ಔದಾರ್ಯದ ನಿಧಿ ಶ್ರೀ ಬಿ. ಆರ್. ಅರಿಷಿಣಗೋಡಿ

ಚೌಷಷ್ಟಿ (ಅರವತ್ತ್ನಾಲ್ಕು) ಕಲೆಗಳಲ್ಲಿ ‘ನಾಟಕ’ವೂ ಒಂದು. ಸಾಹಿತ್ಯದ ಜನಪ್ರಿಯ ಪ್ರÀ್ರಕಾರವಾದ ನಾಟಕ ಇತರ ಸಾಹಿತ್ಯ ರೂಪಗಳಿಗಿಂತ ಹಾಗೂ ಇನ್ನಿತರ ಕಲೆಗಳಿಗಿಂತ ಭಿನ್ನವೂ ಮತ್ತು ವಿಶಿಷ್ಟವೂ ಆಗಿದೆ. ಅಭಿನಯ, ಸಂಭಾಷಣೆ, ನೃತ್ಯ, ಸಂಗೀತ, ಸಾಹಿತ್ಯ, ದೃಶ್ಯ, ಹಾಗೂ ಹಾಸ್ಯ ಮೊದಲಾದವುಗಳನ್ನೊಳಗೊಂಡ ನಾಟಕವು ಒಂದು ಸಂಕೀರ್ಣ ಕಲೆ ಎನಿಸಿದೆ, ಜೀವಂತ ಕಲೆಯಾದ ನಾಟಕವು ಪ್ರೇಕ್ಷಕರನ್ನು, ನೃತ್ಯಪ್ರಿಯರನ್ನು, ಸಂಗೀತಾಸಕ್ತರನ್ನು, ಸಾಹಿತ್ಯಪ್ರೇಮಿಗಳನ್ನು, ಕಲಾರಸಿಕರನ್ನು, ರಂಗಾಭಿಮನಿಗಳನ್ನು ಆಕರ್ಷಿಸುವ ಪ್ರಭಾವಶಾಲಿ ಮಾಧ್ಯಮ. ಬೇರೇ-ಬೇರೇ ಅಭಿರುಚಿಯನ್ನುಳ್ಳ ಕಲಾರಸಿಕರನ್ನು ಏಕಕಾಲದಲ್ಲಿ ಸಮ್ಮೋಹನಗೊಳಿಸಿ, ಅವರ ಮನೋಧರ್ಮಕ್ಕನುಸಾರವಾದ ಆನಂದವನ್ನುಂಟು ಮಾಡುವುದಾಗಿದೆ, ಅದಕ್ಕಾಗಿಯೇ ಕಾಳಿದಾಸ ಮಹಾಕವಿಯು “ನಾಟ್ಯಂ ಭಿನಗನರುಚೇರ್ಜನಸ್ಯ ಬಹುಧ್ಯಾಪೇಕಂ ಸಮಾರಾಧನಂ” ಎಂದಿರುವುದು. ಈ ಕಾರಣಕ್ಕಾಗಿ ನಾಟಕ ಇತರ ಸಾಹಿತ್ಯಪ್ರಕಾರಗಳಿಗಿಂತ ಜನಪ್ರಿಯವಾದುದು, ‘ಕಾವ್ಯೇಷು ನಾಟಕಂ ರಮ್ಯಂ’ ಎಂದು ಕಾಳಿದಾಸನು ಹೇಳಿರುವುದು ಈ ಅರ್ಥದಲ್ಲಿಯೇ.
ನಾಟಕವನ್ನು ಪ್ರದರ್ಶಿಸುವ ‘ರಂಗಭೂಮಿ’ಗೆ ಜಾಗತಿಕ ಪರಂಪರೆಯಿದೆ, ಭಾರತೀಯ ಸಾಂಸ್ಕ್ರತಿಕ ಸಂಪತ್ತಿನಂತಿರುವ ರಂಗಭೂಯು ಬಹು ವೈವಿಧ್ಯಮಯವಾದ ವೈಶಿಷ್ಟವನ್ನು ಹಂದಿದೆ, ಈ ಮಾತು ಕರ್ನಾಟಕದ ವೃತ್ತಿರಂಗಭೂಮಿಗೂ ಅನ್ವಯವಾಗುತ್ತದೆ. ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಜನ್ಮತಳೆದ ಕರ್ನಾಟಕ ವೃತ್ತಿರಂಗಭೂಮಿಯು ಅಂದಿನಿಂದ ಇಂದಿನವರೆಗೆ ಹಲವಾರು ಬದಲಾವಣೆ, ನೂತನ ಪ್ರಯೋಗ, ವೈವಿಧ್ಯತೆ ಮೊದಲಾದವುಗಳಿಂದ ದಾಖಲೆ ನಿರ್ಮಿಸುತ್ತ ಮುನ್ನಡೆದಿದೆ. ಇದಕ್ಕೆ ವೃತ್ತಿ ನಾಟಕಕಾರರಮ ವೃತ್ತಿ ಕಲಾವಿದರÀ, ಕಂಪನಿಯ ಯಜಮಾನರ, ನಿರ್ದೇಶಕರ ಶ್ರದ್ಧೆ, ಪರಿಶ್ರಮ, ಪ್ರಮಾಣಿಕ ಪ್ರಯತ್ನ ಕಾರಣ ಎನ್ನಬೇಕು.
ವೃತ್ತಿರಂಗಭೂಮಿಯ ಬೆಳವಣೀಗೆಗೆ ಅಹೋರಾತ್ರಿ ಶ್ರಮಿಸಿದ ನಾಡಿನ ಹಿರಿಯ ರಂಗಕರ್ಮಿಗಳಲ್ಲಿ ಗುಬ್ಬಿವೀರಣ್ಣ ಪ್ರಶಸ್ತಿ ವಿಜೇತ ನಾಟಕಕಾರರಾದ ಶ್ರೀ ಬಿ. ಆರ್. ಅರಿಷಿಣಗೋಡಿಯವರು ಒಬ್ಬರು. ಕಮತಗಿಯ ಶ್ರೀ ಹುಚ್ಚೇಶ್ವರ ನಾಟ್ಯ ಸಂಘದ ಒಡೆಯರಾದ ಬಿ.ಆರ್. ಅರಿಷಿಣಗೋಡಿಯವರು ಉತ್ತರ ಕರ್ನಾಟಕದ ಗಮನಾರ್ಹ ನಾಟಕಕಾರರು. ಬಹುಮುಖ ವ್ಯಕ್ತಿತ್ವದ ಅವರು ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ, ಕಂಪನಿಯ ಮಾಲೀಕರಾಗಿ ವೃತ್ತಿರಂಗಭೂಮಿಗೆ ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾದುದು. ಸಾಮಾಜಿಕ ನಾಟಕಕಾರರೆಂದೇ ಖ್ಯಾತರಾದ ಅರಿಷಿಣಗೋಡಿಯವರು ಲಂಚ ಸಾಮ್ರಾಜ್ಯ, ಗರೀಬಿ ಹಟಾವೋ,ಬಸ್ ಕಂಡಕ್ಟರ್, ಹೆಣ್ಣುಮಗಳು, ಸೈನಿಕರ ಸಹೋದರಿ, ಸಂಗ್ಯಾ- ಬಾಳ್ಯಾ,ಎಲ್ಲಿಗೆ ಬಂತೋ ಸಂಗಯ್ಯ, ಗಂಡೆದೆಯ ಗೌರಿ, ನಕಲಿ ಸಂಪನ್ನರು, ಬಡವರು ನಗಬೇಕು, ಮೊದಲಾದ ಜನಪ್ರಿಯ ನಾಟಕಗಳನ್ನು ರಚಸಿದ್ದಾರೆ, ಇವು ಅವರ ಕಂಪನಿಯಲ್ಲಿ ಜಯಭೇರಿ ಗಳಿಸಿದ್ದಲ್ಲದೆ ಕನ್ನಡ ನಾಡಿನ ಅನೇಕ ನಾಟಕ ಮಂಡಳಿಗಳಲ್ಲಿ ಅದ್ದೂರಿಯಾಗಿ ಪ್ರಯೋಗಗೊಂಡಿವೆ. ಬಸ್ ಕಂಡಕ್ಟರ್, ಗರೀಬಿ ಹಟಾವೋ, ಲಂಚಸಾಮ್ರಾಜ್ಯ-ಎನ್ನುವ ನಾಟಕಗಳಂತೂ ನಾಡಿಗೆ ಮನೆಮಾತಾದವುಗಳು.
ಅರಿಷಿಣಗೋಡಿಯವರು ತಾವು ರಚಿಸಿದ ಹಾಗೂ ಇತರ ನಾಟಕಕಾರರು ಬರೆದ ನಾಟಕಗಳನ್ನು ಅತ್ಯಂತ ಸಮರ್ಥವಾಗಿ ನಿರ್ದೇಶಿಸಿದ ಶ್ರೇಷ್ಟ ನಿರ್ದೇಶಕರು, ಅತ್ಯುತ್ತಮ ಹಾಸ್ಯ ಕಲಾವಿದರಾದ ಅವರು ಪ್ರಸಿದ್ಧ ಹಿನ್ನಿಲೆಯ ಗಾಯಕರೂ ಆಗಿದ್ದರು, ತಮ್ಮ ನಟನೆ, ನಿರ್ದೇಶನ, ನಾಟಕ ರಚನೆ ಮೊದಲಾದವುಗಳಿಗಾಗಿ ನಾಟ್ಯಕಲಾಭೂಷಣ, ನಾಟಕ ಕಲಾಪ್ರವೀಣ, ಪ್ರತಿಭಾಶ್ರೀ ಮೊದಲಾದ ವಿಶೇಷಣಗಳಿಗೆ ಭಾಜನಾರಾಗಿದ್ದಾರೆ. ಅಲ್ಲದೆ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿಗಳನ್ನು ಪಡೆದ ಹಿರಿಮೆ ಅವರದು,
ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಅರಿಷಿಣಗೋಡಿಯವರು ಸುಸಂಸ್ಕ್ರತರು, ತಮ್ಮ ಮನೆಗೆ ಬಂದವರನ್ನು ಗೌರವದಿಂದ ಸ್ವಾಗತಿಸಿ, ಅವರನ್ನು ಉಪಚರಿಸುವ ಅವರ ಸಭ್ಯತನ ಇತರರಿಗೆ ಅನುಕರಣೀಯವಾಗಿದೆ. ಸರಳರು, ನಿರ್ಗರ್ವಿಗಳು ಆದ ಅವರು ಮಾನವೀಯತೆಯ ಸಾಕಾರ ಮೂರ್ತಿ ಯಾಗಿದ್ದಾರೆ. ಬಿ. ಆರ್. ಅರಿಷಿಣಗೋಡಿಯವರ ಔದಾರ್ಯಕ್ಕೆ, ಮಾನವೀಯ ಸ್ಪರ್ಶಕ್ಕೆ ಇಲ್ಲಿ ಉಲ್ಲೇಖಿಸುವ ಒಂದು ಪ್ರಸಂಗವೇ ಸಾಕ್ಷಿ.
ನಾನು ’ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ’ಯ ಬಗ್ಗೆ ಸಂಶೋಧನೆ ಕೈಗೊಂಡಿದ್ದಾಗ ವಿಷಯ ಸಂಗ್ರಹಣೆಗೆಂದು ಬಿ,ಆರ್. ಅರಿಷಿಣಗೋಡಿ ಅವರ ಮನೆಗೆ ಹೋಗಿದ್ದೆ. ನನಗೆ ಆದರದ ಆತಿಥ್ಯ ನೀಡಿ ಉಪಯುಕ್ತ ಮಾಹಿತಿಯನ್ನು ಒದಗಿಸಿ ಉಪಕಾರ ಮಾಡಿದ್ದಾರೆ. ನಾನು ಅವರನ್ನು ಸಂದರ್ಶನ ಮಾಡಲು ಹೋಗಿದ್ದಾಗ ಗೋಕಾಕದ ಶಾರದಾ ನಾಟಕ ಕಂಪನಿಯ ವೈಭವದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಮಂಡಳಿಯ ಯಜಮಾನ ಹೊಸಮನಿ ಬಸವರಾಜಪ್ಪನವರು ಅದಕ್ಕಾಗಿ ಶ್ರಮಿಸಿದ ರೀತಿಯನ್ನು ಮುಕ್ತ ಕಂಠದಿಂದ ಹೊಗಳಿದ್ದು, ಆ ಸಂಸ್ಥೆಗೆ ಬಂದೊದಗಿದ ಹೀನಸ್ಥಿತಿಯ ಬಗೆಗೆ ಮಮ್ಮಲ ಮರುಗಿದ್ದು ಇಂದಿಗೂ ನನ್ನ ನೆನಪಿನಂಗಳಲ್ಲಿ ಹಚ್ಚ ಹಸಿರಾಗಿ ನಿಂತಿದೆ, ’ಆಯಗಾರರಿಗೆ ಆಯಗಾರರು ಸೇರುವುದಿಲ್ಲ’ ಎನ್ನುವ ಲೋಕೋಕ್ತಿಯಂತೆ ಒಂದು ನಾಟಕ ಮಂಡಳಿಯ ಏಳಿಗೆ, ಕೀರ್ತಿ, ಯಶಸ್ಸನ್ನು ಕಂಡು, ಕೇಳಿದ ಮತ್ತೊಂದು ನಾಟಕ ಕಂಪನಿಯವರು ಮೂಗು ಮುರಿಯುವ ಸನ್ನಿವೇಶ ಇದ್ದಾಗಲೂ ಅರಿಷಿಣಗೋಡಿಯವರು ಹಾಗೆ ಮಾಡಲಿಲ್ಲ. ಇದು ಅವರಲ್ಲಿದ್ದ ಬಹುದೊಡ್ಡ ಔದಾರ್ಯಗುಣ.
ಗೋಕಾಕ ’ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ’ ನಾಡಿನ ಶ್ರೇಷ್ಟ ವ್ರತ್ತಿ ನಾಟಕ ಕಂಪನಿ. ಗುಬ್ಬಿ ಕಂಪನಿಯಷ್ಟೇ ಸಮರ್ಥವಾದ ಮಂಡಳಿ. 1933ರಲ್ಲಿ ಹೊಸಮನಿ ತುಕಾರಾಂ ಬುವಾ ಅವರಿಂದ ಕಂಪನಿ ಸ್ಥಾಪಿತವಾಯಿತು. ನಂತರ ಅದು ’ವೃತ್ತಿರಂಗಭೂಮಿಯ ಭೀಷ್ಮ’ ಖ್ಯಾತಿಯ ಬಸವರಾಜಪ್ಪ ಹೊಸಮನಿಯವರ ನೇತೃತ್ವದಲ್ಲಿ ಕನ್ನಡ ನಾಡಿನ ಉದ್ದಗಲಕ್ಕೂ ಹೆಸರುವಾಯಾಯಿತು, ಐದು ದಶಕಗಳ ಕಾಲ ವೈಭವ, ಅದ್ದೂರಿತನದಿಂದ ಮೆರೆದು ವೃತ್ತಿರಂಗಭೂಮಿಗೆ ಅನನ್ಯ ಕೊಡುಗೆಗಳನ್ನು ನೀಡಿತು. ಆದರೆ 1980 ರ ದಶಕದಲ್ಲಿ ಕಂಪನಿ ಅನುಭವಿಸಿದ ಕಷ್ಟ ಹೇಳತೀರದು. ಅಂತಹ ಪ್ರಸಂಗದಲ್ಲೂ ಉದಾರಿಗಳು ಸಹಾಯದ ಹಸ್ತ ನೀಡಿ ಅದರ ಪುನಶ್ಚೇತನಕ್ಕೆ ಕಾರಣರಾಗಿದ್ದಾರೆ. ಅವರಲ್ಲಿ ಬಿ. ಆರ್. ಅರಿಷಿಣಗೋಡಿಯವರು ಒಬ್ಬರು.
1986ರಲ್ಲಿ ಶಾರದಾ ಕಂಪನಿ ಬೈಲಹೊಂಗಲ್ ಕ್ಯಾಂಪ್ ಮಾಡಿತ್ತು. ಆಗ ಸಂಸ್ಥೆಯ ಪರಿಸ್ಥಿತಿ ಅಷ್ಟೊಂದು ಸರಿಯಿರಲಿಲ್ಲ. ಅಲ್ಲಿ ಮಂಡಳಿಯು ಸಾಕಷ್ಟು ಹಾನಿಯನ್ನು ಅನುಭವಿಸಿ, ತೊಂದರೆದಾಯಕ ಸ್ಥಿತಿಯಲಲಿತ್ತು. ಅಲ್ಲಿಂದ ಬೇರೆ ಕಡೆ ಕ್ಯಾಂಪ್ ಮಾಡಲು ಹಣವಿರಲಿಲ್ಲ. ಅದಕ್ಕೆ ಬೇರೊಬ್ಬರಿಂದ ಹಣದ ಸಹಾಯಬೇಕಿತ್ತು. ಹೀಗಿದ್ದಾಗ ಬಸವರಾಜಪ್ಪನವರು ಒಂದು ದಿನ ಮಧ್ಯಾಹ್ನ, ಗೋಕಾಕದಲ್ಲಿ ವಾಸ್ತವ್ಯ ಮಾಡಿದ್ದ ಕಮತಗಿಯ ಶ್ರೀ ಹುಚ್ಚೇಶ್ವರ ನಾಟ್ಯ ಸಂಘದ ಒಡೆಯರಾದ ಬಿ. ಆರ್. ಅರಿಷಿಣಗೋಡಿಯವರ ಹತ್ತಿರ ಬಂದರು. ಆ ಸಮಯದಲ್ಲಿ ಅರಿಷಿಣಗೋಡಿಯವರು ಊಟ ಮಾಡುತ್ತಿದ್ದರು. ಸಪ್ಪುಮೋರೆ ಹಾಕಿಕೊಂಡು ತಮ್ಮಲ್ಲಿಗೆ ಬಂದ ಬಸವರಾಜನನ್ನು ಊಟಕ್ಕೆ ಕರೆದರು. ಆಗ ಬಸವರಾಜಪ್ಪನವರು ‘ನನ್ನದೊಂದು ಮಾತಿದೆ ಅದನ್ನು ಪೂರೈಸುತ್ತೆನೆಂದರೆ ಊಟ ಮಾಡುವೆ’ ಎಂದರಂತೆ. ಅದಕ್ಕೆ ಅರಿಷಿಣಗೋಡಿಯವರು ಒಪ್ಪಿದರು, ಬಾಯಲಲಿ ತುತ್ತು ಇಟ್ಟುಕೊಳ್ಳುತ್ತಮ ಕಣ್ಣೀರು ಸುರುಸುತ್ತಲೆ “ಭೀಮಣ್ಣ ನನಗೆ ಬಹಳ ತ್ರಾಸ್ ಆಗಿದೆ. ಕಂಪನಿ ನಷ್ಟದಲ್ಲಿದೆ. ಅದಕ್ಕಾಗಿ ಸದ್ಯ ನನಗೆ ಐದು ಸಾವಿರ ರೂಪಾಯಿ ಕೊಡ’ ಎಂದು ಬಸವರಾಜಪ್ಪ ಕೇಳಿದರಂತೆ. ಅವರ ಕಷ್ಟವನ್ನು ಕೇಳಿ ನಿಮಗೆ ಇಂಥ ದುಃಸ್ಥಿತಿ ಬರಬಾರದಾಗಿತ್ತು ಎಂದು ವ್ಯಥೆಪಡುತ್ತ ಅವರನ್ನು ಸಮಾಧಾನಪಡಿಸಿ ಐದು ಸಾವಿರ ರೂಪಾಯಿಗಳನ್ನು ಕೊಟ್ಟರಂತೆ. ಆ ಹಣದಿಂದ ಬಸವಣ್ಣೆಪ್ಪನವರಿಗೆ ತಮ್ಮ ಮಂಡಳಿಯನ್ನು ಸಂಪಗಾವಿಗೆ ತರಲು ಸಾಧ್ಯವಾಯಿತು.
ತಾವು ಒಂದು ಕಂಪನಿಯ ಮಾಲೀಕರಾಗಿ, ತಮ್ಮ ನಾಟಕ ಮಂಡಳಿಯೊಂದಿಗೆ ಪೈಪೋಟಿ ಮಾಡುತ್ತಿದ್ದ ಕಂಪನಿಯ ಯಜಮಾನರ ಹತ್ತಿರ ಸಹಾಯ ಕೇಳುವುದು ಸರಿಯಲ್ಲೆನಿಸಿದರೂ ಕಂಪನಿಯ ಉಳಿವಿಗಾಗಿ ಬಸವರಾಜಪ್ಪನವರು ತಮ್ಮ ಸ್ವಾಭಿಮಾನವನ್ನು ಮರೆತು ಅರಿಷಿಣಗೋಡಿಯವರಿಂದ ನೆರವು ಬಯಸಿದರು. ‘ಕಷ್ಟದಲ್ಲಿದ್ದವರಿಗೆ ಸಹಾಯ ಕೇಳುವುದು ಸರಿಯಲ್ಲೆನಿಸಿದರೂ ಕಂಪನಿ ಉಳಿವಿಗಾಗಿ ಬಸವರಾಜಪ್ಪ, ಭೀಮಣ್ಣ ಇವರಿಬ್ಬರಿಗೆ ಕಂಪನಿ, ಕಲೆ ಮುಖ್ಯವಾಗಿತ್ತು, ಹೊರತು ಸ್ವಾಭಿಮಾನ, ಹಣ ಪ್ರಧಾನವಾÀಗಿರಲಿಲ್ಲ. ಅದಕ್ಕಾಗಿ ಬಸವರಾಜಪ್ಪನವರು ಕಲೆಗಾಗಿ ಸ್ವಾಭಿಮಾನ ಬಿಟ್ಟು ಸಹಾಯ ಕೇಳಿದರು. ಕಲೆ ಉಳಿಸಲು ಅರಿಷಿಣಗೋಡಿಯವರು ಉದಾರಹಸ್ತ ನೀಡಿದರು.
ಕಲೆಯನ್ನು ಉಳಿಸುವುದಕ್ಕಾಗಿ, ಬೆಳೆಸುವುದಕ್ಕಾಗಿ ಕಲಾವಿದರು ಎಂತಹ ತ್ಯಾಗಕ್ಕಾದರೂ ಸಿದ್ದರೆಂಬುದನ್ನು ಈ ದೃಷ್ಟಾಂತವೊಂದರ ಮೂಲಕ ತಿಳಿಸಬಹುದಾಗಿದೆ.
ಬಸವರಾಜಪ್ಪನವರ ಸ್ವಾಭಿಮಾನದ ತ್ಯಾಗಕ್ಕಿಂತಲೂ ಅರಿಷಿಣಗೋಡಿಯವರ ಸಹಾಯ ಗುಣ ದೊಡ್ಡದ್ದು. ‘ಕಷ್ಟದದಲ್ಲಿದ್ದವರಿಗೆ ಕೈಲಾಸದಷ್ಟು ಸಹಾಯ ಮಾಡುವುದೆ ಮಾನವೀಯತೆ’ ಎಂದು ತಿಳಿದವರು. ಈ ವಿಚಾರವನ್ನು ಒಂದು ತತ್ವವನ್ನಾಗಿಸಿಕೊಂಡು ಅದನ್ನು ತಮ್ಮ ಜೀವನದುದ್ದಕ್ಕೂ ಸಾಕಾರಗೊಳಿಸುತ್ತ ಸಾಗಿದ್ದಾರೆ.
ಅಂಥವರು 16-6-2013 ರಂದು ಅಮೀನಗಡದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಹುನಗುಂದ ತಾಲೂಕ ಘಟಕದ 3ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಸಂತಸದ ಸಂಗತಿ. ಕಲೆಗಾಗಿ ಜೀವನವನ್ನೇ ಮುಡುಪಾಗಿಟ್ಟು, ಕಲಾಪರಿಮಳವನ್ನು ಪಸರಿಸುವಂತೆ ಮಾಡಿದ ಶ್ರೀ ಬಿ.ಆರ್. ಅರಿಷಿಣಗೋಡಿಯವರಿಗೆ ಈ ಪದವಿ ಸಂದುದು ನಿಜಕ್ಕೂ ಅರ್ಹವಾದುದು. ಶ್ರೀಯುತರ ಅಧ್ಯಕ್ಷತೆಯಲ್ಲಿ ಜರುಗುತ್ತಿರುವ ಹುನಗುಂದ ತಾಲೂಕಿನ ಈ ಸಮ್ಮೇಳನ ಯಶಸ್ವಿಯಾಗಲಿ ಎಂದು ಆಶಿಸುವೆ.

– ಡಾ|| ಎಂ. ಬಿ. ಒಂಟಿ
ಕನ್ನಡ ಪ್ರಾಧ್ಯಾಪಕರು
ವ್ಹಿ.ಎಂ.ಎಸ್.ಆರ್.ವ್ಹಿ. ಕಾಲೇಜು, ಹುನಗುಂದ

Comments
One Response to “ಔದಾರ್ಯದ ನಿಧಿ ಶ್ರೀ ಬಿ. ಆರ್. ಅರಿಷಿಣಗೋಡಿ”
  1. manjunath olekar says:

    ಧನ್ಯವಾದಗಳು ಸರ್

Leave A Comment