ಗ್ರಾಮದ, ಈಗ 70 ವರ್ಷ ವಯಸ್ಸಾಗಿದ್ದರೂ ಉತ್ಸಾಹ ಕುಗ್ಗದ, ಹೊಲಗಳಲ್ಲಿ ಕೊಳವೆಬಾವಿ ತೋಡಿಸಲು ಜಲದ ಮೂಲ ತೋರಿಸುವ ಅಪರೂಪದ ವ್ಯಕ್ತಿ ಶ್ರೀ ಜಟ್ಟೆಪ್ಪ. ಸಾಬಣ್ಣ. ಹಿರೇಮನಿ. ಸರೂರದ ಶ್ರೀ ರೇವಣ ಸಿದ್ದೇಶ್ವರರು ಇವರ ಗುರುಗಳು. ಈ ಗುರುಗಳ ಆಶೀರ್ವಾದದಿಂದಲೇ ಈ ವಿದ್ಯೆಯನ್ನು ಕಲಿತದ್ದಾಗಿ ಇವರು ಅತ್ಯಂತ ಭಕ್ತಿ ಮತ್ತು ಹೆಮ್ಮೆಯಿಂದ ಹೇಳಿಕೂಳ್ಳುತ್ತಾರೆ.

    ಈ ಕೆಲಸ ಆರಂಭಿಸಿ 9 ವರ್ಷಗಳಾದವು. ಈಗಾಗಲೇ ಸುತ್ತಮುತ್ತಲಿನ ಗ್ರಾಮಗಳಾದ ನಾಗೂರು, ಗುಡೂರು, ಯಡಹಳ್ಳಿ, ಅಮೀನಗಡ, ಬದಾಮಿ, ಗಜೇಂದ್ರಗಡ, ಧನ್ನೂರ, ಹುನಗುಂದ, ಇಲಕಲ್ಲ ಮೂದಲಾದ ಇನ್ನು ಹಲವಾರು ಹಳ್ಳಿಗಳಲ್ಲಿ ಇಲ್ಲಿವರೆಗೆ ಸು 200 ಕ್ಕೂ ಹೆಚ್ಚು ಜಲಮೂಲದ ಕೇಂದ್ರಗಳನ್ನು (ತಿಚಿಣeಡಿ ಠಿoiಟಿಣ) ತೋರಿಸಿದ್ದಾರೆ. ಇವರು ತೋರಿದ ಬಹಳಷ್ಟು ಕಡೆಗೆ ಸು: 2 1\2, 3, 3 1/2, 4 ಇಂಚುಗಳಷ್ಟು ನೀರು ಅಲ್ಲಿನ ಭೂಮಿಯಗುಣಧರ್ಮ ಆದರಿಸಿ ದೊರೆತದ್ದುಂಟು. 1-2 ಕಡೆ ಹುಸಿಯಾದದ್ದೂ ಉಂಟು. ಕೆಲವೊಮ್ಮೆ ಮಳೆಗಾಲದಲ್ಲಿ 80 ಫೂಟಿಗೆ; ಬೇಸಿಗೆ ಕಾಲದಲ್ಲಿ 200 ಫೂಟಿಗೆ ನೀರು ಬಿದ್ದದ್ದೂ ಇದೆ.

 ಕೆಲಸ :- ಇವರ ಮುಖ್ಯ ಉದ್ಯೋಗ ಒಕ್ಕಲುತನ; ಈ ನೀರು ತೋರಿಸುವ ಕೆಲಸವನ್ನು ಒಂದು ಪ್ರವೃತ್ತಿಯಾಗಿ ಮಾಡುತ್ತಿದ್ದು; ಯಾವುದೇ ವಸ್ತು ಅಥವಾ ಹಣದ ವ್ಯಾಮೋಹದಿಂದ ಅಲ್ಲ. ತನ್ನನ್ನು ಕರೆದುಕೊಂಡು ಹೋದವರು ತನ್ನ ಉರಿನಿಂದ ಬಂದು ಹೋಗುವ ಬಸ್ ಚಾರ್ಜ ಕೊಟ್ಟರೆ ಸಾಕು. ಏನೋ ಯಾರಾದರು ಅತೀ ಒತ್ತಾಯದಿಂದ ಕೊಟ್ಟರೆ ಅವರು ಕೊಟ್ಟಷ್ಟು ತಕ್ಕೊಳ್ಳುವುದು ಅವರ ಮನಸ್ಸಿನ ಸಮಾಧಾನಕ್ಕಾಗಿ ಮಾತ್ರ ಹೊರತು ಆಸೆಯಿಂದಲ್ಲ. ಏಕೆಂದರೆ ಈ ಕಾರ್ಯ ಮಾಡುತ್ತಿರುವುದು ಇದೊಂದು ಸಾಮಾಜಿಕ ಸೇವೆ ಅಂತಲೇ. ಒಮ್ಮೊಮ್ಮೆ ಹೊಲದ ಮಾಲಿಕರಾಗಲೀ, ಖುಲ್ಲಾ ಜಾಗ ಅಥವಾ ಪ್ಲಾಟಿನ ಮಾಲಿಕರಾಗಲೀ ತಮ್ಮ ವಾಹನದ ಮೇಲೆ ತಾವೇ ಕರೆದೊಯ್ದು, ಹಿಂತಿರುಗಿ ತಂದು ಬಿಟ್ಟರೆ ಸಾಕು, ಯಾವ ಹಣದ ಆಸೆಯೂ ಅವರಿಗಿಲ್ಲ.

ನೀರು ತೋರಿಸುವ ವಿಧಾನ :- 

        ನೀರು ತೋರಿಸಲು ಕರೆದುಕೊಂಡು ಹೋದವರು ಆರಂಭದಲ್ಲಿಯೇ ಪೂಜೆಗಾಗಿ ವಿಭೂತಿ, ಕುಂಕುಮ, ಪತ್ರಿ, ಹೂ, ಊದಬತ್ತಿ ಮೊದಲಾದ ಪೂಜಾ ಸಾಮಗ್ರಿಗಳು, ನೈವೇದ್ಯಕ್ಕಾಗಿ ಬಾಳೆಹಣ್ಣು ತರಬೇಕು. ನೀರು ತೋರಿಸಲು 2 ತೆಂಗಿನಕಾಯಿ, ಒಂದು ಕಬ್ಬಿಣದ ತವಾ, ಪ್ರಸಾದಕ್ಕಾಗಿ ಫಲಾರ (ಚುರಮರಿ, ಪುಠಾಣಿ, ಶೇಂಗಾಕಾಳು, ಬೆಲ್ಲ, ಕಲ್ಲುಸಕ್ಕರೆಗಳ ಮಿಶ್ರಣ) ಒದಗಿಸಬೇಕು.

     ಹೊಲದ ಒಂದು ಬದಿಗೆ ಒಂದು ದೊಡ್ಡ ಕಲ್ಲಿಗೆ ಪೂಜೆ ನೆರವೇರಿಸಿದ ನಂತರ ಪೂಜೆ ಮಾಡಿದ ಕಲ್ಲಿನ ಮುಂದೆ, ಪೂಜೆಗೆ ತಂದ ಒಂದು ತೆಂಗಿನಕಾಯಿಯನ್ನು ತವಾದ ಮೇಲೆ ಇಡಲಾಗುತ್ತದೆ. ಅದರ ಮೇಲೆ ಈ ಜೆಟ್ಟಪ್ಪನು ತಾನಾಗಲೀ; ತನ್ನ ಸಹಾಯಕನಾದ ತನ್ನದೇ ಗ್ರಾಮದ ಹಣಮಂತಪ್ಪ. ಮಡ್ಡೆಪ್ಪ. ವಡಗೇರಿ ಎಂಬವನಾಗಲಿ ಕೂಡ್ರುತ್ತಾರೆ. ಕೂಡ್ರುವ ವಿಧಾನವೆಂದರೆ, ತಮ್ಮ ತುದಿಗಾಲಿನ ಮೂಲಕ ತೆಂಗಿನಕಾಯಿಯ ಮೇಲೆ ಕೈಯ ತುದಿ ಬೆರಳನ್ನು ನೆಲಕ್ಕೆ ಊರಿ ಕೂಡ್ರುತ್ತಾರೆ. ಇವರಲ್ಲದೇ ಬೇರೆಯಾರಾದರೂ ಕೂಡ್ರಬಹುದು. ಆಮೇಲೆ ಈ ಇಬ್ಬರಲ್ಲಿ ಯಾರಾದರೂ ಒಬ್ಬರು ಮತ್ತೊಂದು ತೆಂಗಿನಕಾಯಿಯನ್ನು ಬೊಗಸೆಯಲ್ಲಿ ಭೂಮಿಗೆ ಸಮಾನಾಂತರವಾಗಿ ಮತ್ತು ತೆಂಗಿನ ಜುಟ್ಟು ಮುಂದೆ ಇರುವಂತೆ ಕೈಯಲ್ಲಿ ಹಿಡಿದು; ಪ್ಲಾಟಿನ ಅಥವಾ ಹೊಲದ ಯಾವ ಭಾಗದಲ್ಲಾದರೂ ನಿಧಾನವಾಗಿ ನಡೆಯುತ್ತ ಹೋಗುವಾಗ ಇತ್ತ ತವಾದ ಮೇಲಿನ ತೆಂಗಿನಕಾಯಿ ತಿರುಗಿದಂತೆ ಎನಿಸಿದರೆ ಅವರು ಕೂಗಿ ಹೇಳಿದಾಗ ಅಲ್ಲೆ ನಿಲ್ಲುತ್ತಾನೆ. ಅಂದರೆ ಆತನ ಕಾಲ ಕೆಳಗಿನ ಭೂಮಿಯಲ್ಲಿ ನೀರಿನ ಸೆಲೆಯಿದ್ದರೆ; ಇತ್ತ ತವಾದ ಮೇಲಿನ ತೆಂಗಿನಕಾಯಿ ತಿರುಗ ತೊಡಗುತ್ತದೆ. ನೀರಿನ ಅಂಶ ಬಹಳ ಇದ್ದರೆ ಒಮ್ಮೊಮ್ಮೆ ತೆಂಗಿನಕಾಯಿ ಮೇಲೆ ಕೂತವನನ್ನು ಜೋರಾಗಿ ತಿರುಗಿಸಿ ಒಗೆಯುತ್ತದೆ. ಆಗ ತೆಂಗಿನಕಾಯಿ ಬೊಗಸೆಯಲ್ಲಿ ಹಿಡಿದು ನಿಂತವನ ಜಾಗದಲ್ಲಿ ನೀರಿನ ಸೆಲೆ ಅಥವಾ ಜಲದ ಕಣ್ಣು ಇದೆಯೆಂದು ಒಂದು ಪಾಯಿಂಟನ್ನು ಒಂದು ಕಲ್ಲು ಇಟ್ಟು ಗುರುತಿಸಲಾಗುತ್ತದೆ. ಅಲ್ಲಿಂದ ಆತ ಮತ್ತೆ ಬೇರೆ ಜಾಗಕ್ಕೆ ಹೋಗಿ ನಿಂತಾಗ, ತವಾದ ಮೇಲಿನ ತೆಂಗಿನಕಾಯಿಯ ಮೇಲೆ ಕೂತವನನ್ನು ತಿರುಗಿಸಿದರೆ ಅಲ್ಲೂ ನೀರು ಇದೆ ಎಂದು ಅರ್ಥ. ಆ ಜಾಗದಲ್ಲೂ ಒಂದು ಕಲ್ಲು ಇಟ್ಟು ಗುರುತಿಸಲಾಗುತ್ತದೆ. ಹೀಗೆ ಹೊ¯ದ ಬೇರೆ ಬೇರೆ ಸ್ಥಾನದಲ್ಲಿ ಒಟ್ಟು 5 ಕಡೆಗೆ ಪಾಯಿಂಟಗಳನ್ನು ಗುರುತಿಸಲಾಗುತ್ತದೆ. ಅಂತಿಮವಾಗಿ ಈ 5 ರಲ್ಲಿ ಯಾವ ಸ್ಥಾನದಲ್ಲಿ ನಿಂತಾಗ ತೆಂಗಿನಕಾಯಿ ಹೆಚ್ಚು ತಿರುಗಿಸಿ ಒಗೆದಿರುತ್ತದೋ ಅದು ಹೆಚ್ಚು ಜಲ ಮೂಲದ ಕೇಂದ್ರ ವೆಂದು ಗುರುತಿಸಿ ಅಂತಿಮಗೊಳಿಸಲಾಗುತ್ತದೆ.

       ಈ ಸಂದರ್ಭದ ಸ್ವಾರಸ್ಯಕರ ಸಂಗತಿಯೆಂದರೆ, ತವಾದ ಮೇಲಿನ ತೆಂಗಿನಕಾಯಿಯ ಮೇಲೆ ಕೂತವನನ್ನು ಎಡಕ್ಕೆ ತಿರುಗಿಸಿದರೆ ಭೂಮಿಯಲ್ಲಿ ಕಲ್ಲು ಬಂಡೆಯಿದೆ ಎಂದರ್ಥ; ಬಲಕ್ಕೆ ತಿರುಗಿಸಿದರೆ ಭೂಮಿಯಲ್ಲಿ ಮೆತ್ತನೆಯ ಮಣ್ಣುಯಿದೆಯೆಂದು ಅರ್ಥ.

                ಈ ತವಾದ ತೆಂಗಿನಕಾಯಿಯ ಮೇಲೆ ಬೇರೆಯವರು ಕೂತಾಗ ಕೆಲವರಿಗೆ ಮಾತ್ರ ನೀರಿರುವ ಸ್ಥಾನದಲ್ಲಿ ಕೈಯಲ್ಲಿ ತೆಂಗಿನಕಾಯಿ ಹಿಡಿದವ ನಿಂತಾಗ ತಿರುಗಿಸುತ್ತದೆ; ಇನ್ನು ಕೆಲವರಿಗೆ ತಿರುಗಿಸುವುದಿಲ್ಲ. ಹಾಗಂತ ಅಲ್ಲಿ ನೀರು ಇಲ್ಲವೆಂದು ಅರ್ಥವಲ್ಲ. ಆದ್ದರಿಂದಲೇ ಜಟ್ಟೆಪ್ಪ ಹೇಗೆ ತುದಿ ಬೆರಳಿನ ಮೇಲೆ ಕೂಡ್ರಬೇಕೆಂಬ ಮಾಹಿತಿ ಇರುವ ತನ್ನ ಸಹಾಯಕನಾದ ಹಣಮಂತಪ್ಪನ್ನು ತಾನು ಹೋದಲೆಲ್ಲ ಕರೆದುಕೊಂಡು ಹೋಗುತ್ತಾರೆ.

                ಈ ಮೇಲೆ ಹೇಳಿದಂತೆ 5 ಪಾಯಿಂಟಗಳಲ್ಲಿ ಒಂದನ್ನು ಅಂತಿಮ(ಈiಟಿಚಿಟ) ಗೊಳಿಸಿದ ಜಾಗದಲ್ಲಿ 2 ಫೂಟು ಉದ್ದದ ಅಥವಾ 2 ಮೊಳದ ಒಂದು ಕಟ್ಟಿಗೆಯ ದಪ್ಪ ಗೂಟವನ್ನು ಸ್ವಲ್ಪ ಮೇಲೆ ಕಾಣುವಂತೆ ಬಿಟ್ಟು ಜಡಿಯಲಾಗುತ್ತದೆ. ಕೊನೆಯದಾಗಿ ಈ ಗೂಟದ ಪಕ್ಕದಲ್ಲಿ ಒಂದು ಕಲ್ಲನ್ನು ಇಟ್ಟು ಅದಕ್ಕೆ ನೀರು ಹಾಕಿ ವಿಭೂತಿ, ಕುಂಕುಮ, ಹೂ ಪತ್ರಗಳಿಂದ ಪೂಜಿಸಿ, ಬಾಳೆ ಹಣ್ಣು ನೈವೇದ್ಯ ಮಾಡಿ – 5 ಹಿಡಿ ಪಂಚ ಫಲಹಾರವನ್ನು ಇಟ್ಟು ನೀರು ತೋರಿಸಲೆಂದು ಬೋಗಸೆಯಲ್ಲಿ ಹಿಡಿದ ತೆಂಗಿನಕಾಯಿಯನ್ನು ಒಡೆದು, ಅದರ ಚೂರುಗಳನ್ನು ಫಲಾರದೊಂದಿಗೆ ಬೆರೆಸಿ ಅಲ್ಲಿದ್ದವರಿಗೆಲ್ಲ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ ಇದಕ್ಕೆ ಪನಿವಾರ ಎಂದು ಕರೆಯುತ್ತಾರೆ.

                ಮುಂದೆ ರೈತರು ತಮಗೆ ಅನಕೂಲವಾದ ದಿನದಂದು ಶುಭ ಮುಹೂರ್ತದಲ್ಲಿ, ಈಗಾಗಲೇ ಗೂಟ ಜಡಿದು ಅಂತಿಮಗೊಳಿಸಿದ ಸ್ಥಾನದಲ್ಲಿ ಕೊಳವೆಭಾವಿ(ಃoಡಿeತಿeಟಟ)ಯನ್ನು ತೋಡಿಸುತ್ತಾರೆ. ಹೀಗೆ ಜಲದ ಕಣ್ಣು ತೋರಿಸುವ ಜನಪದ ವ್ಯಕ್ತಿಗೆ ಆಧುನಿಕ ಪರಿಭಾಷೆಯಲ್ಲಿ ಜಲಶಿಲ್ಪಿ ಅಥವಾ ಇಂಜಿನೀಯರ್ ಎಂದೂ ಕರೆಯಬಹುದು. ಏಕೆಂದರೆ ಈತ ಯಾವ ತಂತ್ರಜ್ಞಾನಿಗಿಂತಲೂ ಕರಾರುವಕ್ಕಾಗಿ ನೀರಿನ ಮೂಲವನ್ನು ಗುರುತಿಸುತ್ತಾನೆ. ಈತನ ವಿಧಾನ ಒಂದು ತೆರನಾದರೆ ಬೇರೆ ವಿಧಾನ ಅನುಸರಿಸುವವರು ಇದ್ದಾರೆ.

2.            ಬಾಗಲಕೋಟ ತಾಲ್ಲೂಕಿನ ಶಿರೂರ ಗ್ರಾಮದ ಶ್ರೀ ಎ.ಪಿ. ಬಳೇಗಾರ ಅವರು ಗ್ರಾಮ ಸೇವಕರಾಗಿ ಯಲಬುರ್ಗಾ ತಾಲ್ಲೂಕಿನ ಗೆದ್ದಗೇರಿ ಸರ್ಕಲ್, ಬದಾಮಿ ತಾಲ್ಲೂಕಿನ ಹಂಸನೂರ ಸರ್ಕಲ್, ಹುನಗುಂದ ತಾಲ್ಲೂಕಿನ ಹಿರೇಬಾದವಾಡಗಿ ಸರ್ಕಲ್‍ಗಳಲ್ಲಿ 1960 ರಿಂದಲೇ ಸರಕಾರಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಮ್ಮ ಪ್ರೌಢ ಶಿಕ್ಷಣದ ಜೊತೆಗೆ ಬಿಡುವಿನ ವೇಳೆಯಲ್ಲಿ ಪ್ರಾಚೀನ ಗ್ರಂಥಗಳ  ಮೂಲಕ ಆರೋಗ್ಯ, ಜ್ಯೋತಿಷ್ಯ, ವನಸ್ಪತಿ, ಭೂಮಿ ಆಳದಲ್ಲಿ ಜಲ ಇರುವ ಲಕ್ಷಣಗಳು ಮೊದಲಾದ ವಿಷಯಗಳತ್ತ ಆಸಕ್ತಿಯನ್ನು ತಾಳಿದವರು. ಕುತೂಹಲದಿಂದ ಓದುವ ಪ್ರವೃತ್ತಿ ಹೊಂದಿದರು.

ಮಳೆಗಾಲ ಸಾಕಷ್ಟು ಆಗುವಾಗ ರೈತರಿಗೆ ಬೆಳೆ ಬೆಳೆಯುವುದಕ್ಕೆ  ತೊಂದರೆ ಇರಲಿಲ್ಲ. ಆದರೆ ಪ್ರಕೃತ್ತಿ ಮುನಿಸಿಕೊಂಡು ಮಳೆ ಸರಿಯಾಗಿ ಆಗದೆ ಬರಗಾಲ ಬಿದ್ದಾಗ ರೈತರಿಗೆ ಭೂಮಿಯಲ್ಲಿ ಭಾವಿಯನ್ನು ತೋಡಿ ನೀರಾವರಿ ಮೂಲಕ ಬೆಳೆ ಬೆಳೆಯುವ ಅನಿವಾರ್ಯತೆ ಉಂಟಾಯಿತು. ಆ ಮೂಲಕ ಭಾವಿ ತೋಡಬೇಕೆಂದರೆ- ಭೂಮಿಯ ಆಳದಲ್ಲಿನ ಜಲದ ಮೂಲವನ್ನು ಪತ್ತೆ ಹಚ್ಚುವವರ ಪ್ರಯೋಗಕ್ಕೆ ತೊಡಗಿದರು.

ಸಾಮಾನ್ಯವಾಗಿ 1960ರಿಂದ 1971 ರವರೆಗೆ  ಈ ಬಳಿಗಾರ ಅವರು ತೋಡು ಭಾವಿಗಳಿಗೆ ಜಲದ ಬಿಂದುವನ್ನು ಪತ್ತೆ ಹಚ್ಚಿಕೊಡುವ ಕೆಲಸವನ್ನು ಆರಂಭಿಸಿದರು. ಉದಾಹರಣೆಗಾಗಿ ಗೆದಗೇರಿ ಗ್ರಾಮದ ಶ್ರೀ ನೀಲಕಂಠಪ್ಪ. ಗುರುಬಸಪ್ಪ ಮಸೂತಿಯವರ ಹೊಲದಲ್ಲಿ ಜಲ ಬಿಂದುವನ್ನು ಗುರುತಿಸಿ; 16 ರಿಂದ 20 ಅಡಿಯ ಭಾವಿಯನ್ನು ಅಗೆಸಿದಾಗ ಸಾಕಷ್ಟು ನೀರು ದೊರೆತು ಅವರ ಮನೋಸ್ಥೈರ್ಯವನ್ನು ಮೊದಲ ಬಾರಿಗೆ ಹೆಚ್ಚಿಸಿತು. ಅಲ್ಲಿಂದ ಮುಂದೆ ಬದಾಮಿ ತಾಲ್ಲೂಕಿನ ಹಂಸನೂರು, ಬೇಡರ ಬೂದಿಹಾಳ, ಬದಾಮಿ, ಕುಷ್ಟಗಿ, ಲಿಂಗಸಗೂರು, ಗಂಗಾವತಿ, ಬಸವನ ಬಾಗೇವಾಡಿ, ರೋಣ, ಮುದ್ದೇಬಿಹಾಳ, ಬಾಗಲಕೋಟ, ಹುನಗುಂದ, ಯಲಬುರ್ಗಾ ಮೊದಲಾದ ಹಲವು ಗ್ರಾಮಗಳಲ್ಲಿ ತೆರೆದ ಭಾವಿ ತೋಡುವುದಕ್ಕೆ ಜಲ ಬಿಂದುವಿನ ಸ್ಥಳ ಗುರುತಿಸಿ ಕೊಟ್ಟು ಯಶಸ್ವಿಯಾಗಿದ್ದಾರೆ.

ಮುಂದೆ ಕರ್ನಾಟಕ ಸರಕಾರವು ಏರ್ ಕಾಂಫ್ರೆಶರ್ ಹಾಗೂ ರಿಗ್ ಬೋರ ಮಶಿನ್‍ಗಳ ಮೂಲಕ ಕೊಳವೆ ಭಾವಿಗಳನ್ನು ತೋಡಲು ರೈತರಿಗೆ ಸಾಲ ಮತ್ತು ಸಹಾಯಧನ ಮಂಜೂರ ಮಾಡ ತೊಡಗಿದಾಗ ಅಂತಹ ಕೊಳವೆ ಭಾವಿಗಳಿಗೂ ಜಲದ ಮೂಲವನ್ನು ಶೋಧಿಸಿ ಕೊಟ್ಟು ಸುಮಾರು 80 ರಿಂದ 125 ಅಡಿ ಆಳದ ಕೊಳವೆ ಭಾವಿಗಳನ್ನು ಕೊರೆಯಿಸಿ ಸಾಕಷ್ಟು ನೀರು ಒದಗಿಸಿ ಯಶಸ್ವಿಯಾದಾಗ ಬಹಳಷ್ಟು ಜನ ತಮ್ಮ ಮನೆಯ ಸುತ್ತಲಿನ ಭಾಗದಲ್ಲಿ ಕೊಳವೆ ಭಾವಿಗಳನ್ನು ಕೊರೆಯಿಸಲು ಇವರ ಸಹಾಯವನ್ನು ಪಡೆದುಕೊಂಡಿದ್ದಾರೆ.

ಈ ರೀತಿ ತೆರೆದ ಭಾವಿ ತೋಡುವ ಬದಲಾಗಿ ಕೊಳವೆ ಭಾವಿಗಳನ್ನು ಕೊರೆಯಿಸಬೇಕಾದ ಅನಿವಾರ್ಯತೆ ಮೂಡಿದ್ದು ಏಕೆಂದರೆ ಮಳೆಗಾಲ ಕಡಿಮೆಯಾಗುತ್ತ ಹೋಗಿ ಅಂತರ್ಜಲದ ಮಟ್ಟ ಕುಸಿಯ ತೋಡಗಿದ್ದು ಮುಖ್ಯ ಕಾರಣ. ಆಗ ಅನಿವಾರ್ಯವಾಗಿ ನೀರಿನ ಅವಶ್ಯಕತೆ ಹೆಚ್ಚಾದಾಗ ಭೂಮಿಯ ಆಳದಲ್ಲಿನ ನೀರನ್ನು ಪಡೆಯಲು ಕೊಳವೆ ಭಾವಿಗಳನ್ನು ಕೊರೆಯಿಸುವುದು ಅನಿವಾರ್ಯವಾಯಿತು. ಆ ಹಿನ್ನೆಲೆಯಲ್ಲಿ 1972 ರ ನಂತರದಲ್ಲಿ ಕೊಳವೆ ಭಾವಿಗಳಿಗಾಗಿ ಜಲ ಮೂಲವನ್ನು ಶೋಧಿಸಿ ಕೊಡಲು ಇವರಿಗೆ ಬೇಡಿಕೆ ಜಾಸ್ತಿ ಆಯಿತು. ಗುಳೇದಗುಡ್ಡ ಪಟ್ಟಣದಲ್ಲಿ ನೀರಿನ ಅಭಾವ ತೋರಿದಾಗ ಅಲ್ಲಿನ ಕೆಲವು ಮನೆಗಳ ಮುಂದೆ ಅಂಟರಠಾಣ ಜಾಗದಲ್ಲಿ ಯಶಸ್ವಿಯಾಗಿ ಸಾಕಷ್ಟು ಪ್ರಮಾಣದ ನೀರು ದೊರೆತಾಗ ಇವರಿಗೆ ಬೇಡಿಕೆ ಹೆಚ್ಚಾಯಿತು. ಅಲ್ಲಿಂದ ಮುಂದೆ ಅಡವಿಟಾನಿ ಗ್ರಾಮ ಮೊದಲಾಗಿ ಉತ್ತರ ಕರ್ನಾಟಕದ ಬಹಳಷ್ಟು ಹಳ್ಳಿಗಳಲ್ಲಿ ಆಂದ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲೂ ಇವರ ಜಲ ಶೋಧನೆಯ ಕಾರ್ಯ ಕುಡಿಯುವ ನೀರಿಗಾಗಿ ಮತ್ತು ನೀರಾವರಿಗಾಗಿ ಅತ್ಯಂತ ಯಶಸ್ಸು ಪಡೆಯಿತು.

ಈ ಯಶಸ್ಸಿನಿಂದಲೇ ಅನೇಕ ಶಾಲಾ ಕಾಲೇಜು, ಅಶ್ರಮಗಳು, ಮಂದಿರ-ಮಸೀದಿಗಳು, ಶಿಲ್ಪ ಕಲಾಮಂದಿರ, ಸಾಮಿಲ್ಲು, ಗ್ರಾನೈಟ ಫ್ಯಾಕ್ಟರಿ, ಜಿನ್ನಿಂಗ ಮಿಲ್ಲ, ಬ್ಯಾಂಕು, ಉಗ್ರಾಣ, ಆಸ್ಪತ್ರೆ, ಲಾಜಿಂಗ, ಬೋರ್ಡಿಂಗ ಮತ್ತು ಸಾರ್ವಜನಿಕ ಉಪಯೋಗಕ್ಕಾಗಿ ಮತ್ತು ವೈಯಕ್ತಿಕವಾಗಿ ಮನೆಗಳಿಗೆ ಕೊಳವೆ ಭಾವಿಗಳನ್ನು ಕೊರೆಯಿಸಲು ಜಲಸ್ಥಳ ಗುರುತಿಸಿ ಕೊಟ್ಟಿದ್ದಾರೆ. ಇದರಿಂದಾಗಿ ಎಷ್ಟೋ ಜನ ನೀರಿನ ಸಮಸ್ಯಯಿಂದ ಮುಕ್ತಿ ಪಡೆದಿದ್ದಾರೆ.

ಜಲ ಬಿಂದುವನ್ನು ಗುರುತಿಸುವ ವಿಧಾನಗಳು :

1.  ಹರಳು ಇಲ್ಲದ ಬಂಗಾರದ ಉಂಗುರದಲ್ಲಿ ರೇಶ್ಮೆ ಅಥವಾ ಬಿಳಿಯ ರೀಲು ದಾರವನ್ನು ಹಾಯಿಸಿ 2 ತುದಿಗಳನ್ನು ಸಮಗೊಳಿಸಿ ಎಡಗೈಯ ಹೆಬ್ಬೆರಳು ಮತ್ತು ತೋರ್ಬೆರಳುಗಳಿಂದ ಹಿಡಿದು ಕೊಳವೆ ಭಾವಿ ಕೊರೆಯಿಸುವ ಸ್ಥಳದಲ್ಲಿ ಭೂಮಿಯ ತುಂಬ ಅಡ್ಡಾಡುತ್ತಾರೆ, ಎಲ್ಲಿ ನೀರು ಇರುತ್ತದೋ ಆ ಭಾಗದಲ್ಲಿ ನಿಂತಾಗ 2 ಬೆರಳುಗಳಿಗೆ ಕಂಪನವು ಅಲೆಗಳ ರೂಪದಲ್ಲಿ ಉಂಟಾಗುತ್ತದೆ. ಹೀಗೆ ಎಲ್ಲೆಲ್ಲಿ ಆಗುತ್ತದೋ ಆ ಭಾಗಗಳನ್ನು ಗುರುತಿಸಿ ಹೆಚ್ಚು ಕಂಪನದ ಅನುಭವವಾದ ಜಾಗವನ್ನು ಕೊಳವೆ ಭಾವಿ ತೋಡಿಸಲು ಅಂತಿಮವಾಗಿ ಗುರುತಿಸಲಾಗುತ್ತದೆ. ಕೆಲವೊಮ್ಮೆ ಪುನಃ ಪುನಃ ಪರಿಶೀಲಿಸಿ ಅಂತಿಮಗೊಳಿಸಲಾಗುತ್ತದೆ.

2. Y ಆಕಾರದ ಅತ್ಯಂತ ಎಳೆಯ ಮತ್ತು ಟಿಸಿಲು ಇರುವ ಬೇವಿನಕಡ್ಡಿಯೊಂದನ್ನು ತೆಗೆದುಕೊಂಡು ಮುಂಭಾಗವನ್ನು ಸಮವಾಗಿರುವಂತೆ ಮುರಿದು, ಆ ಕಡ್ಡಿಯನ್ನು ಹೊಕ್ಕಳಿನ ಭಾಗದಲ್ಲಿ ಭೂಮಿಗೆ ಸಮಾನಾಂತರವಾಗಿ 2 ಕೈಗಳಿಂದ ಹಿಡಿದು ಮುನ್ನಡೆಯುವಾಗ ಎಲ್ಲಿ ಆ ಬೇವಿನ ಟಿಸಿಲು ಕಡ್ಡಿಯ 2 ತುದಿಗಳು ಭೂಮಿಯ ಕಡೆಗೆ ಬಹಳಷ್ಟು ಬಾಗುತ್ತವೋ ಅಲ್ಲಿ ನೀರಿನ ಸೆಲೆಯಿರುವ ಸ್ಥಾನವೆಂದು ಗುರುತಿಸಲಾಗುತ್ತದೆ. ಬೇಕಾದರೆ ನಾಲ್ಕೂ ದಿಕ್ಕುಗಳಿಗೆ ಹಿಂದೆ ಸರಿದು ಮೊದಲು ನಿಂತ ಜಾಗದ ಕಡೆಗೆ ನಿಧಾನವಾಗಿ ನಡೆದು ಬಂದು ಖಚಿತ ಪಡೆಸಿಕೊಳ್ಳಬಹುದು. ಯಾವುದೇ ದಿಕ್ಕಿನಿಂದ ಬಂದರು ಕಡ್ಡಿಯ ತುದಿಗಳು ನೆಲಕ್ಕೆ ಜಗ್ಗಿದಾಗ ಪೂರ್ಣ ಬಾಗಿದ ಸ್ಥಳವೇ ಜಲದ ಕಣ್ಣು ಎಂದು ಗುರುತಿಸುತ್ತಾರೆ.

3. ಅಲುಗಿಸಿದರೆ ಬಹಳಷ್ಟು ನೀರು ತುಂಬಿದ ಒಂದು ತೆಂಗಿನಕಾಯಿಯನ್ನು ತಕ್ಕೊಂಡು ಬಲಗೈ ಅಂಗೈಯಲ್ಲಿ ಜುಟ್ಟು ಮುಂದೆ ಇರುವಂತೆ ಭೂಮಿಗೆ ಸಮಾನಾಂತರವಗಿ ತೆಂಗಿನಕಾಯಿಯನ್ನು ಹಿಡಿದು ನಿಧಾನವಾಗಿ ಸಾಗುವಾಗ ನೀರಿನ ಮೂಲ ಇರುವ ಜಾಗದಲ್ಲಿ ಆ ತೆಂಗಿನಕಾಯಿ ಜುಟ್ಟು ಮೇಲಾಗಿ ಎದ್ದು ನಿಲ್ಲುತ್ತದೆ. ಆ ಜಾಗವನ್ನು ಜಲ ಬಿಂದುವಿನ ಸ್ಥಾನ ಎಂದು ಗುರುತಿಸಲಾಗುತ್ತದೆ.

                ಒಮ್ಮೊಮ್ಮೆ ಈ ಮೂರು ವಿಧಾನಗಳ ಮೂಲಕ ಪರಿಶೀಲಿಸಿ ಜಲ ಬಿಂದುವನ್ನು ಗುರುತಿಸುವುದು ಉಂಟು.

ಭೂ ಅಂತರ್ಜಲ ಇರುವ ಲಕ್ಷಣಗಳು:

ಯಾವ ಭೂಮಿಯಲ್ಲಿ ಎತ್ತರವಾಗಿ ಸಮೃದ್ಧವಾಗಿ ಕವಲೊಡೆದು, ಹರವಾಗಿ ಬೆಳೆದ ಹಾಲುಳ್ಳ ಮರಗಳಾದ ಆಲ, ಅರಳಿ, ಅತ್ತಿ,ಬಸರಿ ಮರಗಳು ವಿಫುಲವಾಗಿ ಬೆಳೆದಿರುತ್ತವೋ ಅಥವಾ ಹಾಲುಳ್ಳ ಬಳ್ಳಿಗಳು ಸಮೃದ್ಧವಾಗಿ ಬೆಳೆದು ಗಿಡಮರಗಳಿಗೆ ಸುತ್ತಿರುವೋ ಅಥವಾ ಯಾವ ಗಿಡದ ಕಾಂಡ ಹೆಚ್ಚು ಬಿಳುಪಾಗಿರುತ್ತದೋ ಆ ಜಾಗದಲ್ಲಿ 40 ರಿಂದ 65 ಅಡಿಗಳ ಆಳದಲ್ಲಿ 4 ರಿಂದ 6 ಇಂಚು ನೀರು ಸಿಗುತ್ತದೆ.

 ಯಾವ ಭೂಮಿಯಲ್ಲಿ ಮಧ್ಯಮ ಎತ್ತರದ ಗಿಡ ಮರಗಳು, ಕಂಟಿಗಳು ಇರುತ್ತವೋ ಇಂಥಲ್ಲಿ 180 ರಿಂದ 265 ಅಡಿ ಆಳ ಭಾವಿ ಕೊರೆಯಿಸಿದರು 3 ರಿಂದ 4 ಇಂಚು ನೀರು ಸಿಗುತ್ತದೆ.

ಯಾವ ಭೂಮಿಯಲ್ಲಿ ಗಿಡ ಮರಗಳು ಬೆಳೆಯದೆ ಬಂಜರು ಆಗಿರುತ್ತದೋ ಅಂಥಲ್ಲಿ ಎಷ್ಟು ಆಳ ಭಾವಿ ಕೊರೆದರು ನೀರು ದೊರೆಯುವುದಿಲ್ಲ.

ಇವೆಲ್ಲ ಲಕ್ಷಣಗಳು ಆನಂದಪ್ಪ ಬಳೆಗಾರರ ಅಧ್ಯಯನ ಮತ್ತು ಅನುಭವಗಳಿಂದ ಲಭ್ಯವಾದವುಗಳು. ಅಲ್ಲದೆ ಘಟ್ಟಿಯಾದ ಗಡಸು ಅಥವಾ ಕರಲು ಭೂಮಿಯಲ್ಲಿ ಜಲ ಬಿಂದು ಇರುವುದಿಲ್ಲ. ಬದಲಾಗಿ ಮೆತ್ತನೆಯ ಮಣ್ಣು ಪದರಗಲ್ಲು ಇರುವ ನೆಲದಲ್ಲಿ ಜಲದ ಮೂಲ ಸಮೃದ್ಧವಾಗಿರುತ್ತದೆ ಎನ್ನುತ್ತಾರೆ. ಕೃಷಿ ಸಹಾಯಕನಾಗಿ ಸರಕಾರಿ ಸೇವೆಯಿಂದ ನಿವೃತ್ತರಾದರೂ ಅನೇಕ ವೈದ್ಯ ಜ್ಞಾನ ಪಡೆದ ಇವರು ಒಬ್ಬ ಅದ್ಭುತ ವ್ಯಕ್ತಿ ಎನಿಸುತ್ತಾರೆ.

ಮಾಹಿತಿ ಮೂಲ : ಈ ಇಬ್ಬರೂ ಮಹನೀಯರಿಂದ ಪಡೆದದ್ದು.

ಪ್ರೊ. ಬಿ. ಬಿ. ಕಡ್ಲಿ

ವಿಜಯ ಮಹಾಂತೇಶ ಕಾಲೇಜು   ಹುನಗುಂದ

Leave A Comment