ಸುತ್ತೋಣ ಬನ್ನಿ ನಮ್ಮೂರ ದೇವಾಲಯ

ಸುತ್ತೋಣ ಬನ್ನಿ ನಮ್ಮೂರ ದೇವಾಲಯ

ದಿಟ———–ನಾನು ಅಂದುಕೊಂಡಿರಲಿಲ್ಲ. ಇಷ್ಟೊಂದು ಬಗೆ ಬಗೆಯ ದೇವಸ್ಥಾನಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆ ಎಂದು. ಶತಮಾನಗಳ ಹಿಂದೆ ಕಣ್ಣೋಡಿಸಿದಾಗ  ಕಾಣುವ ಅಂದಕ್ಕೂ ಈಗಿನ ಚಂದಕ್ಕೂ ಅಜಗಜಾಂತರ ವ್ಯತ್ಯಾಸ. ಈಗ ಇಲ್ಲಿನ ಚಿತ್ರಣವೇ ಬದಲಾಗಿದೆ ಗೊತ್ತೇ? ಈ ಊರವರು  ಈಗ ಗತ್ತಿನಿಂದ ಹೇಳುತ್ತಾರೆ. ನಮ್ಮೂರಲ್ಲಿಯೂ ಹಳೆ-ಹೊಸ ದೇವಸ್ಥಾನಗಳಿವೆ ನೋಡ ಬನ್ನಿ ಅಂತ. ಇಲ್ಲಿ ಏನೆಲ್ಲಾ ಕಾಯಕಲ್ಪಗಳಾಗಿವೆ.

ಈ ಹುನಗುಂದ ಗ್ರಾಮದ ದೇಗುಲಗಳನ್ನು ನೋಡಿದರೆ, ನಾವೆಲ್ಲ ಅಂದುಕೊಳ್ಳಲೇಬೇಕಾಗುತ್ತದೆ. ನಮ್ಮ ಪೂರ್ವಜರು ಹೇಳುವಂತೆ ಸೃಷ್ಠಿ, ಸ್ಥಿತಿ,ಲಯ ಇವೆಲ್ಲವು ಸತ್ಯ ಅಂತ.

ಈ ಪವಾಡ ಹೇಗೆ ಸಾಧ್ಯವಾಯಿತು? ಮನಸ್ಸಿದ್ದಲ್ಲಿ ಮಾರ್ಗವಿದೆ. ಪ್ರೀತಿ ಇಟ್ಟು ಮಾಡುವ ಕೆಲಸದಲ್ಲಿ ಯಶಸ್ಸಿದೆ. ನಮ್ಮ ನಾಡು, ನುಡಿ, ಸಂಸ್ಕೃತಿ ಉಳಿದರೆ ನಾವು ಉಳಿಯುತ್ತೇವೆ ಎಂಬ ಅರವಿನ ಹರವು ಹೊಂದಿದ  ಜನರ ಸತತ ಪ್ರಯತ್ನದಿಂದ ಸಾಧ್ಯವಾಗಿದೆ.

ಹಳದಿ ಬಣ್ಣದ ಅಭ್ರಕದಿಂದಾಗಿ ಹೊನ್ನಿನಗುಂದ, ಹೊನ್ನಕುಂದ ಕ್ರಮೇಣ ಹುನಗುಂದವಾದ ಈ ನಗರ ಕ್ರಿ.ಶ 1074 ರಲ್ಲಿಯ 2 ನೇ ಸೋಮೇಶ್ವರನ  ಆಳ್ವಿಕೆಯಲ್ಲಿಯ ಶಾಸನ ಒಂದರಲ್ಲಿ ಪೊನ್ನಗುಂದ 20 ಆಡಳಿತ ವಿಭಾಗದ ರಾಜಧಾನಿಯಾಗಿದ್ದ ಈ ನಗರದ ಮಠ, ಮಾನ್ಯಗಳು ಹಾಗೂ ಇತರ ಧಾರ್ಮಿಕ ಸಂಸ್ಥೆಗಳು ವ್ಯಕ್ತಿಯ ಮತ್ತು ಸಮಷ್ಠಿಯ ಬದುಕಿನಲ್ಲೂ ಸುಖ ಶಾಂತಿ, ನೆಮ್ಮದಿ, ಆತ್ಮಜ್ಞಾನ ಒದಗಿಸುವಲ್ಲಿ ನಮ್ಮ ಬದುಕಿಗೆ ಪೂರಕವಾಗಿವೆ. ಇವುಗಳ ಆಶ್ರಯದಲ್ಲಿ ಧರ್ಮ ಜಾಗೃತಿ ಜ್ಞಾನದಾಸೋಹ, ಧಾರ್ಮಿಕ ಪುರುಷರ ಜಯಂತಿಗಳು, ಮಾಸಾಚರಣೆ ಮುಂತಾದ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು. ಅವುಗಳನ್ನು ಒಂದೊಂದಾಗಿ ವಿವೇಚಿಸುವಾ.

ಹುನಗುಂದದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳು ಒಟ್ಟು 8.Ramalinga Temple

ಮಾರುತೇಶ್ವರ ದೇವಸ್ಥಾನಗಳು–5

ರಾಮಲಿಂಗೇಶ್ವರ ದೇವಸ್ಥಾನ–1

ಸಂಗಮೇಶ್ವರ ದೇವಸ್ಥಾನ–1

ರುಕ್ಮಿಣಿ ಪಾಂಡುರಂಗ ದೇವಸ್ಥಾನ–1

ತ್ರಿಕೂಟೇಶ್ವರ ದೇವಾಲಯ(ರಾಮಲಿಂಗೇಶ್ವರ ದೇವಸ್ಥಾನ)

ಮೂರು ಲಿಂಗಗಳು ಇಲ್ಲಿ ಇರುವದರಿಂದ ಇದಕ್ಕೆ ತ್ರಿಕೂಟೇಶ್ವರ ಎಂಬ ಹೆಸರು ಬಂತೆಂದು ಹೇಳುತ್ತಾರೆ. ಗುಡ್ಡದ ಕೆಳಗೆ ಕೋಟೆಯ ಭಾಗದಲ್ಲಿ ರಾಮಲಿಂಗ ದೇವಾಲಯವಿದ್ದು, ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ.  ಈ ದೇವಾಲಯವು  ವಿಶಾಲವಾದ ಪ್ರಾಂಗಣವನ್ನು ಹೊಂದಿದ್ದು, ನವರಂಗದಲ್ಲಿ ಚೌರಸ ಸ್ಥಂಭಗಳು ಇದ್ದುವೆಂದೂ, ಆದರೆ ಈಗ 8 ಕಂಬಗಳು ಮಾತ್ರ ನೋಡಲು ಸಿಗುತ್ತವೆ. ಈ ದೇವಾಲಯದ ನವರಂಗದ ಛತ್ತಿನಲ್ಲಿರುವ ಶಾಸನವು ಕ್ರಿ.ಶ. 1074ರಲ್ಲಿ 2 ನೇ ಸೊಮೇಶ್ವರನ ಆಳ್ವಿಕೆಯಲ್ಲಿ ಸೂರಸ್ತಗಣ ಜೈನ ಪಂಡಿತ ಆರ್ಯನಂದಿ ಭಟ್ಟಾರಕನ ಶಿಷ್ಯನಾಗಿದ್ದ ಆರ್ಯ ಪಂಡಿತನು ಪೊನ್ನಗುಂದ 30 ಆಡಳಿತ ವಿಭಾಗದ ರಾಜಧಾನಿಯಾಗಿದ್ದ ಪೊನ್ನಗುಂದದಲ್ಲಿ ಅರಸರ ಬಸದಿಗೆ ನೀಡಿದ ಭೂದಾನವನ್ನು ಉಲ್ಲೇಖಿಸುತ್ತದೆ. ಈ ಶಾಸನದಲ್ಲಿ ಶ್ರೀಕರಣ ದೇವನಾಯ್ಕ ಪೆರ್ಗಡೆ ನಾಕಿಮಯ್ಯ, ಪೆರ್ಗಡೆ ರೇವಣಯ್ಯ,  ಕರಡ ಅಚಪಯ್ಯನಾಯಕ ಎಲ್ಲಾ ಪ್ರಧಾನರುಗಳು ಮಹಾಮಂಡೇಶ್ವರ ಲಕ್ಷಮರಸ ಮೊದಲಾದ ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಈ ಶಾಸನವು ಉತ್ತಮ ಸಾಹಿತ್ಯ ಶೈಲಿಯನ್ನು ವ್ಯಕ್ತಪಡಿಸುತ್ತದೆ. ಈ ದೇವಸ್ಥಾನದ ಗರ್ಭ ಗೃಹವು ಭೂ ಮಟ್ಟದಿಂದ ಕೆಳಗಿದೆ. ಗರ್ಭ ಗುಡಿಯ ದ್ವಾರದ ಎಡ ಬಲದಲ್ಲಿ ವಿಶೇಷ ಕುಸುರಿನ ಕೆಲಸದಿಂದ ಕೂಡಿದ ಆಯತಾಕಾರದ ಕಪ್ಪು ಶಿಲಾ ಕಂಬಗಳಿವೆ. ಗರ್ಭ ಗುಡಿಯಲ್ಲಿ ರಾಮಲಿಂಗ ( ಈಶ್ವರ ) ಇದೆ. ಗುಡಿಗೆ ಗೋಪುರವಿದೆ.

ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ, ಹಾಗೂ ಶಿವರಾತ್ರಿಯ ದಿನ ಭಜನೆ, ರುದ್ರಾಭಿಷೇಕಗಳು ನಡೆಯುತ್ತವೆ. ಗುಡಿಯು ಜೀರ್ಣೋದ್ಧಾರಗೊಂಡಿದ್ದು, ಅನೇಕ ಮದುವೆಗಳು, ಸಹಜ ಸ್ಥಿತಿ ಯೋಗದ  ನವರಾತ್ರಿಯ ವಿಶೇಷ ಭಜನೆ ಇಲ್ಲಿ ನಡೆಯುತ್ತವೆ.

ಸಂಗಮೇಶ್ವರ ದೇವಸ್ಥಾನSangameshwar Temple Hungund

ವೀರಶೈವ ಸಮಾಜದವರಿಂದ 1920ರಲ್ಲಿ ಸಂಗಮನಾಥನ ಹೊಸ ಗುಡಿ ನಿರ್ಮಾಣವಾಯಿತು. ತಿಳಿಕೆಂಪು ಬಣ್ಣದ ಕಲ್ಲಿನಿಂದ ದೇವಾಲಯವನ್ನು ಹೊಸ ಮಾದರಿಯಲ್ಲಿ ಕಟ್ಟಲಾಗಿದೆ. ಗರ್ಭಗೃಹ ಹಾಗೂ ತೆರೆದ ಮುಖ ಮಂಟಪ ಇದ್ದು ಸಾಂಧಾರ ಪ್ರದಕ್ಷಿಣಾ ಪಥವನ್ನು ಹೊಂದಿದೆ. ವರ್ಷಕ್ಕೊಮ್ಮೆ ಶ್ರಾವಣಮಾಸದ ಕೊನೆಯ ಸೋಮವಾರ ಜಾತ್ರೆ ಇರುವದು. ಬಸವ ಪಟ ಏರಿಸುವದರೊಂದಿಗೆ  ಜಾತ್ರೆ ಆರಂಭ. ಅಂದೇ ಹುಚ್ಚಯ್ಯ ಎಳೆಯುವದು. ಒಟ್ಟು 5 ದಿನದ ಜಾತ್ರಾ ಕಾರ್ಯಕ್ರಮಗಳಿರುವವು. ರಥಕ್ಕೆ ಒಟ್ಟು 9 ಕಳಸ. ಒಂದೊಂದು ಓಣಿಯಿಂದ ಕಳಸ ಬರುವದು. ಒಂದು ಓಣಿಯವರಿಗೆ ಹಗ್ಗ ಮತ್ತೊಂದು ಓಣಿಯವರಿಗೆ ಬಸವಪಟ ಏರಿಸುವ ಕೆಲಸ. ಹೀಗೆ ಹುನಗುಂದದಲ್ಲಿ 11 ಓಣಿಗೂ ಸಮನಾದ ಜಾತ್ರೆಯ ಕೆಲಸ ಹಂಚಿಕೆ ಮಾಡಲಾಗಿದೆ.. ಥೇರಿನಕ್ಕಿಂತ ಮುಂಚೆ ಸಾಮೂಹಿಕವಾಗಿ ವಿವಾಹ ನಡೆಯುವವು.

ಥೇರಿನ ದೊಡ್ಡ ಕಳಸ ನಾಗರಾಳವರ ಜಿನ್ನಿಂಗ ಫ್ಯಾಕ್ಟರಿಯಿಂದ ಬಂದು, ನೀಲಗಂಗಾ ದೇವಸ್ಥಾನದಲ್ಲಿ  ಪೂಜೆಗೊಂಡು ಮೆರವಣಿಗೆಯ ಮೂಲಕ ಲಿಂಗದ ಕಟ್ಟೆಗೆ ಬರುವದು. ರವಿವಾರ ರಾತ್ರಿ  ಬೇರೆ ಬೇರೆ ಓಣಿಯ 9 ಕಳಸಗಳು ಲಿಂಗದ ಕಟ್ಟೆಗೆ ಬಂದು ಸೇರುವವು. ರಾತ್ರಿ ಅಲ್ಲಿ ಮನರಂಜನಾ ಕಾರ್ಯಕ್ರಮ ನಡೆಯುವದು. ಸೋಮವಾರ 4ಘಂಟೆಗೆ ಕಳಸ ಸಂಗಪ್ಪನ ಗುಡಿಗೆ ಬರುವವು. ಸಾಯಂಕಾಲ 6 ಘಂಟೆಗೆ ಹರ,ಗುರು ಚರಮೂರ್ತಿಗಳು ಹಾಗೂ ಊರ ಪ್ರಮುಖರ ನೇತೃತ್ವದಲ್ಲಿ ತೇರು ಎಳೆಯುವದು.

ಜಾತ್ರೆಯ ನಿಮಿತ್ತ  ರೂಲು ಎತ್ತುವ, ಉಸುಕಿನ  ಚೀಲ, ಸಂಗ್ರಾಣಿ ಕಲ್ಲು ಎತ್ತುವದು, ಬಂಗಾಲಿ ಕಲ್ಲನ್ನು ಕಾಲಿಗೆ ಕಟ್ಟಿಕೊಂಡು ಚೀಲ ಹೊತ್ತು ನಡೆಯುವದು, ಕುಸ್ತಿ, ನಾಟಕ, ಎಲ್ಲ ಕಾರ್ಯಕ್ರಮಗಳು ಸಾಂಗವಾಗಿ ನಡೆಯುವವು. ಭಕ್ತಾದಿಗಳ ವಂತಿಕೆಯಲ್ಲಿ ಸಮುದಾಯಭವನ, ಆಫೀಸು, ಬಾಂಡೆ ಸಾಮಾನುಗಳ ಬಾಡಿಗೆ ನೀಡುವದು ನಡೆದಿದೆ.

ಮುದಿ ಮಾರುತಿ ದೇವಸ್ಥಾನmudda maruti temple hungund

ಮುದ್ದು ಮಾರುತಿ,ಮುದಿ ಮಾರುತಿ ಎಂದು ಹೆಸರಿರುವ ಈ ದೇವಸ್ಥಾನ ಕ್ರಿ.ಶ. 1827 ರಲ್ಲಿ  ನಿರ್ಮಾಣಗೊಂಡಿದ್ದು ಸಂಗಮೇಶ್ವರ ಗುಡಿಯ ಹತ್ತಿರ ಇದೆ. ದವನದ ಹುಣ್ಣಿಮೆಯ ದಿನ ಹನುಮ ಜಯಂತಿ. ಪಂಚಮಿಯಿಂದ ವಾಹನೋತ್ಸವ. ಕುದುರೆ, ಆನೆ, ನವಿಲು,ಹಂಸ, ಸಿಂಹ 5 ವಾಹನಗಳು. ಪ್ರತಿಯೊಂದು ವಾಹನಗಳ ಮೇಲೆ ದೇವರನ್ನಿಟ್ಟು 5 ದಿನ ಉತ್ಸವ ಮಾಡುವರು. 6 ನೇ ದಿನ ನವಮಿ ದಿನ ತೇರು ಎಳೆಯುವದು.

ಬಸವೇಶ್ವರ ದೇವಸ್ಥಾನ      

ಮುದಿ ಮಾರುತಿ ಗುಡಿ ಹತ್ತಿರ ಬರುವ ಈ ದೇವಸ್ಥಾನವನ್ನು 1944 ರಲ್ಲಿ ಬ್ಯಾಳಿ ಗುಂಡಪ್ಪನವರು ಕಟ್ಟಿಸಿದರು.  ಬಸವ ಜಯಂತಿಯ ದಿವಸ ಊರಿನಲ್ಲಿಯ ಮಹಾಂತೇಶ ಮಠದಿಂದ ಗೊಂಬೆಯನ್ನು ಮೆರವಣಿಗೆಯ ಮೂಲಕ ತಂದು ಬಸವೇಶ್ವರ ಗುಡಿಯ ತೊಟ್ಟಿಲಲ್ಲಿ ಹಾಕುವರು.  ಮುತ್ತೈದೆಯರು  ತೊಟ್ಟಿಲನ್ನು ಅಲಂಕರಿಸಿ ಮಗುವಿಗೆ ಬಸವನೆಂದು ನಾಮಕರಣ ಮಾಡುವರು. ಮಕ್ಕಳಾಗದ ತಾಯಿಗೆ ಉಡಿ ತುಂಬಿ ಆಕೆಯ ಮಡಿಲಲ್ಲಿ ನಾಮಕರಣಗೊಂಡ ಕೂಸನ್ನು ಮಲಗಿಸುವರು. ಮಕ್ಕಳಾಗದವರಿಗೆ  ತೊಟ್ಟಿಲ ಸುತ್ತಲೂ ಇರುವ ಕುಂಚಿಗೆಯನ್ನು ಹಂಚುವರು.Vittal Temple Hungund

ರುಕ್ಮಿಣಿ ಪಾಂಡುರಂಗ ದೇವಸ್ಥಾನ

ಹುನಗುಂದ ಗುಡ್ಡದ ಕೆಳಗೆ ಜಮಾದಾರರ ಶಾಲೆಯ ಹತ್ತಿರ ಈ ದೇವಸ್ಥಾನ ಇರುವದು. ಸುಮಾರು 125 ವರ್ಷಗಳಷ್ಟು ಈ ಗುಡಿ ಹಳೆಯದಾಗಿದೆ. ಅರ್ಚಕರ ಟ್ರಷ್ಠಿಗೆ ಈ ಗುಡಿ ಒಳಪಟ್ಟಿದೆ. ಆಷಾಢ ಏಕಾದಶಿ, ಕಾರ್ತೀಕ ಏಕಾದಶಿಯ ದಿನ ಕೀರ್ತನೆ, ಭಜನೆ ನಡೆಯುತ್ತವೆ. ಕಡ್ಲಿಗಾರ ಹುಣ್ಣಿವೆ, ಗೌರಿ ಹುಣ್ಣಿಮೆಯಂದು ಗೋಪಾಳ ಕಾವಲಿ ಉತ್ಸವ ನಡೆಯುವದು.

ನಗರೇಶ್ವರ ದೇವಸ್ಥಾನ

ಊರಿನ  ಮೇನ್ ಬಜಾರದಲ್ಲಿರುವ  ಈ ಗುಡಿಯು 1834ರಲ್ಲಿ ನಿರ್ಮಾಣವಾಯಿತು. ಮೊದಲಿನ(ಗಡ್ಡದ) ಮಹಾಂತ ಸ್ವಾಮಿಗಳು ರಂಗಪ್ಪ   ಅಯ್ಯಪ್ಪ ಜನಾದ್ರಿಯವರಿಗೆ ನಿಮ್ಮNagareshwar Temple ಕುಲದೇವರ ಗುಡಿ ಕಟ್ಟಿಸಲು ಸೂಚಿಸಿದರಂತೆ. ಅದರಂತೆ ಆರ್ಯವೈಶ್ಯರ ಕುಲದೇವರಾದ ನಗರೇಶ್ವರ ದೇವಸ್ಥಾನ ನಿರ್ಮಾಣವಾಯಿತು. ಇವರ ಕುಲದೇವತೆ ಕನ್ನಿಕಾ ಪರಮೇಶ್ವರಿ.

ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ. ದೇವರ ಜಯಂತೋತ್ಸವವು ವೈಶಾಖ ಶುದ್ಧ ದಶಮಿ ದಿನ ನಡೆಯುವದು.

ಮಹಾಂತೇಶ್ವರ ಮಠ

ಶ್ರೀ ಮಹಾಂತೇಶ್ವರ ಮಠವು ಪ್ರಸಿದ್ಧವಾದುದು. ಇತ್ತೀಚೆಗೆ ಮಠದ ಜೀರ್ಣೋದ್ಧಾರ  ಕಾರ್ಯ ನಡೆದಿದೆ. ಬೃಹದಾಕಾರದ ಸುಂದರವಾದ ಮಠವನ್ನು ಕಟ್ಟಲಾಗಿದೆ. ಶ್ರಾವಣಮಾಸದಲ್ಲಿ ಪುರಾಣ, ಕೀರ್ತನೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ.ಶ್ರಾವಣ ಮಾಸ ನಾಗ ಚೌತಿಯ ದಿನ ಅಕ್ಕನಾಗಮ್ಮನ ಪುಣ್ಯತಿಥಿ. ಅಂದಿನಿಂದ ಪ್ರವಚನ ಪ್ರಾರಂಭ. ಶ್ರಾವಣ ಮುಗಿದ 8 ದಿನದ ಮೇಲೆ ಮಂಗಲ. ಇದೇ ಶರಣ ಸಂಸ್ಕೃತಿ ಉತ್ಸವ. ಅಂದು ಶ್ರೀ ವಿಜಯ ಮಹಾಂತೇಶ್ವರ ಭಾವಚಿತ್ರ, ವಚನ ಕಟ್ಟುಗಳ ಮೆರವಣಿಗೆ ನಡೆಯುವದು. ಕಾರ್ಯಕ್ರಮಕ್ಕಿಂತ ಮುಂಚೆ ಸಂಗೀತ ಕಾರ್ಯಕ್ರಮ, ತತ್ವಪದಗಳು, ಸನ್ಮಾನ ಹಾಗೂ ಮಹಾಂತ ಶ್ರೀಗಳವರ ಆಶೀರ್ವಚನದೊಂದಿಗೆ ಶರಣ ಸಂಸ್ಕೃತಿ ಉತ್ಸವ ಮಂಗಲವಾಗುವದು. ಅಲ್ಲದೆ ಬಸವ ಜಯಂತಿ ಕಾರ್ಯಕ್ರಮ, ಶಿವರಾತ್ರಿಯಲ್ಲಿ ಅಜ್ಜನವರ ನೇತೃತ್ವದಲ್ಲಿ ಶಿವಯೋಗದ ಆಚರಣೆ ಉಪವಾಸವಿದ್ದವರಿಗೆ ಫಲಾಹಾರ ವ್ಯವಸ್ಥೆ ಇರುವದು.

ಮಠ ಗುರುಗಳ ಪುಣ್ಯ ತಿಥಿ, ಕೊಪ್ಪದ ಸ್ವಾಮಿಗಳ ಪುಣ್ಯತಿಥಿ ಈ ರೀತಿ ಹಲವಾರು ಕಾರ್ಯಕ್ರಮಗಳು ನಡೆಯುವದರ ಜೊತೆಗೆ ಬಸವ ತತ್ವದ ಶ್ರೀ ಮಠದಲ್ಲಿ ಊರಿನ ಯಾವುದೇ ಕಾರ್ಯಕ್ರಮವಿದ್ದರೂ ಜಾತಿ,ಭೇಧ ಇಲ್ಲದೇ ಇಲ್ಲಿ ನಡೆಯುವದೊಂದು ವಿಶೇಷವಾಗಿದೆ. ಪ್ರತಿ ಸೋಮವಾರ ಶಿವಾನುಭವ ನಡೆಯುವದು. ಮತ್ತೊಂದು ಪ್ರಮುಖ ಅಂಶವೆಂದರೆ ಶ್ರೀಶೈಲ, ಫಂಡರಪುರ ಮುಂತಾದ ಕ್ಷೇತ್ರಗಳಿಗೆ ಹೋಗುವ ಯಾತ್ರಿಗಳಿಗೆ ವರ್ಷದ 12 ತಿಂಗಳೂ ಅವರಿಗೆ ಪ್ರಸಾದದ ವ್ಯವಸ್ಥೆ ಇಲ್ಲಿರುವದು.

ಶ್ರೀ ಮಠದಲ್ಲಿ ಮಹಾಶರಣೆ ಅಕ್ಕನಾಗಮ್ಮನವರ ಜಯಂತಿ ಸ್ಮರಣೆ ಮಹೋತ್ಸವದ ಜೊತೆಗೆ ಅಂದು(ನಾಗಚೌತಿದಿನ) ವೈಚಾರಿಕ ಆಚರಣೆಯ ಹಾಲು ಕುಡಿಯುವ ಹಬ್ಬ ಆಚರಿಸುವರು.ನಾಗರ ಪಂಚಮೀ ಹಬ್ಬವು ನಾಡಿಗೆಯೇ ದೊಡ್ಡ ಹಬ್ಬ. ಅದು ಹೆಣ್ಣು ಮಕ್ಕಳಿಗೆಲ್ಲಾ ಆದರ್ಶಪ್ರಾಯ ಹಬ್ಬ. ಬಸವಾದಿ ಶರಣರದು ಅರಿವು, ಆಚಾರ, ಅನುಭವದ ಧರ್ಮವಾಗಿದೆ. ಕಲ್ಲುನಾಗರ, ಮಣ್ಣಿನನಾಗರ, ಹುತ್ತಗಳನ್ನು ಹುಡುಕಿ ಎಷ್ಟೋ ಲೀಟರ್ ಹಾಲನ್ನು ಅಂಧಶ್ರದ್ಧೆಯಿಂಧ ಎರೆದು ಮಣ್ಣುಪಾಲು ಮಾಡುವ ಬದಲು ಬಡ ಮಕ್ಕಳಿಗೆ, ಆಸ್ಪತ್ರೆಯ ರೋಗಿಗಳಿಗೆ, ಕೇರಿಯ ಬಡಜನರಿಗೆ ಹಾಲು ಕುಡಿಸುವ ಸ್ವತಃ ತಾವು ಹಾಲು ಕುಡಿದು ಸಂತೃಪ್ತಿಯಿಂದ ನಲಿದಾಡುವ ಈ ಹಬ್ಬವನ್ನು ಆಚರಿಸುವ ಸಂಪ್ರದಾಯವನ್ನು ಶ್ರೀ ಮಠವು ಹಾಕಿಕೊಂಡಿದೆ.

ಹಾವು ಹಾಲು ಕುಡಿಯುವದಿಲ್ಲ. ಹಾಲು ಹಾವಿನ ಆಹಾರವಲ್ಲ. ಹಾವು ತತ್ತಿ ಹಾಕುತ್ತದೆ. ತತ್ತಿ ಒಡೆದು ಹೊರ ಬರುವ ಹಾವಿನ ಮರಿಗಳು ಹುಳು ಹುಪ್ಪಡಿ ತಿನ್ನುತ್ತಾ ಬೆಳೆಯುತ್ತವೆ ಹೊರತು ಹಾಲು ಕುಡಿಯುವದಿಲ್ಲ. ತತ್ತಿಗಳನ್ನು ಇಡುವ ತಾಯಿ ಹಾವಿನ ಶರೀರದಲ್ಲಿ ಹಾಲಿನ  ಕೆಂದ್ರಗಳಿಲ್ಲ. ಹಾವಾಡಿಗ ಹಿಡಿದ ಹಾವಿಗೆ ತರಬೇತಿ ನೀಡಿದ್ದರಿಂದ  ಅದು ಹಾಲನ್ನು ನೀರಿನ ರೀತಿಯಲ್ಲಿ ಕುಡಿಯುತ್ತದೆ ಹೊರತು ಹಾಲು ಎಂದು ಕುಡಿಯುವದಿಲ್ಲ ಎಂಬ ಸತ್ಯವನ್ನು ಅರಿತುಕೊಳ್ಳಬೇಕಾಗಿದೆ. ನಮ್ಮ ಸುತ್ತಮುತ್ತ ವಿಷಕಾರಿ ದ್ವೇಷ ಮತ್ಸರವುಳ್ಳ ಮಾನವರಿದ್ದಾರೆ. ಅಂತವರಿಗೆ ನಾವು ಪ್ರೀತಿಯ ಹಾಲನ್ನೆರೆದು ದ್ವೇಷವನ್ನು ಪ್ರೇಮದಿಂದ, ಕೆಡಕನ್ನು ಒಳಿತಿನಿಂದ ಗೆಲ್ಲಬೇಕು ಎನ್ನುವದೇ ಶ್ರೀ ಮಠದ ವೈಚಾರಿಕ ಆಚರಣೆಯ ಮಹತ್ವ. ಪೂಜ್ಯ ಮಹಾಂತಪ್ಪಗಳು ಮಹಾಂತ ಜೋಳಿಗೆಯ ಮೂಲಕ ಜನರ ದುಷ್ಟ ಗುಣ ಸ್ವೀಕರಿಸುವ, ಆ ದಿಶೆಯಲ್ಲಿ ಮನಪರಿವರ್ತನೆ ಮಾಡುವ ದೊಡ್ಡ ಕ್ರಾಂತಿ ಮಾಡಿದ್ದಾರೆ. ಮೇಲು ಕೀಳೆನ್ನದೆ ಯಾವುದೇ ಜಾತಿ ಭೇಧ ಎಣಿಸದೆ ಲಿಂಗಧಾರಣೆ ಮಾಡುವದು ಹಾಗೂ ಮದುವೆಯ ಸಂದರ್ಭದಲ್ಲಿ ಅಕ್ಷತೆಯ ಬದಲಿಗೆ ಹೂವನ್ನು ಹಾಕುವ ಆ ಮೂಲಕ  ಧಾರ್ಮಿಕ ನಂಬುಗೆಗೆ  ವೈಚಾರಿಕ ಪ್ರಜ್ಞೆಯ ಅರಿವಿನತ್ತ ಜನರನ್ನು ಬೆಳೆಸುವ ಶ್ರೀ ಮಠದ ಅಜ್ಜನವರ ಕೈಂಕರ್ಯ ದೊಡ್ಡ ಪವಾಡವೇ ಸರಿ.

ಅಕ್ಕ ಮಹಾದೇವಿ ದೇವಸ್ಥಾನ

ಮಹಾಂತೇಶ್ವರ ಮಠದ ಮುಂದೆಯೇ ಅಕ್ಕಮಹಾದೇವಿ ದೇವಸ್ಥಾನ ಇದೆ, 1995 ರಲ್ಲಿ ಜೀರ್ಣೋದ್ಧಾರಗೊಂಡು ಸುಂದರ ಗುಡಿಯಾಗಿ ನಿರ್ಮಾಣಗೊಂಡಿದೆ. ದವನದ ಹುಣ್ಣಿಮೆಯ ದಿನ ಅಕ್ಕಮಹಾದೇವಿ ಜಯಂತಿಯನ್ನು ಭಾವಚಿತ್ರದ ಮೆರವಣಿಗೆಯೊಂದಿಗೆ ಆಚರಣೆ ಮಾಡುವರು. ಈ ಗುಡಿಯ ವಿಶೇಷತೆ ಎಂದರೆ ಕುಳಿತ ಅಕ್ಕಮಹಾದೇವಿಯ ಮೂರ್ತಿ. ಸುಮಾರು 53 ವರ್ಷಗಳ ಹಿಂದೆ ಬಾಂಬೆಯಿಂದ ಈ ಮೂರ್ತಿ ತರಿಸಲಾಯಿತು. ನೋಡುಗರ ಕಣ್ಮನ ಸೆಳೆಯುವ ಈ ಮೂರ್ತಿಯು ನೋಡುವಷ್ಡು ಕ್ಷಣವು ಧನ್ಯತಾಭಾವ ಮೂಡಿಸುತ್ತದೆ ಎಂಬುದರಲ್ಲಿ ಅತಿಶಯೋಕ್ತಿ ಏನಿಲ್ಲ.

ಜಾಮಿಯಾ ಮಸೀದಿ

1870 ರಲ್ಲಿ ನಿರ್ಮಿಸಲಾಯಿತೆಂದು ತಿಳಿದು ಬರುತ್ತದೆ. ಇದು ದೊಡ್ಡಪ್ಪನ ಕೆರೆಯ ಹತ್ತಿರ ಇರುವದು. ಇದಲ್ಲದೆ ಇನ್ನೊಂದು ಮಸೀದೆಯು ಊರಿನೊಳಗಿದೆ. ಜಾಮೀಯಾ ಮಸೀದೆಯ ಗುಮ್ಮಟ ನಡುವೆ ಇದ್ದು ಸುತ್ತಲೂ 4 ಮೀನಾರುಗಳಿವೆ. ಕ್ರಿ.ಶ. 1062 ರಲ್ಲಿ ಈ ಕಟ್ಟಡದ ಬೆಳವಣಿಗೆ ನಡೆಯಿತು. ಪ್ರತಿ ದಿನ 5 ಹೊತ್ತು ನಮಾಜು, ಫಜರ್, ಜೋಹರ್,ಅಸರ್, ಮಗರೀಬ ಹಾಗೂ ಇಶಾ ನಮಾಜ ಎಂದು 5 ಹೊತ್ತು ನಡೆಯುವದು. ವರ್ಷಕ್ಕೆ ಎರಡು ಸಲ ಬೆಟ್ಟದ ಮೆಲಿರುವ ಈದಗಾದಲ್ಲಿ ನಮಾಜ ನಡೆಯುವದು.

1 ಈದುಲ್ ಫಿತರ್ (ರಮಜಾನ್)

2 ಈದ್ ದುಹಾ   (ಬಕ್ರೀದ್)

ರಮಜಾನ್ ಹಬ್ಬದಲ್ಲಿ ಅಬಾಲರುದ್ಧರಾದಿಯಾಗಿ ಒಂದು ತಿಂಗಳು ಉಪವಾಸ ಮಾಡುವರು. ರಮಜಾನ್ ಹಬ್ಬದ ಕೊನೆಗೆ ಸಿಹಿ ಊಟ ಮಾಡಿ ತಮ್ಮ ಮುಸ್ಲಿಂ ಬಾಂಧವರನ್ನಲ್ಲದೇ ಬೇರೆ ಮತದ ಬಾಂಧವರನ್ನು ಮನೆಗೆ ಆಹ್ವಾನಿಸುವರು. ಇವರ ಧರ್ಮ ಸಮನ್ವಯತೆಯನ್ನು ತೋರಿಸುತ್ತದೆ.

ಮೊಹರಂ ಹಬ್ಬ (ದುಃಖದ ಹಬ್ಬ)

 ಆರು ಮಸೂತಿಗಳಲ್ಲಿ ದೇವರನ್ನು 5 ದಿನ ಕೂಡ್ರಿಸುವರು. ಹಸೇನ್- ಹುಸೇನ್ ರು ನಡೆಸಿದ ಧರ್ಮಯುದ್ಧದ ನೆನಪಿಗಾಗಿ ಈ ಹಬ್ಬ  ಆಚರಿಸುವರು. ಈ ಹಬ್ಬದಲ್ಲಿ ಎಲ್ಲ ಧರ್ಮೀಯರು ಭಾಗವಹಿಸುವರು.

ಈದಮಿಲಾದ

ಪ್ರವಾದಿ ಮಹಮ್ಮದ ಪೈಗಂಬರ ಜನ್ಮ ದಿನವಾದ ಈದಮಿಲಾದ ಹಬ್ಬದ  ಅಂಗವಾಗಿ ಮುಸ್ಲಿಂ ಬಾಂಧವರ ಮನೆ, ,ಮನೆಗಳಲ್ಲಿ ಚೊಂಗೆ, ಖೀರು, ಹಲ್ವಾ ಮೊದಲಾದ ಭಕ್ಷ್ಯ ಭೋಜನಗಳನ್ನು ಸಿದ್ಧಪಡಿಸಿ ದರ್ಗಾಕ್ಕೆ ಹೋಗಿ ನಮಾಜು ಮಾಡುವರು.

ಮೇಗುಡಿ

ಈ ಊರ ಒಳಗೆ  ಕೋಟೆ ಪ್ರದೇಶದಲ್ಲಿ ಮೇಗುಡಿ ಎಂದು ಕರೆಯಲಾಗುವ ಜೈನ ದೇವಾಲಯದ  ಅವಶೇಷಗಳಿತ್ತೆಂಬ ಅಭಿಪ್ರಾಯ ಇದೆ. ಈ ದೇವಾಲಯದ ಸ್ಥಂಭಗಳು ಚೌರಸವಾಗಿದ್ದು ಬೃಹತ್ ಆಕಾರದಲ್ಲಿದ್ದು ಅಲಂಕಾರವನ್ನು ಹೊಂದಿತ್ತೆಂದು ಹೇಳಲಾಗುತ್ತದೆ. ಈಗ ದೇವಾಲಯದ ಭಗ್ನಗೊಂಡ ಅವಶೇಷಗಳು ಅಲ್ಲಲ್ಲಿ ನೋಡ ಸಿಗುತ್ತವೆ. ಇದಕ್ಕೆ ಪುರಾವೆಯಾಗಿ ಈ ನೆಲ ಕಲ್ಯಾಣದ ಚಾಲುಕ್ಯರಿಂದ ಆಳಲ್ಪಟ್ಟ ಹಾಗೂ ಅವರು ಕಟ್ಟಿಸಿದ ಜೈನ ದೇವಾಲಯಗಳಲ್ಲಿ ಮೇಗುಡಿಯೂ ಒಂದು ಎಂದು ತಿಳಿದು ಬರುವದು. ಕಲ್ಯಾಣದ ಚಾಲುಕ್ಯರ ದ್ವಿತೀಯ ರಾಜಧಾನಿಯಾಗಿದ್ದ ಅರಸಿಬೀದಿ ಅಥವಾ ವಿಕ್ರಮಪುರ ಹುನಗುಂದದಿಂದ ನೈರುತ್ಯಕ್ಕೆ 25 ಕಿ.ಮಿ ಅಂತರದಲ್ಲಿ ಈ ಗ್ರಾಮವಿದೆ. ಈಗ ಅಲ್ಲಿ ಜನವಸತಿ ಇಲ್ಲ. ಹಾಳು ಬಿದ್ದ ಹಳ್ಳಿ ಮಾತ್ರವಾಗಿದೆ. ಆದರೆ ಕ್ರಿ.ಶ 1077 ರಿಂದ 1127 ರ ಅವಧಿಯಲ್ಲಿ ಆಳಿದ ಕಲ್ಯಾಣ ಚಾಲುಕ್ಯ ಅರಸು 6ನೇ ವಿಕ್ರಮಾದಿತ್ಯನ ಕಾಲದಲ್ಲಿ ಅರಸೀ ಬಿದಿಯು ಒಂದು ಆಡಳಿತ ವಿಭಾಗದ ರಾಜಧಾನಿಯಾಗಿತ್ತೆಂದು ತಿಳಿದು ಬರುತ್ತದೆ. 5 ನೇ ವಿಕ್ರಮಾದಿತ್ಯನ ಸಹೋದರಿ ಅಕ್ಕಾದೇವಿ ವಿಕ್ರಮಾದಿತ್ಯನ ಗೌರವಾರ್ಥ ಅರಸೀಬೀದಿ ರಾಝಧಾನಿಯನ್ನು ಸ್ಥಾಪಿಸಿದಳಂತೆ. ಇದು ಹುನಗುಂದದಿಂದ ಗುಡೂರ ಮಾರ್ಗವಾಗಿ, ಅಲ್ಲಿಂದ ಗಜೇಂದ್ರಗಡಕ್ಕೆ ಹೋಗುವ ರಸ್ತೆಯಲ್ಲಿ 6 ಕಿ.ಮಿ. ದೂರವಿದೆ. ವೈದಿಕ ಧರ್ಮದವರಾದ ಕಲ್ಯಾಣದ ಚಾಲುಕ್ಯರು ಮತ್ತೊಂದು ಧರ್ಮವನ್ನು ಹೇಗೆ ಅನೋನ್ಯವಾಗಿ ಕಂಡರೆಂಬುದಕ್ಕೆ ಅವರು ಕಟ್ಟಿಸಿದ ಜೈನ ಬಸದಿಗಳೇ ಸಾಕ್ಷಿ.

ಓದುಗರು ಇದರ ಹೆಚ್ಚಿನ ಮಾಹಿತಿಗಾಗಿ ಶ್ರೀ ಎಸ್.ಎಚ್.ನೆರೆಣ್ಣವರ  ಸಂಶೋಧನಾ ಗ್ರಂಥ “ಅರಸೀಬೀದಿಯ ಸಾಂಸ್ಕೃತಿಕ ಶಾಸನಗಳ ಒಂದು ಅಧ್ಯಯನ ನೋಡಬಹುದು. ಅಥವಾ ಶ್ರೀ ಪ್ರಕಾಶ ಖಾಡೆಯವರ “ಅರಸೀಬೀದಿ” ಎಂಬ 18 ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕ ನೋಡಬಹುದು.

ನೀಲಗಂಗಾ ದೇವಸ್ಥಾನ

ಕಳಸದ ಭಾವಿಗೆ ಹೊಂದಿಕೊಂಡಂತೆ ಇರುವ ಗುಡಿಯೇ ನೀಲಗಂಗಾ ದೇವಸ್ಥಾನ. ಕಟ್ಟಡಕ್ಕೆ ಥರ ತೆಗೆಯುವ ಮುಂದೆ ಒಂದು ತುಂಬಿದ ಮಣ್ಣಿನ ಬಿಂದಿಗೆ ಸಿಕ್ಕಿದ್ದರಿಂದ ಈ ಗುಡಿಗೆ ನೀಲಗಂಗಮ್ಮನ ಗುಡಿ ಎಂದು ಕರೆಯುವರು. ಗೌರಿ ಹುಣ್ಣಿಮೆಯ ದಿನ ಜಾತ್ರೆ, ಕುಂಭಮೇಳ 5 ದಿನ ಸ್ವಾಮಿಗಳ ಮೆರವಣಿಗೆ ಪ್ರಸಾದ ವ್ಯವಸ್ಥೆ ಅಂದು ಇರುವದು.

ಕಳಸದ ಭಾವಿ    —-ಈ ಮೊದಲು ಅಮರಾವತಿ ದೇಸಾಯಿಯವರ  ತೋಟ ಈ ಜಾಗೆ ಆಗಿತ್ತು. 333 ಹಳ್ಳಿಗಳ ದೇಸಾಯಿ ಅವರಾಗಿದ್ದರು. ಅವರೇ ಈ ಭಾವಿಯನ್ನು ತೋಡಿಸಿದರು.(ರಕ್ಕಸಗಿ ಸಂಸ್ಥಾನಕ್ಕೆ ದತ್ತು ಹೋದವರು.) ಅಮರಾವತಿ ದೇಸಾಯಿವರ ಒಡೆತನದಲ್ಲಿದ್ದ ಕೂಡಲ ಸಂಗಮನಾಥನ ಕಳಸವು ಅಮರಾವತಿಯಿಂದ ಹೋಗುವ ಮುಂದೆ ಈ ಭಾವಿಯಲ್ಲಿ ಕಳಸವನ್ನು ಬೆಳಗಿ ಸ್ವಚ್ಛಗೊಳಿಸಿ ನಂತರ ಪೂಜಿಸಿಕೊಂಡು ಕೂಡಲ ಸಂಗಮಕ್ಕೆ ಹೋಗುತ್ತಿತ್ತು. ಹೀಗಾಗಿ ಈ ಭಾವಿಗೆ ಕಳಸದ ಭಾವಿ ಎಂದು ಹೆಸರು ಬಂತು. ಊರಲ್ಲಿಯ ಮದುವೆ, ಮಂಗಲ ಕಾರ್ಯಗಳಿಗೆ ಇದೇ ಭಾವಿಯಿಂದ ವೀರಭದ್ರ ದೇವರು ಹೊರಡಿಸುವರು. ಅಲೆ ದೇವರು ಮೊಹರಂ ನಿಮಿತ್ಯ ಬಂದು ಈ ಭಾವಿಯ ಸುತ್ತಲೂ ನಿಂತಾಗ ಭಾವಿಯಲ್ಲಿ ಗುಳ್ಳೆಗಳು ಏಳುತ್ತವೆಂದು ಹೇಳುವರು.

ದನಗಳಿಗೆ ಕುಂದು ಉಂಟಾದಾಗ ಮೂಕಿನಿಂದ ಈ ಭಾವಿಯ ನೀರನ್ನು ಎಡಗೈಯಿಂದ ತಾಮ್ರದ ತಂಬಿಗೆ ತೆಗೆದುಕೊಂಡು ನೀಲಗಂಗಾನ ಗುಡಿಯ ಮಗ್ಗುಲ ಗೋಡೆಯಲ್ಲಿರುವ 2 ಚೌರಸ್ ಫೂಟಿನ ಬಾಗಿಲನ್ನು ತೊಳೆದು ಆ ನೀರು ತಂಬಿಗೆಯಲ್ಲಿ ತೆಗೆದುಕೊಂಡು ಪ್ರಾಣಿಗಳ ಹಣೆಯಿಂದ ಬಾಲದವರೆಗೆ ನೀರು ಸುರಿವಿ ಆ ತಂಬಿಗೆ ಅಲ್ಲಿಯೇ ಡಬ್ಬ ಹಾಕುವರು. ಹೀಗೆ 3 ದಿನ ಮಾಡಿದರೆ ಪ್ರಾಣಿಗಳ ಕುಂದು ಕಡಿಮೆಯಾಗುವದು ಇಲ್ಲಿಯ ಮಹಿಮೆಯೇ ಸರಿ.

ಮಹಾಲಕ್ಷ್ಮಿಗುಡಿ

ಈ ಗುಡಿಯು ಹುನಗುಂದದಿಂದ ಧನ್ನೂರಿಗೆ ಹೋಗುವ ಮಾರ್ಗದಲ್ಲಿ ಬರುವದು. ಸುಮಾರು 1946 ಅಥವಾ ಅದಕ್ಕಿಂತ ಮುಂಚೆಯೇ ಬೇವಿನ ಗಿಡಕ್ಕೆ ಪೂಜೆ ಮಾಡುತ್ತಿದ್ದರು, ಕ್ರಿ,ಶ, 1984 ರಲ್ಲಿ ಕಟ್ಟಡ ಆಯಿತು. ಶ್ರಾವಣ ಮಾಸದ ಕಡ್ಲಿಗಾರ ಹುಣ್ಣಿಮೆಯ ದಿನ ದೇವಿಯ ಭಾವಚಿತ್ರ, ಮೆರವಣಿಗೆ ಹಾಗೂ ಜಾತ್ರೆ ಮಾಡುವರು.ಶಿವಭಜನೆ,ಉಡಿತುಂಬುವ ಕಾರ್ಯಕ್ರಮ ಇರುವದು. ಇನ್ನೊಂದು ಮಹಾಲಕ್ಷ್ಮಿಗುಡಿಯು ಇದರ ಸಮೀಪದಲ್ಲಿಯೇ ಇರುವದು.

ಯಮನೂರಪ್ಪನ ಗುಡಿ

ಮೇಗುಡಿಯ ಬೆಟ್ಟದ ಕೆಳಗೆ ಈ ಗುಡಿಯು ಬರುವದು. ಇತ್ತೀಚೆಗೆ ಈ ಗುಡಿಗೆ ಹೊಸ ಕಟ್ಟಡ ಮಾಡಲಾಗಿದೆ. ಹೋಳಿ ಹುಣ್ಣಿಮೆ ಆದ  4ನೆಯ ದಿನ ದೇವರ ಮೆರವಣಿಗೆ ನಡೆದು 5 ನೆಯ ದಿನಕ್ಕೆ ಉರುಸು ನಡೆಯುವದು.ಮೈಮೇಲೆ ಕುರುವಿನಂತಹ ಚರ್ಮರೋಗ ಉಂಟಾದರೆ ಗುರುವಾರ ಅಥವಾ ರವಿವಾರ ಈ ಗುಡಿಗೆ ಹೋಗಿ ಉಪ್ಪನ್ನು ಎಡಗೈನಿಂದ ದೇವರ ಮುಂದೆ 5 ನಿಧಿ ಹಾಕಿ ಬಂದರೆ ಚರ್ಮರೋಗ ವಾಸಿಯಾಗುವವು. ಎಂದು ಅನುಭವಿಕರು ಹೇಳುತ್ತಾರೆ. ಈ ಗುಡಿಯ ಹತ್ತಿರವೇ ಲಕ್ಷ್ಮೀ ಗುಡಿ, ಗದ್ದೆಮ್ಮ-ಎಲ್ಲಮ್ಮ ಗುಡಿ, ಮರಿದೇವರ ಮಠ (ಚಾಮುಂಡೇಶ್ವರಿ ಗುಡಿ) ಬರುವವು.

ಮಲ್ಲಿಕಾರ್ಜುನ ದೇವಸ್ಥಾನMallikarjun Temple

ಮೇಗುಡಿಯ ಸಮೀಪ ಹಾಗೂ ಈದಗಾ ಮೈದಾನ ಸಮೀಪ ಬೆಟ್ಟದ ಮೇಲೆ ಈ ದೇವಸ್ಥಾನವಿದೆ. ಶ್ರೀಯುತ ಬ್ಯಾಳಿ ಗುಂಡಪ್ಪನವರು ಗುಡಿ ಕಟ್ಟಿಸಿದರೆಂದು ಜನ ಹೇಳುತ್ತಾರೆ. ಕಾರ್ತೀಕಮಾಸದಲ್ಲಿ ಕಾರ್ತೀಕೋತ್ಸವ, ಶ್ರಾವಣ ಮಾಸದಲ್ಲಿ ಅಭಿಷೇಕ ನಡೆಯುವದು. ವಿಜಯದಶಮಿಯ ದಿನ ಮೇಗಲಪೇಟೆಯ ಜನರು ಈ ಗುಡಿ ಎದುರಿಗಿರುವ ಬನ್ನಿ ಮರ ಪೂಜಿಸಿ, ಅದೇ ಗಿಡದ ಬನ್ನಿಯಿಂದ ದೇವರಿಗೆ ಬನ್ನಿ ಮುಡಿದ ಮೇಲೆಯೇ ಪರಸ್ಪರರು ಬನ್ನಿ ವಿನಿಮಯ ಮಾಡಿಕೊಳ್ಳುತ್ತಾರೆ. ಶಿವರಾತ್ರಿಯಲ್ಲಿ ಶಿವ ಭಜನೆ ನಡೆಯುವದು.

ಈಶ್ವರ ದೇವಸ್ಥಾನ

ಶ್ರೀಯುತ ದೊಡ್ಡಪ್ಪನವರು ನಾಗರಾಳರ ಪಾಠಶಾಲೆಯ ಸಮೀಪ ಇರುವ  ಈ ಗುಡಿಯನ್ನು ಶ್ರೀ ದೊಡ್ಡಪ್ಪನವರೇ ಕಟ್ಟಿಸಿದ್ದಾರೆ. ಕಾರಹುಣ್ಣಿಮೆಯ ಮರುದಿನ ಊರ ಹೆಣ್ಣು ಮಕ್ಕಳೆಲ್ಲಾ ಮನೆಯಲ್ಲಿ ಹಾಕಿದ ಗೋದಿ ಸಸಿಯನ್ನು ತಲೆಯಲ್ಲಿ ಮುಡಿದು ಅಲ್ಲಿ ಊಟ ಮಾಡಿ ಬರುವರು. ಅದಕ್ಕಾಗಿ ಈ ಗುಡಿಗೆ ಸಸಿ ಗುಡಿ ಎಂದು ಅನ್ವರ್ಥ ನಾಮ ಬಂದಿದೆ.

ಘನಮಠದಾರ್ಯರ ಕಟ್ಟೆ

ಶ್ರೀಯುತ ದೊಡ್ಡಪ್ಪನವರ ಪಾಠಶಾಲೆಯ ಹತ್ತಿರವೇ ಇರುವ ಈ ಕಟ್ಟೆಯನ್ನು ಶ್ರೀಯುತ ದೊಡ್ಡಪ್ಪನವರೇ ಕಟ್ಟಿಸಿದರಂತೆ. ಘನಮಠದಾರ್ಯರು ಆಂದ್ರದವರು. 1828 ರಲ್ಲಿ ಇವರು ಜನಿಸಿದರು. ಇವರ ಮೊದಲಿನ ಹೆಸರು ನಾಗಭೂಷಣ. ಸಂಸಾರ ಬಂಧನಕ್ಕೆ ಸಿಲುಕದೇ ತಮ್ಮ 21 ನೇ ವಯಸ್ಸಿಗೆ ದೇಶ ಸಂಚಾರ ಮಾಡುತ್ತಾ ಮಾಡುತ್ತಾ ಯರಗೋಠ ಮಠದ ರೇವಣಾಧ್ಯಯರ ಹತ್ತಿರ ಕನ್ನಡ ಕಲಿತು ಹುನಗುಂದಕ್ಕೆ ಬಂದರು. ಆವಾಗಲೇ ಪಾಠ ಶಾಲೆಯ ಮುಂದೆ ಜೋಪಡಿಯಲ್ಲಿ ಇವರ ವಾಸ. ತಾವು ಇದ್ದಲೆಲ್ಲಾ ಆ ಜಮೀನಿನ ಕೃಷಿಯ ಕಾಯಕ ಮಾಡುತ್ತಿದ್ದರು. ತಮ್ಮ ಪ್ರಸಾದಕ್ಕಾಗಿ ಕೇವಲ 5 ಮನೆಯ ಕಂತಿ ಭಿಕ್ಷೆ ಎತ್ತಿ ತಂದು ಸೇವಿಸುತ್ತಿದ್ದರು.ಒಮ್ಮೆ ಭಿಕ್ಷಾಂದೇಹಿ ಎಂದು ಕೂಗಿ ಹೇಳಿ ಇನ್ನೊಂದು ಸಲ ಹೇಳುವದರಲ್ಲಿ ಭಿಕ್ಷೆ ತಂದು ನೀಡದಿದ್ದರೆ ಮುಂದಿನ ಮನೆಗೆ ಹೋಗಿ ಬಿಡುತ್ತಿದ್ದರಂತೆ. 5 ಮನೆಯಿಂದ ಸಿಕ್ಕ ಭಿಕ್ಷೆಯಿಂದಲೇ ದಿನದ ಪ್ರಸಾದ ಸ್ವೀಕರಿಸುತ್ತಿದ್ದರು. ಭಿಕ್ಷೆ ಸಿಗದಿದ್ದರೆ ಪ್ರಸಾದ ಇಲ್ಲವೇ ಇಲ್ಲ. ಇಂತಹ ವೈರಾಗ್ಯನಿಧಿಯಾದ ಕೃಷಿಜ್ಞಾನ ಪ್ರದೀಪಿಕೆ ಎಂಬ ಅಪೂರ್ವ ಗ್ರಂಥದ ಕೈಬರಹದ ಕೃತಿ ಬರೆದರು. ವೈರಾಗ್ಯ ಮೂರ್ತಿಗಳಾದ ಘನ ಮಠದಾರ್ಯರು ನಿಜ ಕ್ಷೇತ್ರವಾದ ಆಧ್ಯಾತ್ಮ ಲೋಕದೊಂದಿಗೆ ಕೃಷಿಯನ್ನು ಇವರು ಒಂದು ಯೋಗ ಸಾಧನೆ ಎಂಬಂತೆ ತಿಳಿದುಕೊಂಡು ನಡೆದರು. ಇವರ ಕತೃ ಗದ್ದುಗೆ ರಾಯಚೂರ ಜಿಲ್ಲೆಯ ಸಂತೆಕೆಲೂರಿನಲ್ಲಿದೆ. ಇವರ ನೆನಪಿಗಾಗಿ ಶ್ರೀಯುತ ದೊಡ್ಡಪ್ಪ ನಾಗರಾಳರವರು ಘನಮಠದಾರ್ಯರ ಕಟ್ಟೆಯನ್ನು ಕಟ್ಟಿಸಿ ಅಲ್ಲಿ ಬಸವಣ್ಣನ ಮೂರ್ತಿಯನ್ನು ಹಾಗೂ ಘನಮಠದಾರ್ಯರ ಭಾವಚಿತ್ರವನ್ನು ಇಟ್ಟು ದಿನವೂ ಪೂಜೆಯಾಗುವ ವ್ಯವಸ್ಥೆ ಅಂದಿನಿಂದ ಇಂದಿನವರೆಗೂ ನಡೆದು ಬಂದಿದೆ. ಭಕ್ತರ ಕೋರಿಕೆ ಈಡೇರಿಸುವ ಘನಮಠದಾರ್ಯರ  ಈ ಕಟ್ಟೆ ಇಂದು ಸುಂದರವಾಗಿ ಕಾಣುತ್ತಿದೆ.

ರೇವಣಸಿದ್ಧೇಶ್ವರ ಗುಡಿ

ಹೆಡ್ ಪೋಸ್ಟ ಹತ್ತಿರ ಈ ಗುಡಿ ಇದೆ. ದೀಪಾವಳಿ ಪಾಡ್ಯ ದಿವಸ ರೇವಣಸಿದ್ಧೇಶ್ವರರ ಉತ್ಸವ ಮಾಡುವರು.

ಮಲ್ಲಯ್ಯನ ಗುಡಿ 

ಸಂಗಮೇಶ್ವರ ದೇವಸ್ಥಾನದ ಅತೀ ಸಮೀಪದಲ್ಲಿಯೇ ಈ ಗುಡಿ ಇದೆ. ಕಾರ್ತಿಕಮಾಸದಲ್ಲಿ ಕಾರ್ತಿಕೋತ್ಸವ, ಬನ್ನಿ ಹಬ್ಬದಲ್ಲಿ ಜಾತ್ರೆ ನಡೆಯುವದು.

ಗ್ರಾಮದೇವತೆಯ ದೇವಸ್ಥಾನGramadevate Temple Hungund

2002 ರಲ್ಲಿ ನಿರ್ಮಾಣಗೊಂಡ ಈ ಗುಡಿಯು ಸಂಗಮೇಶ್ವರ ದೇವಸ್ಥಾನದ ಹತ್ತಿರ ಬರುವದು. ಈ ಗ್ರಾಮ ದೇವತೆಗೆ ಉಡಿತುಂಬಿದ ಮೇಲೆಯೇ  ರೈತಾಪಿವರ್ಗ ತಮ್ಮ ಹೊಲಕ್ಕೆ ಕೂರಿಗೆ ಹಾಕುವರು. ಮಕ್ಕಳಿಗೆ ಗಣಜಲಿ, ಗೊಬ್ಬರ ಏನೇ ಬಂದರೂ ಈ ಗ್ರಾಮದೇವತೆಯ ಗುಡಿಗೆ ನಿರು ಹಾಕಿ ನೈವೇದ್ಯ ಕೊಡುವರು. ವಾರ ಮಾಡುವ ಮುಂದೆ ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳುಹಿಸುವದಿಲ್ಲ. ಒಂದು ವೇಳೆ ಕಳುಹಿಸುವ ಪ್ರಸಂಗ ಬಂದರೆ ಉಡಿ ತುಂಬುವ ದಿನ ಮತ್ತೆ ಕರೆಯಿಸಿಕೊಳ್ಳುವರು. ಈ ವಾರ ಹಿಡಿದಾಗ ರೈತರು ದುಡಿಮೆಗೆ ಹೋಗುವದಿಲ್ಲ. ಹೆಣ್ಣು ಮಕ್ಕಳು ಕುಟ್ಟುವದು, ಬೀಸುವದು, ರೊಟ್ಟಿ ಮಾಡುವದಾಗಲಿ ಮಾಡುವದಿಲ್ಲ.

ಕೊನೆಯ ವಾರ ಉಡಿಯನ್ನು ತುಂಬುವ ಪೂರ್ವದಲ್ಲಿ ಮಣ್ಣಿನ ಬಿಂದಿಗೆಗೆ ಅರಿವೆ ಕಟ್ಟಿ ಅದರಲ್ಲಿ ರೂಪಾಯಿ ಅಗಲ ರಂದ್ರ ಬಿಟ್ಟಿರುವರು. ಪ್ರತಿಯೊಬ್ಬ ಮನೆಯವರು ತಮಗೆ ತಿಳಿದಷ್ಟು ಕಾಣಿಕೆ ಹಾಕುವರು. ಅದೇ ಹಣದಿಂದ ಅದ್ದೂರಿಯಾಗಿ ದೇವಿಗೆ ಉಡಿ ತುಂಬುವರು.

ಇವಲ್ಲದೇ ಕುರುಬರ ಓಣಿಯ ಕರಿಯಮ್ಮಳ ಗುಡಿ, ಜೋಡು ಹನಮಪ್ಪನ ಗುಡಿ, ಲಕ್ಕವ್ವನ ಗುಡಿ. ಹಳ್ಳದ ದಂಡೆಯ ಹನುಮಪ್ಪನ ಗುಡಿ. ಮುಂತಾದ ದೇವಾಲಯಗಳು ಈ ಊರನ್ನು ಆಕ್ರಮಿಸಿವೆ.

ಹೀಗೆ ನಮ್ಮುರನ್ನು ನನ್ನ ಜೊತೆ ಓದುವದರ ಮೂಲಕ ಸುತ್ತಿದ ನಿಮಗೆ ಕಿಂಚಿತ್ ಧನ್ಯತಾ ಭಾವ ಬಂದಿದ್ದರೆ ನಾನು ಧನ್ಯ.” ಹೂವು ಇಲ್ಲ ಹಣ್ಣು ಇಲ್ಲ ಬಂದೆ ನಿನ್ನ ಗುಡಿಗೆ ಎಂದು ನಾ ಅಲೆದರೆ ವರವೂ ಇಲ್ಲ ಶಾಪವೂ  ಇಲ್ಲ ಹೋಗು ನಿನ್ನ ಮನೆಗೆ ಎಂದು ಯಾವ ದೇವರೂ ಹೇಳಲಿಲ್ಲ. ಬದಲಿಗೆ ಆ ಭಗವಂತ ಮನುಷ್ಯ ರೂಪದ ದೇವರನ್ನೇ ನನಗೆ ಮಾಹಿತಿ ನೀಡುವಂತೆ ಮಾಡಿದ. ಆ ದೇವರಿಗೆ ನಾನು ಚಿರಋಣಿ.

ಈ ದೇಗುಲಗಳೆಲ್ಲಾ ದೈವಿಕ ಕೇಂದ್ರ ಎಂದು ಗುರುತಿಸುವದಕ್ಕೆ ಅಂತಹ ಭಾರೀ ಕಸರತ್ತು ಏನೂ ಬೇಕಾಗಿಲ್ಲ. ಆದರೆ ಈ ದೇವಸ್ಥಾನಗಳನ್ನು ಮನುಷ್ಯ ಮಾಡಿದ್ದು. ಇವು ನಮ್ಮ ಹಿಂದಿನ ತಲೆಮಾರುಗಳ ಮನುಷ್ಯತ್ವದ ಕನಸಿನ ಪಳಿಯುಳಿಕೆಗಳು. ಇವತ್ತು ಇವು ಇತಿಹಾಸದ ಶಿಕ್ಷಣ ಕೇಂದ್ರಗಳಾಗಬೇಕು. ಈ ಊರಿನ ಜನತೆಯನ್ನು ಅವರ ಪರಂಪರೆಯೊಂದಿಗೆ ಕೂಡಿಸುವ ಕೊಂಡಿಗಳಾಗಬೇಕು. ಇಂದಿನ ದಿನಗಳಲ್ಲಿ ಇಂತಹ ಕಾಳಜಿಯೇ ತಾನೆ ಬೇಕಾಗಿರುವದು.?

ದಾನೇಶ್ವರಿ ಬಿ.ಸಾರಂಗಮಠ

ಸೆಲ್-9986318272

ಇ-ಮೇಲ್   daneshwaribs@gmail.com

Leave A Comment