ಹುನಗುಂದ ಪರಿಸರದ ಚಿಕ್ಕ ಜಲಪಾತಗಳು

ಕನ್ನಡ ನಾಡಿನಲ್ಲಿ ಅನೇಕ ಸುಪ್ರಸಿದ್ಧ ಜಲಪಾತಗಳು ಇಂದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೂ ಬಹು ಜನರ ಕಣ್ಣಿಗೆ ಬೀಳದ ಸ್ಥಳೀಯರಿಗೆ ಹಿತ್ತಲ ಗಿಡ ಏನಿಸಿದ ಅತ್ಯಂತ ಚಿಕ್ಕHungund Taluka Environment Falls ಜಲಪಾತಗಳು 4 ಇವೆ. ಈ ಜಲಪಾತಗಳು ತಮ್ಮ ಅಸ್ತಿತ್ವವನ್ನು ತೋರ್ಪಡಿಸುವುದು ಮಳೆಗಾಲದಲ್ಲಿ ಮಾತ್ರ. ಮಳೆ ಹೆಚ್ಚು ಬಿದ್ದಾಗ 6-7 ತಿಂಗಳಗಳವರೆಗೂ ನೀರು ಧುಮಕುತ್ತದೆ. ಇಲ್ಲದಿದ್ದರೆ ಕೆಲವೇÉ ತಿಂಗಳಲ್ಲಿ ಮಾಯವಾಗಿ ಬಿಡುತ್ತವೆ. ಕಾರಣ ಹಿಂದಿನ ದಿನಮಾನಗಳಲ್ಲಿ ಮಳೆ ಚೆನ್ನಾಗಿ ಆಗುತ್ತಿದ್ದ ಸಂದರ್ಭದಲ್ಲಿ ಇವು ಸುತ್ತಲಿನ ಪ್ರದೇಶದ ಜನರಿಗೆ ಪ್ರಸಿದ್ಧವಾಗಿದ್ದಿರಬಹುದು. ಇತ್ತೀಚಿಗೆ ಮಳೆ ಬೀಳುವ ಪ್ರಮಾಣ ಕಡಿಮೆಯಾಗಿರುವುದರಿಂದ ಇವು ಜಲಪಾತಗಳೆಂದು ಕರೆಯಿಸಿಕೊಳ್ಳುವುದು ಮಳೆಗಾಲದ ಕೆಲವೇ ತಿಂಗಳುಗಳಲ್ಲಿ. ಇಂಥ ಚಿಕ್ಕ ಜಲಪಾತಗಳು ಒಟ್ಟು ನಾಲ್ಕು. ಅವುಗಳಲ್ಲಿ ಕಪಿಲತೀರ್ಥ, ಧಮ್ಮೂರ ಪಕ್ಕದ ದಿಡಗನ ಬಸವೇಶ್ವರ ಕೊಳ್ಳ, ಹುಲಗೆಮ್ಮನ ಕೊಳ್ಳ ಮತ್ತು ಸಿದ್ದನಕೊಳ್ಳ ಎಂಬುವು ಚಿಕ್ಕ ಜಲಪಾತಗಳು.

1.            ಕಪಿಲೇಶ್ವರ ತೀರ್ಥ ( ಕಪಿಲಪ್ಪನ ಜಲಪಾತ) :

ಹುನಗುಂದದಿಂದ ಆಗ್ನೇಯ ದಿಕ್ಕಿಗೆ ಕಾಟಾಪೂರದ ಮಾರ್ಗವಾಗಿ ಕಬ್ಬರಗಿ ಎಂಬ ಹಳ್ಳಿಗೆ ಬಂದರೆ ಅಲ್ಲಿ 2 ಕೀ ಅಂತರದಲ್ಲಿ ಗುಡ್ಡದ ಬದಿಗೆ ಒಂದು ಆಲದ ಮರವಿದೆ. ಅಲ್ಲಿಯವರೆಗೆ ಯಾವುದೇ ವಾಹನ ಬಂದರೂ ಮರದ ನೆರಳಿಗೆ ವಾಹನ ನಿಲ್ಲಿಸಿ ಮುಂದೆ ಗುಡ್ಡದಲ್ಲಿ ನಡೆದುಕೊಂಡೆ ಹೋಗಬೇಕು. ಸುಮಾರು 1 ಮೈಲು ದೂರ ನಡೆದು ಹೋದರೆ 1 ಕೊಳ್ಳದ ಪ್ರದೇಶ ಸಿಗುತ್ತದೆ. ಮೂಲ ಉಗಮಸ್ಥಾನವೆಂದರೆ ಅಲ್ಲಿಂದ ನೈರುತ್ಯ ದಿಕ್ಕಿಗಿರುವ ಹಳ್ಳಿ ಗಾಣದಾಳ, ವೆಂಕಟಾಪುರ ಮಾರ್ಗವಾಗಿ ಚಂದ್ರಗಿರಿ ಗುಡ್ಡದ ವಾಡೆಯೊಂದಿಗೆ ಹರಿದು ಬರುವ ಸಣ್ಣ ಕಾಡುKapliappa Falls ಜರಿಯು ಈ ಕಪಿಲೇಶ್ವರ/ಕಪಿಲಪ್ಪನ ಕೊಳ್ಳ. ಸುಮಾರು 18-20 ಅಡಿ ಎತ್ತರದ ಬಂಡೆಯಿಂದ ಕೊಳ್ಳದಲ್ಲಿ ಧುಮುಕಿ ಜಲಪಾತವಾಗಿ ಪರಿವರ್ತನೆಯಾಗುತ್ತದೆ. ನೀರು ಹೆಚ್ಚು ಇದ್ದಾಗ ರಭಸದಿಂದ, ನೀರು ಕಡಿಮೆ ಇದ್ದಾಗ ಸಣ್ಣ ಧಾರೆಯಾಗಿ ಬೀಳುವ ನೀರಿಗೇ ಮೈ ಒಡ್ಡಿ ಸ್ನಾನ ಮಾಡುವ ಸ್ತ್ರೀ ಪುರುಷರೆಲ್ಲ ರಜಾ ದಿನಗಳಲ್ಲಿ ಕಾಣ ಸಿಗುತ್ತಾರೆ. ಉತ್ತಮ ಮಳೆಯಾಗಿ ನೀರು ಸಾಕಷ್ಟು ಬೀಳುತ್ತಿದೆ ಎಂಬುದನ್ನು ಹೋಗಿ ಬಂದ ಕೆಲವು ಜನರ ಬಾಯಿಂದ ಕೇಳಿದ ಸುದ್ದಿ ಹಬ್ಬಿ ಜನ ತಂಡೋಪ ತಂಡವಾಗಿ ಪ್ರವಾಸಿಗರಾಗಿ ಕೈಯಲ್ಲಿ ಬುತ್ತಿ ಚೀಲ ಹಿಡಿದು ಹೆಗಲ ಮೇಲೆ ಮತ್ತು ತಲೆಯ  ಮೇಲೆ ಅಡುಗೆ ಮಾಡುವ ಪಾತ್ರೆ ( ಅಗತ್ಯ ಅಡುಗೆ ಸಾಮಗ್ರಿ) ಗಳೊಂದಿಗೆ ಬರುವರು. ಇಲ್ಲಿಯೇ ಬಿಸಿ ಅಡುಗೆ ತಯಾರಿಸಿ, ಜಲಪಾತದ ಪಕ್ಕದಲ್ಲಿರುವ ಕಪಿಲೇಶ್ವರ ಲಿಂಗಕ್ಕೆ ನೈವೇದ್ಯ ಮಾಡಿ, ಸ್ನಾನದ ನಂತರ ಉಂಡು ಸಂತೋಷ ಪಡುತ್ತಾರೆ. ಎತ್ತರದ ಕಲ್ಲು ಬಂಡೆಯ ಮೇಲಿಂದ ಬೀಳುವ ನೀರಿನ ಎಡ ಬಲಗಳಲ್ಲಿ ಹಳೆಯ ಕಾಲದಿಂದಲೂ ನೋಡಲು ಬಿಳಲು ಬೇರುಗಳಿಂದ ಆಲದ ಮರವೇನೋ ಎಂಬ ಭ್ರಮೆ ಹುಟ್ಟಿಸುವ 2 ಕಲ್ಲತ್ತಿ ಮರಗಳಿವೆ. ಮಧ್ಯದಲ್ಲಿ ಸುರಿವ ನೀರಿಗೆ ಮೈ ಒಡ್ಡಿ ತಮ್ಮ ಬೆನ್ನು ನೋವು, ನಡು ನೋವು, ಮೊಳಕಾಲು ನೋವು ಕಳಕೊಂಡವರೂ ಇದ್ದಾರೆ. ಎತ್ತರದಿಂದ ಬೀಳುವ ನೀರಿಗೆ ದೇಹ ಚಾಚಿದಾಗ ದೇಹದ ನರನಾಡಿಗಳು ಸಡಿಲಗೊಂಡು ದೇಹಕ್ಕೆ ಹಿತವೆನಿಸುತ್ತದೆ, ನೋವು ಮಾಯವಾಗುತ್ತದೆ. ಈ ನೀರು ಸ್ವಚ್ಛ, ಶುಭ್ರವಾಗಿದ್ದು ಕುಡಿಯಲು ಯೋಗ್ಯವಾಗಿದೆ. ಯಾವ ಫಿಲ್ಟರ ವಾಟರ್ ಗಿಂತಲೂ ಕಡಿಮೆ ಏನಲ್ಲಾ. ಹಾಗೆ ನೋಡಿದರೆ ರಾಸಾಯನಿಕ ಮಿಶ್ರ್ರಿತ ಮಿನರಲ್ ಬಾಟಲಿ ನೀರಿಗಿಂತ ಇದು ಶ್ರೇಷ್ಠವಾದುದು ಎಂದೇ ಹೇಳಬಹುದು. ಏಕೆಂದರೆ ಇಲ್ಲಿಗೆ ಹರಿದು ಬರುವ ನೀರು ಇಲ್ಲಿನ ಕಾಡಿನ ಗಿಡ ಮರಗಳ ಬೇರು ಮತ್ತು ಮಣ್ಣಿನಲ್ಲಿರುವ ಖನಿಜಗಳೊಂದಿಗೆ ಹರಿದು ಬರುವುದರಿಂದಾಗಿ ಸಹಜ ಮಿನರಲ್‍ಗಳನ್ನೊಳಗೊಂಡಿರುತ್ತದೆ. ಕೃತಕ ಬಾಟಲಿ ನೀರಿಗಿಂತಲೂ ರುಚಿಯಾಗಿರುತ್ತದೆ. ಔಷಧಿಯ ಗುಣ ಹೊಂದಿರುವುದರಿಂದ ಸ್ನಾನಕ್ಕೂ ಯೋಗ್ಯವೆ. ಮುಟ್ಟಿದರೆ ಶೀತವಾಗಿ ಬೇಸಿಗೆಯಲ್ಲಿ ಫ್ರಿಡ್ಜ ನೀರು ಕುಡಿದಂತೆ ಅನಿಸುತ್ತದೆ. ಈ ಕೊಳ್ಳದಲ್ಲಿ ಸುತ್ತಮುತ್ತ ಇತರ ಗಿಡ ಮರಗಳು ಚಾಚಿಕೊಂಡು ನೆರಳು ಕವಿದಿರುವುದರಿಂದ ವಾತಾವರಣ ತಂಪು ಎನಿಸುತ್ತದೆ. ಇದರಿಂದಾಗಿ ಇಲ್ಲಿ ಸದಾ ಪ್ರವಾಸಿಗರು ಇದ್ದೇ ಇರುತ್ತಾರೆ. ಆದರೆ ಮಳೆಗಾಲದಲ್ಲಿ ಕುರಿಗಾರರಿಗೆ ದನ ಕರುಗಳಿಗೆ ನೀರಿನ ಆಸರೆಯಾಗಿರುವ ಇದು ಅಂಥವರ ಬದುಕಿನ ಆಸರೆ ಇದಾಗಿದೆ. ಏಕೆಂದರೆ ಇಲ್ಲಿಂದ ಹರಿದು ಬಂದ ನೀರು ಸ್ವಲ್ಪೇ ದೂರದಲ್ಲಿ ಕೆರೆಯ ರೂಪದಲ್ಲಿ ಕಟ್ಟಿ ನೀರು ನಿಲ್ಲಿಸಲಾಗಿದೆ. ಇದರಿಂದಾಗಿ ಸುತ್ತಲಿನ ಹೊಲದವರಿಗೂ ಸ್ವಲ್ಪ ಸಹಾಯಕ ತಾಣವೇ ಆಗಿದೆ.

ಬಹುಶಃ ಹಿಂದೆ ಆಕಳು / ಕಪಿಲೆಗಳು ಬಹಳ ಇದ್ದು ನಾಡು ಕಪಿಲೆಗಳನ್ನು ಮೇಯಿಸಲು ಹೋದಾಗ ನೀರಿನಾಸರೆಗಾಗಿ ಕೊಳ್ಳವನ್ನು ಆಶ್ರಯಿಸುತ್ತಿದ್ದರೆಂದು ಕಾಣುತ್ತದೆ. ನೀರಿನ ಸ್ಥಾನ ಎಂದಾಗ ಭಕ್ತಿ ಭಾವದಿಂದ ಅಲ್ಲಿ ಯಾರೋ ಸ್ಥಾಪಿಸಿದ ಲಿಂಗವೇ ಕಪಿಲೇಶ್ವರನಾಗಿ ಚಿಕ್ಕ ದೇವಾಲಯ ಹೊಂದಿ ಮುಂದೆ ಜನರ ಬಾಯಿಯಲ್ಲಿ ಕಪಿಲೆಯ ಅಪ್ಪನಾಗಿ, ಕೆಲವರು ಕಪಿಲಪ್ಪ ಅಂತಲೂ ಕರೆದಿರಬಹುದು. ಆದರೆ ವಿಚಿತ್ರವೆಂದರೆ ಆ ಕಪಿಲೇಶ್ವರ ದೇವಸ್ಥಾನದ ಗೋಡೆಯ ಮೇಲೆ ಯಾರೋ “ ಕಪಿಲೇಶ್ವರ ಪುರಾಣ “ ಎಂದು ಬರೆದು ಅಚ್ಚಿನಲ್ಲಿದೆ ಎಂದು ನಮೂದಿಸಿ ಪಕ್ಕದಲ್ಲಿ ಫೋನ ನಂಬರ ಹಾಕಿದ್ದಾರೆ. ಇದರಿಂದ ಈಗಾಗಲೇ ಈ ಸ್ಥಳ ಮಹಿಮೆ ಮತ್ತು ಕಪಿಲೇಶ್ವರನನ್ನು ಕುರಿತು ಪುರಾಣ ಕೃತಿ ರಚನೆಯಾಗಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ.

2.            ದಿಡಗನ ಬಸವೇಶ್ವರ ಕೊಳ್ಳ (ಧಮ್ಮೂರ ಫಾಲ್ಸ) ದ ಜಲಪಾತ :Dammur Falls

ಕಪಿಲೇಶ್ವರದಿಂದ ಹಿಂತಿರುಗಿ ಕಬ್ಬರಗಿಗೆ ಬಂದು ಪಶ್ಚಿಮ ದಿಕ್ಕಿಗೆ 1-2 ಕೀ ದೂರ ಕ್ರಮಿಸಿದರೆ ಧಮ್ಮೂರ ಎಂಬ ಹಳ್ಳಿ ಬರುತ್ತದೆ. ಅಲ್ಲಿಂದ ದಕ್ಷಿಣಕ್ಕೆ ಮುಖ ಮಾಡಿದರೆ ಎತ್ತರದ ಗುಡ್ಡ ಕಣ್ಣಿಗೆ ಬೀಳುತ್ತದೆ. ದಿಟ್ಟಿಸಿ ನೋಡಿದರೆ ಹೌದೋ ಅಲ್ಲವೋ ಎಂಬಂತೆ ಕೋಟೆ ಗೋಡೆ ಕಾಣುತ್ತದೆ. ಸುಮಾರು 4-5 ವೀಕ್ಷಣಾ ಗೋಪುರಗಳು  ಅಂದರೆ ರಾಜರ ಆಳ್ವಿಕೆಯ ಕಾಲದಲ್ಲಿ ಹುಡೆ ಅಥವಾ ಬತೇರಿಗಳೆನಿಸಿಕೊಳ್ಳುವ ದೊಡ್ಡ ಕಲ್ಲಿನ ಎತ್ತರವಾದ ಬುರುಜು ಕಾಣುತ್ತದೆ. ಅಲ್ಲಿಂದ ಮುಂದೆ ಹೋದರೆ ಎಡಕ್ಕೆ ಧಮ್ಮೂರ ಕೆರೆ, ಬ¯ಕ್ಕೆ ಗುಡ್ಡ ಕಾಣುತ್ತದೆ. ಆದರೆ ಮುಂದೆ ಬಲಕ್ಕೆ ಸರಕಾರಿ ಕಟ್ಟಡ ಒಂದು ಕಾಣುತ್ತದೆ, ಅಲ್ಲದೇ ನೆಲಕ್ಕೆ ಗಾರೆ ಹಾಕಿದ ರಸ್ತೆ ಇತ್ತೀಚಿಗೆ ಸರಕಾರದ ಅನುದಾನದಲ್ಲಿ ಗ್ರಾಮ ಪಂಚಾಯತಿಯವರು ನಿರ್ಮಿಸಿದ್ದಾರೆ. ಮುಂದೆ ಹೋದರೆ ಎತ್ತರದ ಗುಡ್ಡವನ್ನು ಕೊಳ್ಳವಾಗಿ ಕೊರೆದ  ನೀರಿನ ಸ್ಥಾನ ಸಿಗುತ್ತದೆ. ಆದರೆ ಕಲ್ಲು ಬಂಡೆ ಕೇವಲ 12 ರಿಂದ 15 ಅಡಿ ಎತ್ತರವಾಗಿದ್ದು ಇಲ್ಲೂ ಅದರ ಮೇಲೆ ಸುರಿವ ನೀರು ಸಣ್ಣ ಪ್ರಮಾಣದಲ್ಲಿದ್ದು, ಅದರ ಅಕ್ಕ ಪಕ್ಕದಲ್ಲಿ 2 ಕಲ್ಲತ್ತಿ ಮರಗಳು, ಎಡ ಭಾಗದಲ್ಲಿ ಬಿದರು ಮೇಳೆಯೂ ಇದೆ. ಆದರೆ ಕಪಿಲೇಶ್ವರ ಜಲಪಾತದಷ್ಟು ಬಿರುಸಾಗಿ ನೀರು ಬೀಳುವುದಿಲ್ಲಾ. ಮಳೆ ಹೆಚ್ಚಾದಾಗ ಮಾತ್ರ ಸ್ವಲ್ಪ ಬಿಳಲು ಬೇರಿನೊಂದಿಗೆ ಸುರಿವ ನೀರು ಕಾಣುತ್ತದೆ. ಕೆಲವೇ ತಿಂಗಳುಗಳಲ್ಲಿ ಇಲ್ಲಿನ ಜಲಪಾತ ಬತ್ತಿ ಹೋಗುತ್ತದೆ. ನೀರಿನ ಬದಿಯಲ್ಲೇ ಒಂದು ಸಣ್ಣ ದೇವಸ್ಥಾನವಿದ್ದು ಅದರಲ್ಲಿ ಗವಿಯಂತೆ ಚಾಚಿಕೊಂಡ ಬಂಡೆಯ ಕೆಳ ಭಾಗದಲ್ಲಿ ಬಸವನ ಚಿಕ್ಕ ನಂದಿ ಮೂರ್ತಿಯಿದ್ದು ಅದರ ಮುಂಭಾಗದಲ್ಲಿ ಅದಕ್ಕಿಂತ ಸ್ವಲ್ಪ ದೊಡ್ಡ ಲಿಂಗ ಮೂರ್ತಿ ಇದೆ. ಶಿವನಿಗಿಂತ ಭಕ್ತ ದೊಡ್ಡವ ಎಂಬುದು ಒಂದು ಹೇಳಿಕೆ. ಆದರೆ ಇಲ್ಲಿ ಲಿಂಗದ ಎದುರಿಗೆ ಇರಬೇಕಾದ ನಂದಿ/ ಬಸವನ ಮೂರ್ತಿ ಲಿಂಗದ ಹಿಂಭಾಗದಲ್ಲಿ ಚಿಕ್ಕದಾಗಿದೆ. ಇತ್ತೀಚಿಗೆ ಒಬ್ಬರು ಭಕ್ತರ ಭಕ್ತಿ ಸೇವೆಯ ಹಿನ್ನೆಲೆಯಲ್ಲಿ 4-5 ಅಡಿ ಎತ್ತರದ ಸುಂದರ ನಂದಿ / ಬಸವಣ್ಣನ ಮೂರ್ತಿಯನ್ನು ಅದರ ಎಡ ಭಾಗದಲ್ಲಿ ಸ್ಥಾಪಿಸಿ ದೇವಾಲಯ ನಿರ್ಮಿಸಿದ್ದು ಕೃತಕವೆನಿಸುತ್ತದೆ. ಒಂದು ಅಭಾಸಕರ ಸಂಗತಿ ಏನೆಂದರೆ ಇಲ್ಲಿ ಸ್ತ್ರೀಯರಿಗೆ ಸ್ನಾನವಾದ ನಂತರ ಬಟ್ಟೆ ಬದಲಾಯಿಸಲು ಪ್ರತ್ಯೇಕ ವ್ಯವಸ್ಥೆ ಇಲ್ಲದಿದ್ದರಿಂದ ನೀರು ಧುಮುಕುವ ಬಂಡೆಯ ಮೇಲೆ ಪಕ್ಕದ ಮೆಟ್ಟಲೇರಿ ಹೋಗಿ ಅಲ್ಲಿ ಹರಿದು ಬರುವ ನೀರಲ್ಲಿ ಕಳಚಿದ ಬಟ್ಟೆಯನ್ನು ತೊಳೆಯುವುದೊಂದು ದುರಭ್ಯಾಸ ಎನ್ನಬೇಕು. ಎಕೆಂದರೆ ಅದೇ ನೀರು ಪುನಃ ಜಲಪಾತದ ಮೂಲಕ ಕೆಳಗೆ ಸುರಿಯುತ್ತದೆ. ಅದರ ಕೆಳಗೆ ನಿಂತು ಸ್ನಾನ ಮಾಡುವವರು ಅಂತಹ ಹೊಲಸು ನೀರಲ್ಲಿ ಮೈಚಾಚಿ ನಿಲ್ಲುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲವೆನೆಸುತ್ತದೆ.

ಸ್ಥಳೀಯ ನಿವಾಸಿಗಳ ಪ್ರಕಾರ ದಿಡುಗ ಎಂದರೆ ದಿಬ್ಬದಂತೆ ಎತ್ತರ ಪ್ರದೇಶವೆಂದು ಹೇಳಲ್ಪಡುತ್ತದೆ. ಆದರೆ ಅಚ್ಚ ಕನ್ನಡದ ದಿಡುಗು ಎಂಬ ಪದಕ್ಕೆ ಜಲಪಾತ, ಧಬಧಬೆ, ಪ್ರಪಾತ ಎಂಬ ಅರ್ಥವೇ ಸ್ಪಷ್ಟವಾಗಿದೆ. ಒಟ್ಟಿನಲ್ಲಿ ಜಲಪಾತದ ಪಕ್ಕದಲ್ಲಿ ತೀರ್ಥ ಕ್ಷೇತ್ರವೆನ್ನಲು, ಜನರಿಗೆ ಧಾರ್ಮಿಕ ಭಾವ ವ್ಯಕ್ತ ಪಡಿಸಲು ಒಂದು ದೇವಸ್ಥಾನದ ಅವಶ್ಯಕತೆ ಎಂಬುದು ಜನರ ಭಾವನೆ. ಅಂಥ ಭಕ್ತನೊಬ್ಬ ಬಸವನ ಮೂರ್ತಿಯೊಂದನ್ನು ಸ್ಥಾಪಿಸಿದ್ದರಿಂದ ಜಲಪಾತದ ಪಕ್ಕದ ಬಸವನೇ ದಿಡುಗಿನ ಬಸವೇಶ್ವರ ಎನಿಸಿದ್ದಾನೆ. ಇಲ್ಲಿಯೂ ರಜಾ ದಿನಗಳಲ್ಲಿ ಕೆಲವು ಜನ ಕುಟುಂಬ ಸಮೇತ ಬಂದು ಸ್ನಾನ ಮುಗಿಸಿ ಕೆರೆಯ ಪಕ್ಕದ ಗಿಡ ಮರಗಳ ಗುಂಪಿನಲ್ಲಿ ಅಡುಗೆ ಮಾಡಿ ಉಣ್ಣುವ ದೃಷ್ಯ ಕಾಣುತ್ತದೆ.

3.            ಹುಲಗೆಮ್ಮನ ಕೊಳ್ಳದ ಜಲಪಾತ :Hulagemmanakolla Falls

ಧಮ್ಮೂರದಿಂದ ಗುಡೂರು, ಪಟ್ಟದಕಲ್ಲು ಮಾರ್ಗವಾಗಿ ಸಾಗಿ ಅಲ್ಲಿಂದ 5-6 ಕೀ. ಹೋದರೆ ಜಾಲಿಹಾಳ ಎಂಬ ಗ್ರಾಮ. ಅಲ್ಲಿಂದ ಸುಮಾರ 2 ಕೀ. ವಾಯವ್ಯ ದಿಕ್ಕಿಗೆ ಕ್ರಮಿಸಿದರೆ ಹುಲಿಗೆಮ್ಮನ ಕೊಳ್ಳ ಸಿಗುತ್ತದೆ. ಇತ್ತೀಚೆಗೆ ಲೋಕೋಪಯೋಗಿ ಇಲಾಖೆ ಕಣ್ಣು ತೆಗೆದ ಕಾರಣ ರಸ್ತೆ ಜಲ್ಲಿ ಕಲ್ಲು- ಗರಸುಗಳ ಮಿಶ್ರಣದ ಮೇಲೆ ರಸ್ತೆ ನಿರ್ಮಿಸಲಾಗಿದೆ. ಇನ್ನಷ್ಟೆ ಡಾಂಬರ ಹಾಕುವುದು ಬಾಕಿ ಇದೆ. ಆ ಕೆಲಸ ಪ್ರಗತಿಯಲ್ಲಿದೆ.

ಈ ಕೊಳ್ಳದಲ್ಲಿ ಕೆಲವೇ ಮೆಟ್ಟಿಲು ಹತ್ತಿ ಮುಂದೆ ಸಾಗಿದರೆ ಅತಿ ಎತ್ತರದ ಬಂಡೆಯಿಂದ, ಸುಮಾರು 100 ಅಡಿ ಎತ್ತರ ವಿಶಾಲವಾಗಿ ಪೂರ್ವ ಪಶ್ಚಿಮವಾಗಿ ಚಾಚಿಕೊಂಡ ಅಖಂಡ ಬಂಡೆಯಿಂದ ನೀರು ಅಗಲವಾಗಿ ಸುರಿಯುತ್ತದೆ. ಆದರೆ ಗಾಳಿಗೆ ಅದರ ಮೂಲಕವೇ ಜೋತು ಬಿದ್ದ ಬೇರಿನ ಅಕ್ಕ ಪಕ್ಕದಲ್ಲಿ ನೀರು ವಾಲಾಡಿ ಎಡ ಬಲಕ್ಕೆ ಸರಿದಾಡುತ್ತಿದೆ. ಅಂದರೆ ಕೆಳಗೆ ಸಾಲಾಗಿ ಸ್ನಾನಕ್ಕೆ ನಿಂತವರ ಮೇಲೆ ಕ್ಷಣ ಕಾಲ ಬಲಭಾಗ- ಮತ್ತೊಂದು ಕ್ಷಣ ಎಡಭಾಗದ ಜನರನ್ನು ತೋಯಿಸುತ್ತದೆ. ಜಲಪಾತದ ಬಲಬದಿಗೆ ಮೆಟ್ಟಿಲು ಏರಿದಾಗ ಒಳಕ್ಕೆ ಹಿಂದೆ ಚಾಚಿಕೊಂಡಂತಿರುವ ಬಂಡೆಯ ಕೆಳಗೆ ಕಲ್ಲು ಗೋಡೆ ಏರಿಸಿ ದೇವಾಲಯ ಕಟ್ಟಲಾಗಿದೆ. ನೀರು ಬೀಳುವ ಧಾರೆಯ ಹಿಂಭಾಗದಲ್ಲೇ ಹುಲಿಯ ವಾಹನೆಯಾದ ಅಮ್ಮ, ಹುಲಿಗೆಮ್ಮನ ಸುಂದರ ಕಪ್ಪು ಶಿಲೆಯ ವಿಗ್ರಹ ಈಗಲೂ ಪೂಜೆಗೊಳ್ಳುತ್ತದೆ. ಅದರ ಪಕ್ಕದ ದೇವಾಲಯ ಕೋಣೆಯಲ್ಲಿ 2 ಅಡಿಯ ಒಂದು ಶಿವಲಿಂಗವಿದ್ದು ಅದರ ಎದುರಿಗೆ ಪೂರ್ವಾಭಿಮುಖವಾಗಿ ಹೋರಗೆ 4 ಅಡಿ ಎತ್ತರದ ಒಂದು ನಂದಿಯ ವಿಗ್ರಹವಿದೆ. ಈ ಎರಡರ ಮಧ್ಯದಲ್ಲಿ ಒಳಚಾಚಿದ ಆ ಬೃಹತ್ ಬಂಡೆಯನ್ನೇ ಬಳಸಿ ಬ್ರಹ್ಮ ವಿಷ್ಣು ಉಮಾ ಮಹೇಶ್ವರ ಮೂರ್ತಿ ಶಿಲ್ಪ ಕೆತ್ತಲಾಗಿದೆ. ಅವುಗಳ ಎಡ ಪಕ್ಕದಲ್ಲಿ ಸಪ್ತ ಮಾತೃಕೆಯರನ್ನು ಕೆತ್ತಲಾಗಿದೆ. ಅವುಗಳ ಪಕ್ಕದಲ್ಲಿ ಒಂದು ಗಣಪತಿ ಚಿತ್ರ ಕೆತ್ತಲಾಗಿದೆ. ಇವು ನೋಡಲು ಆಕರ್ಷಕವಾಗಿಯೂ ಇವೆ. ಹುಲಿಗೆಮ್ಮನ ವಿಗ್ರಹದ ಬಲ ಪಕ್ಕದಲ್ಲಿ ಒಂದು ಲಕ್ಷ್ಮಿ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅದರ ಎಡ ಭಾಗದಲ್ಲಿ ಒಂದು ದಾಸೋಹ ಭವನವಿದೆ. ಅದರ ಪಶ್ಚಿಮ ಭಾಗದಲ್ಲಿ ಸುಮಾರು 1 ಕೀ. ಒಳ ಹೋಗಬಲ್ಲ ಗವಿಯ ಮಾರ್ಗವಿದೆ ಎಂದು ಹೇಳಲಾಗುತ್ತದೆ. ಇದೇ ಗವಿಯಲ್ಲಿ ವಾಸವಾಗಿದ್ದ ವ್ಯಾಘ್ರ ಪಾದ ಮುನಿಗಳು ಗವಿಯ ಹೊರ ಭಾಗದಲ್ಲಿ ಕೂತು ತಪಸ್ಸು ಮಾಡುತ್ತಿರುವಾಗ ಕಾಗೆಯೊಂದು ಅವರ ಮೇಲೆ ವಿಷ್ಟಿಸಿದ್ದರಿಂದ ವ್ಯಘ್ರರಾದ  ಮುನಿ ಶಾಪ ಕೊಟ್ಟ ಕಾರಣ ಇಂದಿಗೂ ಇಲ್ಲಿ ಕಾಗೆಗಳ ಸುಳಿವೇ ಇಲ್ಲ ಎಂಬುದು ಇಲ್ಲಿನ ಅರ್ಚಕರ ಹೇಳಿಕೆ. ಇನ್ನೊಂದು ಐತಿಹ್ಯದ ಪ್ರಕಾರ ಇದೇ ಹುಲಿಗೆಮ್ಮ ಮುನಿರಾಬಾದ ಸಮೀಪದಲ್ಲಿ ಹೋಗಿ ನೆಲೆಸಿದ್ದು, ಹುಲಿಗೆಮ್ಮನ ದೇವಸ್ಥಾನ ಇನ್ನೂ ಪ್ರಸಿದ್ಧವೆನಿಸಿದೆ. ಅದರ ಮೂಲ ನೆಲೆ ಈ ಕೊಳ್ಳದ ದೇವಸ್ಥಾನ ಎನ್ನಲಾಗುತ್ತಿದೆ. ಇಲ್ಲಿ ದುರ್ಗೆ / ಈ ಅಮ್ಮ ತಪಸ್ಸಿಗೆ ತೋಡಗಿದ ಸಂದಂರ್ಭದಲ್ಲಿ ಈ ಕೊಳ್ಳದ ಹುಲಿಯೊಂದು ಕಾವಲು ಸೇವೆಯನ್ನು ಮಾಡುತ್ತಿದ್ದುದರಿಂದ ಈಕೆಗೆ ಹುಲಿಗೆಮ್ಮ ಎಂಬ ಹೆಸರು ಆಗಿದೆ ಎನ್ನಲಾಗುತ್ತದೆ. 1) ಬ್ರಾಹ್ಮಿ 2) ಮಹೇಶ್ವರಿ 3) ಕೌಮಾರಿ 4) ವೈಷ್ಣವಿ 5) ವಾರಾಹಿ 6) ಇಂದ್ರಾಣಿ 7) ಚಾಮುಂಡಾ ಎಂಬ 7 ಜನ ತಾಯಂದಿರು ಮೂಲ ಅಗ್ನಿ ಕನ್ನಿಕೆಯರು.

ಮತ್ತೊಂದು ಮೂಲದ ಪ್ರಕಾರ ಬದಾಮಿಯ ಚಾಲುಕ್ಯರು ಪಟ್ಟದಕಲ್ಲು ದೇವಸ್ಥಾನವನ್ನು ನಿರ್ಮಿಸುವ ಕಾಲಕ್ಕೆ ಈ ಕೊಳ್ಳ ಚಾಲುಕ್ಯರ ಸೈನ್ಯ ಮತ್ತು ಖಜಾನೆಯ ಮೂಲ ನೆಲೆಯಾಗಿತ್ತು. ಅದೇ ವೇಳೆಗೆ ಇಲ್ಲಿ 12 ಜ್ಯೋತಿರ್ಲಿಂಗಗಳನ್ನು ಸ್ಥಾಪಿಸಲಾಗಿತ್ತು. ಅವುಗಳ ಮೇಲೆ ಚಾಲುಕ್ಯ ಶೈಲಿಯ ಗೋಪುರವಿರುವ ಚಿಕ್ಕ ದೇವಾಲಯಗಳನ್ನು ನಿರ್ಮಿಸಲಾಗಿತ್ತು. ಅವುಗಳಲ್ಲಿ ಒಂದು ಬಿದ್ದು ಹೋಗಿ ಉಳಿದ 11 ಲಿಂಗಗಳು ಇಂದೂ ಪಳೆಯುಳಿಕೆಗಳಾಗಿ ಚಿಕ್ಕ ಚಿಕ್ಕ ದೇಗುಲಗಳೊಂದಿಗೆ ಉಳಿದುಕೊಂಡಿವೆ. ಆದರೆ ಇಲ್ಲಿನ ಅರ್ಚಕರ ಪ್ರಕಾರ ಇವು ಮೂಲ ಜಕಣಾಚಾರಿಯಿಂದ ಕೆತ್ತಲ್ಪಟ್ಟ ಶಿಲ್ಪಗಳು ಎಂಬ ವಿವರಣೆ.

ಜಲಪಾತದ ಎಡ ಪಕ್ಕದಲ್ಲಿ ಎಂದೂ ಬತ್ತದ ಒಂದು ಹೊಂಡವಿದೆ. ಅದರಿಂದ ಹೊರ ಬರುವ ನೀರು ಮಾತ್ರ ಯಾವ ಕಾಲಕ್ಕೂ ತಿಳಿಯಾಗಿರದೆ; ಹಳದಿ ಮಿಶ್ರಿತ ಮಣ್ಣಿನ ರಾಡಿ ನೀರು ಸದಾ ಹರಿಯುತ್ತಿರುತ್ತದೆ. ಅಂದರೆ ಕಡಿದಾದ ಬಂಡೆಯ ಮೇಲಿನಿಂದ ಸುರಿಯುವ ನೀರು ನಿಂತೂ ಹೋದರೂ ಇದು ತಳ ಮಟ್ಟದಲ್ಲಿ ಬಂಡೆಯ ಕೆಳ ಭಾಗದಲ್ಲಿ ಚಿಮ್ಮಿ ಬರುವ ಉಟೆಯಿಂದಾಗಿ ಮಣ್ಣಿನ ಬಣ್ಣದ ನೀರು ಹೊರ ಹರಿಯುತ್ತದೆ. ಅದೇ ಹುಲಿಗೆಮ್ಮನ ತೀರ್ಥ. ಅದರ ಮುಂಭಾಗದ ಕುಬೇರನ ಗುಡಿಯ ಒಳಭಾಗದ ಗುಹೆಯಲ್ಲಿ ಚಾಲುಕ್ಯ ಅರಸ ವಿಕ್ರಮಾದಿತ್ಯನ ಸಮಾಧಿ ಇದೆ ಎಂದೂ ಹೇಳಲಾಗುತ್ತದೆ ಆದರೆ ಅದರ ಕುರಿತು ದಾಖಲೆಗಳು ಇಲ್ಲಿ ಸಿಗುತ್ತಿಲ್ಲ.

ಕಡಿದಾದ ಬಂಡೆಯ ಮೇಲೆ ನಿಸರ್ಗ ನಿರ್ಮಿತ 4 ಹೊಂಡಗಳಿವೆ ಎಂಬ ಹೇಳಕೆಯ ಪರೀಕ್ಷೆಗಾಗಿ ಛಲ ತೊಟ್ಟು ಬೆಟ್ಟ ಹತ್ತು ಸಾಹಸಕ್ಕೆ ತೊಡಗುವುದು ಮಾತ್ರ ಒಂದು ರೋಮಾಂಚಕ ಅನುಭವವನ್ನೇ ನೀಡುತ್ತದೆ. ಒಬ್ಬ ದಾರಿದರ್ಶಕ ಬಾಲಕನೊಂದಿಗೆ ಪೂರ್ವ ದಿಕ್ಕಿನ ಕಡೆಗೆ ದಟ್ಟ ಗಿಡ ಮರ ಮತ್ತು ಕಲ್ಲುಗಳ ಸಂಧಿಯಲ್ಲಿ ಬೆಟ್ಟ ಏರುವ ಚಾರಣ ಕಾರ್ಯವೇ ಒಂದು ಅದ್ಭುತ ಅನುಭವ ನೀಡುವಂಥಾದ್ದು. ಏಕೆಂದರೆ 2-3 ಕಡೆಗೆ ಕಲ್ಲು ದಾರಿ ಬಹಳಷ್ಟು ಕಡಿದಾದ ಕಲ್ಲುಗಳನ್ನು ಸಾಹಸದಿಂದ ಏರಿ ಹೋದರೆ ಒಂದು ಮೈಲುದ್ದ ಹಾಸು ಬಂಡೆ ಹಾಸಿದ್ದು ಎಲ್ಲೂ ಗಿಡ ಮರಗಳಿಲ್ಲ. ದೂರದ ಗುಡ್ಡದಲ್ಲೆಲ್ಲೊ ಉಟಿ ಕಿತ್ತಿ/ ಶೆಲೆಯೊಡೆದು ಹರಿದು ರಭಸವಾಗಿ ಬರುವ ನೀರಿನಿಂದಾಗಿ ಆ ಹಾಸು ಬಂಡೆಯ ಮಧ್ಯ ಕಾಲುವೆಯನ್ನು ಕೊರದಂತೆ ಕಾಣುತ್ತದೆ. ಅದರಲ್ಲಿ ಹರಿದು ಬರುವ ನೀರು ಮಳೆಗಾಲ ಕಡಿಮೆಯಾಗಿರುವ ಇಂದಿನ ದಿನಗಳಲ್ಲಿ ನಿರಾಶೆ ಮೂಡಿಸುವಷ್ಟು ಕಡಿಮೆ ಎಂದೆ ಹೇಳಬೇಕು. ಇನ್ನು ಕಣ್ಣಿಗೆ ಬಿದ್ದ 3 ನೈಸರ್ಗಿಕ ಹೊಂಡಗಳಲ್ಲಿ ತುಂಬಿಕೊಂಡು ಅತ್ಯಂತ ಕಡಿದಾದ ಎತ್ತರದ ಬಂಡೆಯಿಂದ ಕೆಳಗೆ ಧುಮ್ಮಿಕ್ಕುವ ಜಲ ಪ್ರವಾಹವನ್ನು ನೋಡುವುದೇ ಒಂದು ಚಂದ. ಕೆಳಗೆ ಇಣುಕಿದರಂತೂ ನಾವೂ ಆಕಾಶದ ಯಾವುದೋ ಲೋಕದಲ್ಲಿದ್ದೇವೆ ಎಂಬ ಹೆಮ್ಮೆ ಮೂಡುತ್ತದೆ. ಅಕಸ್ಮಾತ ಕಣ್ಣು ತಿರುಗಿ ಕೆಳಗೆ ಬಿದ್ದರೆ ಮನುಷ್ಯನ ಯಾವ ಅಂಗಗಳು ಗುರ್ತು ಸಿಗದಂತೆ ಪುಡಿಯಾದಾವು. ಆದ್ದರಿಂದ ಹೀಗೆ ಮೇಲೆ ಹತ್ತುವ ದುಸ್ಸಾಹಸಕ್ಕೆ ತೋಡಗದಿರುವುದೆ ಒಳ್ಳೆಯದು. ಹಿಂತಿರುಗಿ ಇಳಿದು ಬರಬೇಕಾದರೆ ಇನ್ನೂ ಕಷ್ಟ. ಏಕೆಂದರೆ ಕಾಲು ಜಾರಿದರೆ ಪ್ರಪಾತವೇ ಗತಿ.

4.            ಸಿದ್ದನಕೊಳ್ಳ ಜಲಪಾತ :Siddhanakolla Falls

ಐಹೊಳೆಯಿಂದ 8 ಕಿ ಮೀ ಅಥವಾ ಪಟ್ಟದ ಕಲ್ಲಿನಿಂದ 10 ಕಿ ಮೀ ಅಂತರದಲ್ಲಿರುವ ಸಿದ್ದನಕೊಳ್ಳದ ಜಲಪಾತಕ್ಕೆ ಪಶ್ಚಿಮದ ಕಡೆಯಂದ ಹೊರಟರೆ ಬಹಳ ಕಡಿದಾದ ಕಲ್ಲು ಚಪ್ಪಡಿಯಿಂದ ರಚಿಸಿದ ರಸ್ತೆಯಿದೆ. ವಾಹನ ಗುಡ್ಡ ಏರಿದಂತೆ ಏರಬೇಕು. ಏರದಿದ್ದರೆ ನಡೆದು ಹೋಗಬೇಕು ಉತ್ತರದ ಕಡೆಯಿಂದ / ದಕ್ಷಿಣದ ಕಡೆಯಿಂದ ಬಂದರೂ ಕೆಲೂರ ಹತ್ತಿರದಿಂದ ಹೋಗಲು ಉತ್ತಮ ಡಾಂಬರ ರಸ್ತೆ ಇದೆ. ಭೂಮಿ ಮಟ್ಟದಿಂದ ಸಮತಳ ನೆಲದಿಂದ ಕೊಳ್ಳ ನಿರ್ಮಾಣವಾಗಿದೆ. 8-10 ಅಡಿ ಎತ್ತರದಿಂದ ನೀರು ಸಣ್ಣ ಧಾರೆಯಾಗಿ ನಿಧಾನವಾಗಿ ಸುರಿಯುತ್ತದೆ. ವಿಶೇಷವೆಂದರೆ ಇದರ ನೀರು ಪೂರ್ವದಿಕ್ಕಿನಿಂದ ಪಶ್ಚಿಮದ ಕಡೆಗೆ ಹರಿಯುತ್ತದೆ. ಸಣ್ಣ ಧಾರೆಯಾಗಿ ಬೀಳುವ ದೃಶ್ಯ ನೋಡಿ ಇದೆಂಥ ಜಲಪಾತ ಬಿಡು ಎಂಬ ನಿರಾಶಾ ಭಾವ ಮೂಡುತ್ತದೆ. ಆದರೆ ಈಗಿನ ಸ್ವಾಮಿಗಳಿಗೆ ವಾಸಸ್ಥಾನ ಮತ್ತು ಮಹಾತ್ಮರ ಗದ್ದುಗೆಯಿರುವÀ ಕಟ್ಟಡದ ಭಾಗದಿಂದ ಉತ್ತರಾಭಿಮುಖವಾಗಿ ಕೆಲವು ಮೆಟ್ಟಿಲುಗಳನ್ನು ಇಳಿದು ಹೋದರೆ ಬಲ ಭಾಗದಲ್ಲಿ ಒಂದು ಗವಿಯ ಚಿಕ್ಕ ದ್ವಾರವಿದೆ. ಅದರ ಕೆಳಭಾಗದಲ್ಲಿ ಊಟೆ ಕಿತ್ತ ಸದ್ದು ಕೇಳುತ್ತದೆ. ಅಲ್ಲಿಂದ ಹರಿದು ಮೇಲಿನ ಜಲಪಾತÀದಿಂದ ಸುರಿಯುವ ನೀರಿನೊಂದಿಗೆ ಸೇರಿ ಪಶ್ಚಿಮದ ಕಡೆಗೆ ಹರಿಯುತ್ತದೆ. ಅದರ ಮೇಲೆ ಸಣ್ಣ ಸೇತುವೆ ನಿರ್ಮಿಸಲಾಗಿದೆ. ಅಲ್ಲಿ ಈಶಾನ್ಯ ದಿಕ್ಕಿಗೆ ಸಿದ್ಧೇಶ್ವರ ಗುಡಿ, ದಕ್ಷಿಣಕ್ಕೆ ಗವಿಸಿದ್ಧೇಶ್ವರ ಗವಿ, ಮೆಟ್ಟಿಲು ಪಕ್ಕ ಪಶ್ಚಿಮಕ್ಕೆ ಮಲ್ಲಿಕಾರ್ಜುನ ಗುಡಿ ಇದೆ. ಸುತ್ತಲೂ ಕಲ್ಲತ್ತಿ ಹುಲಗಿಲ, ತಪಸಿ ಗಿಡಗಳ ಸಮೂಹ ನೆರಳು ನೀಡುತ್ತದೆ. ಅಲ್ಲಿಂದ ಸ್ವಲ್ಪ ಪಶ್ಚಿಮಕ್ಕೆ 20 ಹೆಜ್ಜೆ ಹಾಕಿದರೆ ಅತ್ಯಂತ ಸುಂದರ ರಭಸದಿಂದ ಹರಿಯುವ ಜಲಪಾತವಿದೆ. ಇಂಥದ್ದೊಂದು ಇದೆ ಎಂದು ಹೇಳದಿದ್ದರೆ ಖಂಡಿತ ಪಶ್ಚಿಮದ ಜಲಪಾತ ಇದ್ದುದು ಗೊತ್ತೆ ಆಗುವುದಿಲ್ಲ. ಎಷ್ಟೋ ಜನ 2 ನೇ ಬಾರಿಗೆ ಬಂದಾಗ ಇದನ್ನು ತೋರಿಸಿದರೆ ಆಶ್ಚರ್ಯ ಪಟ್ಟುಕೊಂಡು ನಾವೂ ನೋಡೆ ಇಲ್ಲ ಎಂದು ಉದ್ಗರಿಸುತ್ತಾರೆ. ಅಂಥ ಸುಂದರ ಚಿಕ್ಕ ಜಲಪಾತ ಹಸಿರಿನಿಂದ ಕಂಗೊಳಿಸುತ್ತದೆ. ಇದಕ್ಕೆ ಸಿದ್ದನಕೊಳ್ಳ ಎಂದು ಹೆಸರು ಬರಲು ಒಂದು ಕಾಲದಲ್ಲಿ ನಮ್ಮ ಜನ ಸಂಸಾರದ ಮೇಲೆ ಜಿಗುಪ್ಸೆ ಮೂಡಿ, ವೈರಾಗ್ಯ ಭಾವ ಮೂಡಿದಾಗ ಪರಮಾತ್ಮನ ಧ್ಯಾನ ಚಿಂತನೆ ಮಾಡಲು ಇಂಥ ನೀರಿನ ಆಸರೆ ಇರುವ ಪ್ರಶಾಂತ ವಾತಾವರಣದಲ್ಲಿದ್ದು ಸಾಧನೆ ಮಾಡುತ್ತಿದ್ದರು. ಅಂಥ ಜ್ಞಾನ/ ಅರಿವು ಪಡೆಯುವುದೇ ಒಂದು ಸಿದ್ಧಿ ಎನಿಸುತ್ತಿತ್ತು. ಅಂಥ ಸಿದ್ಧಿ ಪುರುಷರನ್ನು ಸಿದ್ಧ ಎನ್ನುತ್ತಿದ್ದರು. ಆ ಸಿದ್ದನು ವಾಸಿಸಿದ್ದ ಸ್ಥಳವೇ ಸಿದ್ದನಕೊಳ್ಳ ಎನ್ನಬಹುದು. ಇಲ್ಲಿ ಸಿದ್ದಪ್ಪಜ್ಜ ಮಾರನ ಬಸರಿಯವರು ಇದ್ದ ಬಗ್ಗೆ ಮಾಹಿತಿ ಸಿಗುತ್ತದೆ.

ಒಟ್ಟಿನಲ್ಲಿ ಆಧ್ಯಾತ್ಮ ಸಾಧನೆಗಾಗಿ ಹಾಗೂ ಸಿದ್ಧಿಗಾಗಿ ಇಂಥ ಪ್ರಶಾಂತ ಸ್ಥಳಗಳನ್ನೇ ಆಯ್ದುಕೊಂಡು ಧ್ಯಾನದಲ್ಲಿ ನಿರತರಾಗುತ್ತಿದ್ದುದು ಭಾರತೀಯ ಆಧ್ಯಾತ್ಮ ಜೀವನದ ಒಂದು ಭಾಗವೇ ಆಗಿದೆ.

ಪ್ರೊ: ಬಿ. ಬಿ. ಕಡ್ಲಿ

ವಿ. ಎಂ. ಕಾಲೇಜು, ಹುನಗುಂದ

Comments
One Response to “ಹುನಗುಂದ ಪರಿಸರದ ಚಿಕ್ಕ ಜಲಪಾತಗಳು”
  1. Shrinivasprasad Revadi says:

    u hv forgotn d best: DIDAGINA HALLA FALLS near Guledagudda.

Leave A Comment