ಗುಗ್ಗಲಮರಿ ದುರ್ಗಾದೇವತೆ

ಕರ್ನಾಟಕ ಹಲವಾರು ಶಕ್ತಿದೇವತೆಗಳ ಕೇಂದ್ರ. ಅಂತಹ ಕೇಂದ್ರಗಳಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಾ ಕೇಂದ್ರದಿಂದ Mahadwar Guggalmarದಕ್ಷಿಣದ ಕಡೆಗೆ ಇಲಕಲ್ ಮಾರ್ಗವಾಗಿ ಸು 22 ಕಿ.ಮಿ ದೂರ ಸಾಗಿದರೆ ಪ್ರಾಚೀನ ಕಾಲದಿಂದಲೂ ಮಹತ್ವತೆಯನ್ನು ಪಡೆದುಕೊಂಡ ಧಾರ್ಮಿಕ ಗ್ರಾಮವೊಂದು ಕಾಣಸಿಗುವುದು. ಅದುವೇ ಗುಗ್ಗಲಮರಿ ಗ್ರಾಮ. ಸಾವಿರಾರು ಭಕ್ತರ ಬೇಡಿಕೆಯನ್ನೀಡೇರಿಸುವ ಗ್ರಾಮದೇವತೆ ದುರ್ಗಾದೇವಿ ನೆಲೆಸಿದ ಶಕ್ತಿ ಕೇಂದ್ರ. ಗ್ರಾಮವು ಬೆಣಚುಕಲ್ಲಿನ ಬಂಡೆಗಳ ಮಧ್ಯದಲ್ಲಿ ಈ ಗ್ರಾಮವು ನಾಲ್ಕು ಹಂತಗಳಲ್ಲಿ ಬೆಳೆದುಕೊಂಡು ಬಂದಿದೆ ಎಂಬುದು ಅಲ್ಲಿಯ ಗ್ರಾಮದ ಹಿರಿಯರ ಅಭಿಮತ. ಮೊದಲು ಹನುಮಂತ ದೇವಾಲಯದ ಬಳಿ ಉದಯವಾಯಿತು. ನಂತರ ತಂಬಾಕದಡ್ಡಿಯಲ್ಲಿ ಬೆಳೆಯಿತು. ಆ ಮೇಲೆ ಕೊಟ್ಟೂರಿನ ಬಸವ ದೇವಾಲಯದ ಬಳಿಯಲ್ಲಿ ಕೊನೆಗೆ ದುರ್ಗಾದೇವಾಲಯದ ಸನಿಹದಲ್ಲಿ ಪ್ರಗತಿ ಕಾಣಲಾರಂಭಿಸಿದೆ.

ಮೂಲತಃ ಬೆಟ್ಟಗಳಿಂದ ಗಿಡಗಂಟಿಗಳಿಂದಾವೃತವಾದ ಈ ಸ್ಥಳದಲ್ಲಿ ಸಾವಿರಾರು ಗೂಗಿಗಳು ವಾಸವಾಗಿದ್ದವು. ಆದುದರಿಂದಲೇ ಈ ಊರಿಗೆ ಗೂಗಲಪುರವೆಂದೂ ನಂತರ ಗೂಗಲಮರಿ ಎಂದೂ ಹೆಸರು ಬಂದಿದೆ ಎಂಬುದು ಸ್ಥಳೀಯ ಜನರ ಅಭಿಪ್ರಾಯವಾಗಿದೆ. ಇಲ್ಲಿಯ ಬೆಟ್ಟಗಳ ಮಧ್ಯದಲ್ಲಿಯೇ ಆದಿದೇವತೆ ದುರ್ಗಮ್ಮ ನೆಲೆಸಿದ್ದಾಳೆ. ದುರ್ಗಾದೇವಾಲಯವು ಗ್ರಾಮ ಪ್ರವೇಶಿಸುವ ಮೊದಲೇ ಅಂಡಾಕಾರದ ಬೆಟ್ಟದಲ್ಲಿ ಗುಹೆಯ ರೂಪದಲ್ಲಿ ಕಂಡುಬರುವುದು. ಮೂಲತಃ ದುರ್ಗಾದೇವತೆಯ ಮೂರ್ತಿ ಇರಲಿಲ್ಲ ಗುಹೆಯೊಳಗೆ ಕಲ್ಲಿನಲ್ಲಿಯೇ ದೇವತೆಯ ಆಕೃತಿಯು ಮೂಡಿಬಂದಿತ್ತು. ಆ ಮೂರ್ತಿಯು ಉದ್ಭವ ಮೂರ್ತಿಯಾಗಿದೆಯೇ ವಿನಃ ಉಳಿಯಿಂದ ಕೆತ್ತಿ ಮಾಡಿರುವುದಾಗಿರಲಿಲ್ಲ. ತರುವಾಯ ಊರಿನ ಹಿರಿಯರು ಮತ್ತೊಂದು ದುರ್ಗಾದೇವತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ದೇವಾಲಯದ ಮೇಲ್ಭಾಗದಲ್ಲಿ ದ್ರಾವಿಡ ಮಾದರಿಯ ಶಿಖರವಿದ್ದು ಶಿಖರದಲ್ಲಿ ಹಲವಾರು ಚಿಕ್ಕ ಚಿಕ್ಕ ಗುಡಿಗಳನ್ನು ನಿರ್ಮಿಸಿ ಅದರಲ್ಲಿ ಶಕ್ತಿದೇವತೆಗಳ ಆಕೃತಿಗಳನ್ನು ಪ್ರತಿಷ್ಠಾಪಿಸಿ ಶಿಖರದ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. ಪ್ರತಿ ಅಮವಾಸ್ಯೆಯ ದಿನದಂದು ಸಾವಿರಾರು ಭಕ್ತರು ಬಂದು ತಮ್ಮ ಹರಕೆಯನ್ನು ತೀರಿಸಿ ಹೋಗುತ್ತಾರೆ. ಬಂದ ಭಕ್ತರು ಬೇಡಿದ ವರವನ್ನು ದಯಪಾಲಿಸುವ ವರದೇವತೆಯಾಗಿದ್ದಾಳೆಂದು ತಿಳಿದುಬರುವುದು. ಈ ದೇವತೆಯ ಹಲವಾರು ಪವಾಡಗಳೂ ಸಹ ಅಲ್ಲಿಯ ಭಕ್ತರಿಂದ, ಊರಿನ ಜನರಿಂದಲೂ ಕೇಳಿಬಂದವು.Durgadevi Temple Guggalamari

ದುರ್ಗಮ್ಮನ ದೇವಾಲಯದ ಕಟ್ಟೆಯ ಮೇಲೆ ಮೈಮೇಲೆ ದೆವ್ವ-ಪ್ರೇತ ಬಂದವರನ್ನು ಕೂಡ್ರಿಸಿ ದೇವಾಲಯದಲ್ಲಿರುವ ಬಾರಕೋಲಿನಿಂದ ಅವರಿಗೆ ಬಾರಿಸಿದರೆ ಮೈಯಲ್ಲಿರುವ ಪ್ರೇತಗಳು ಹೇಳದಂತೆ ಮಾಯವಾಗಿ ಹೋಗುತ್ತವೆ ಎಂದು ಹೇಳುವರು.

ಅದರಿಂದ ಹಿಂದೊಂದು ಸಲ ಗೊರಬಾಳದ ಗೌಡರಿಗೂ ಮತ್ತು ಊರಿನ ಮಲ್ಲನಗೌಡರ ನಡುವೆ ದೇವತೆಯ ಇರುವಿಕೆಯ ಕುರಿತು ವಾದಗಳುಂಟಾದವು. ಮಲ್ಲನಗೌಡರು ಎಲ್ಲಿದ್ದಾಳೆ ದೇವತೆ, ಯಾವದೇವತೆಯೂ ಇಲ್ಲ ಯಾವ ದೇವರೂ ಇಲ್ಲ ಎಂದು ವಾದ ಮಾಡುತ್ತಾ ಗುಹೆಯ ಬಳಿ ಬಂದ ಕೂಡಲೇ ಗುಹೆಯ ಬಾಗಿಲು ತೆರೆಯಿತು ಆ ಕೂಡಲೆ ಮಲ್ಲನಗೌಡರ ಬಾಯಿ ಹೋಯಿತು. ಕೂಡಲೇ ನನ್ನದು ತಪ್ಪಾಯಿತು ಕ್ಷಮಿಸಮ್ಮ ಎಂದು ದೇವಾಲಯದ ಬಾಗಿಲಿಗೆ ನಮಸ್ಕರಿಸಿದ ಕೂಡಲೇ ಪುನಃ ಅವರ ಬಾಯಿ ಮೊದಲಿನಂತಾಯಿತು ಎಂದು ಅಲ್ಲಿಯ ಹಿರಿಯರ ಅಭಿಮತ.

ಯಾತಾಳ ಚನ್ನಬಸಪ್ಪ ಗೌಡರಿಗೂ ಮತ್ತು ಶರಣ ಕಾಳಪ್ಪಜ್ಜನವರಿಗೂ ದುರ್ಗಾಮಾತೆ ಪ್ರತ್ಯಕ್ಷಳಾಗಿದ್ದಳೆಂತಲೂ ಪ್ರತೀತಿಯಿದೆ. ಚನ್ನಬಸಪ್ಪಗೌಡರು ಪ್ರತಿವರ್ಷವೂ ದೇವಾಲಯದ ಬಳಿ ಬಂದು ಬಿದ್ದಿರುವಂತಹ ದೆವ್ವಗಳಿಗೆ ಮಹಾಮಾತೆ ದುರ್ಗಾಂಬೆಯ ಆಶೀರ್ವಾದದಿಂದ ಊಟ ಮಾಡಿಸುತ್ತಿದ್ದರು ಎಂಬ ವಿಚಾರಗಳನ್ನು ಅಲ್ಲಿಯ ಸ್ಥಳೀಯರು ಹೇಳುತ್ತಾರೆ. ದೇವಾಲಯವನ್ನು ಪ್ರವೇಶಿಸಲು ಚಿಕ್ಕದಾದ ಒಂದು ಬಾಗಿಲಿದ್ದು ಒಳಗಡೆಗೆ 10-15 ಅಡಿಯ ಗುಹಾಲಯವಿದೆ. ಇತ್ತೀಚಿಗೆ ಜೀರ್ಣೋದ್ಧಾರಗೊಳಿಸಿ ಒಳಬಾಗದಲ್ಲಿ ಗ್ರಾನೈಟ್ ಹಾಸನ್ನು ಹಾಕಲಾಗಿದೆ.Durgadevi Guggalamari

ದೇವಾಲಯದ ಎಡಬಾಗಕ್ಕೆ ಎರಡು ಬಂಡೆಗಲ್ಲನ್ನು ದಾಟಿದರೆ ಮತ್ತೊಂದು ಬಂಡೆಗಲ್ಲಿನಲ್ಲೂ ಒಂದು ದೇವಾಲಯ ಕೊರೆಯಲಾಗಿದ್ದು ಅಲ್ಲಿಯೂ ಒಂದು ಸ್ತ್ರೀದೇವತೆಯನ್ನು ಪ್ರತಿಷ್ಠಾಪಿಸಲಾಗಿದೆ. ಆ ದೇವತೆಗೆ ದುಗ್ಗಮ್ಮ ದೇವತೆ ಎಂದು ಕರೆಯುತ್ತಾರೆ.

ಪ್ರತಿ ಮೂರುವರ್ಷಕ್ಕೊಂದು ಬಾರಿ ಆಗಿಹುಣ್ಣಿಮೆಯ ದಿನದಂದು ವೈಭವದಿಂದ ಜಾತ್ರೆ ನಡೆಯುವುದು. ಆಗ ಭಕ್ತರು ಉರುಳು ಸೇವೆ, ದೀಡನಮಸ್ಕಾರ ಮುಂತಾದ ಹರಕೆಗಳನ್ನು ತೀರಿಸುವರು. ಆಗಿಹುಣ್ಣಿಮೆಯಿಂದ ಒಂಬತ್ತು ದಿನಗಳವರೆಗೆ ದೇವಾಲಯದ ಅರ್ಚಕ ಗುಹೆಯೊಳಗೆ ಉಪವಾಸ ಇರುತ್ತಾನೆ. ಒಂಬತ್ತನೇ ದಿನ ಹೊರಬಂದು ಜಾತ್ರೆಗೆ ಚಾಲನೆ ನೀಡುತ್ತಾನೆ ಒಂಬತ್ತು ದಿನಗಳವರೆಗೆ ಆ ದೇವಾಲಯದಲ್ಲಿ ಯಾವ ಸ್ತ್ರೀಯರ ನೆರಳೂ ಬೀಳುವಂತಿಲ್ಲ. ಅರ್ಚಕ ಒಳಗೆ ಇದ್ದುಕೊಂಡೆ ದಿನಕ್ಕೆ ಎರಡು ಬಾರಿ ಪೂಜೆ ಮಾಡುತ್ತಾನೆ ಇದು ಮೊದಲಿನಿಂದಲೂ ಬೆಳೆದುಕೊಂಡು ಬಂದ ಸಂಪ್ರದಾಯ ಮತ್ತು ನಂಬಿಕೆಯಾಗಿದೆ.

ಜಾತ್ರೆ ಮತ್ತು ಅಮವಾಸ್ಯೆಯ ದಿನಗಳಲ್ಲಿ ಜನರು ಬಂಡೆಗಲ್ಲುಗಳ ಕೆಳಭಾಗದಲ್ಲಿಯೇ ಅಡುಗೆಯನ್ನು ಮಾಡಿ ದೇವತೆಗೆ ನೈವೇದ್ಯ ಸಲ್ಲಿಸಿ ಅಲ್ಲಿಯೇ ವಿಶ್ರಾಂತಿಯನ್ನು ಪಡೆಯುತ್ತಾರೆ. ಇಂತಹ ವೈಭವವಾದ ಜಾತ್ರೆ ನಡೆಯುತ್ತಿರುವ ಈ ಧಾರ್ಮಿಕ ಸ್ಥಳದಲ್ಲಿ ಅನ್ನಛತ್ರ, ಮತ್ತು ವಿಶ್ರಾಂತಿ ಗ್ರಹಗಳನ್ನು ನಿರ್ಮಾಣಮಾಡುವ ಕಾರ್ಯವನ್ನು ಊರಿನ ಜನರು, ಭಕ್ತರು ಮತ್ತು ಸರಕಾರಗಳು ಕೈಗೊಂಡರೆ ಇಂತಹ ಧಾರ್ಮಿಕ ಕೇಂದ್ರಗಳು ಇನ್ನಷ್ಟು ಬೆಳವಣಿಗೆ ಕಾಣಬಹುದೆಂಬುದು ನಮ್ಮ ಅಭಿಪ್ರಾಯ.

ಶರಣ ಪೂಜ್ಯ ಶ್ರೀ ಕಾಳಪ್ಪಜ್ಜನವರ ಮಠKalappajja math Guggalmari
ಶರಣರಾದ ಶ್ರೀ ಕಾಳಪ್ಪಜ್ಜನವರಿಗೂ ದುರ್ಗಾಮಾತೆಗೂ ಅಪಾರ ಬಾಂಧÀವ್ಯವಿತ್ತು. ದುರ್ಗಾಮಾತೆಯ ಮಗನಂತೆಯೇ ತಾಯಿ ಅವನನ್ನು ನೋಡಿಕೊಂಡು ಹೋಗುತ್ತಿದ್ದಳಂತೆ. ದುರ್ಗಾದೇವಾಲಯದ ಹಿಂಭಾಗದಲ್ಲಿ ಒಂದು ಕಿ.ಮೀ. ಸಾಗಿದರೆ ಅಲ್ಲಿಯ ಬೆಟ್ಟದ ಗುಹೆಯೊಂದರಲ್ಲಿ ಕಾಳಪ್ಪಜ್ಜ ನೆಲೆಸಿದ್ದನೆಂದೂ ಸುಮಾರು 35 ವರ್ಷಗಳ ಕಾಲ ಅಲ್ಲಿಯ ಬಂಡೆಯ ಮೇಲೆ ತಪಸ್ಸನ್ನಾಚರಿಸಿದ್ದರು ನಂತರ ಅಲ್ಲಿಯೇ ಐಕ್ಯನಾದನೆಂದೂ ಹೇಳಲಾಗುತ್ತಿದೆ. ಅಜ್ಜನಿಗಾಗಿಯೇ ಆ ಬಂಡೆಯನ್ನೇ ಮಠವನ್ನಾಗಿಸಲಾಗಿದೆ. ಈ ಮಠದಲ್ಲಿ ಈಶ್ವರಲಿಂಗ ಮತ್ತು ನಂದಿಯ ವಿಗ್ರಹವನ್ನು 1964-65 ರ ಕಾಲಾವಧಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಮಠದ ಹಿಂಭಾಗದಲ್ಲಿ ಒಂದು ಪುಷ್ಕರಣಿಯೂ ಇದೆ. ಹಿಂದೊಂದು ಸಲ ಬರಗಾಲದಿಂದ ಊರಿನ ಜನರಿಗೆ ಕುಡಿಯಲು ನೀರು ಇಲ್ಲದ ಸಮಯದಲ್ಲಿ ಈ ಪುಷ್ಕರಣಿಯನ್ನು ತೋಡಲಾಯಿತು. ಅಂದು ಬಂದ ನೀರು ಇಂದಿಗೂ ಬತ್ತದೇ ಇರುವುದು ಕಾಳಪ್ಪಜ್ಜನವರ ಪವಾಡವೇ ಎಂದು ನಂಬಿಕೆ. ಅಲ್ಲದೇ ಈ ಪುಷ್ಕರಣೀಯ ನೀರಿನಿಂದ ಸ್ನಾನಮಾಡಿದರೆ ಚರ್ಮರೋಗಗಳೆಲ್ಲಾ ಮಾಯವಾಗುತ್ತವೆ ಎಂದು ಹೇಳಲಾಗುತ್ತದೆ. ಈ ಮಠದ ಸ್ಥಾಪನೆಯಲ್ಲಿ ಊರಿನ ಹಿರಿಯರಾದ ರಾಮಲಿಂಗಪ್ಪ. ಮ. ಅಮರಾವತಿ ಮತ್ತು ಅಮರಾವತಿಯ ಹಿರೇಮಠದ ಬಸಲಿಂಗಯ್ಯನವರ ಕೊಡುಗೆ ಅಪಾರ. ಈ ಮಠದ ಬಲಭಾಗದಲ್ಲಿ ಒಂದು ಚಿಕ್ಕ ನಂದಿಗುಡಿಯಿದ್ದು ಅದಕ್ಕೆ ಹೊಂದಿಕೊಂಡೆ ಒಂದು ಪತ್ರಿಗಿಡವಿದ್ದು ಅದರಲ್ಲಿ ಒಂದೂ ಮುಳ್ಳುಗಳಿರದೇ ಇರುವುದು ಒಂದು ವಿಶೇಷ. ಈಗ kalappajja Guggalamariಮಠದ ಪೂಜಾ ಕೈಂಕರ್ಯಗಳನ್ನೆಲ್ಲಾ ಶ್ರೀ ಲಿಂಗಣ್ಣರೆಡ್ಡಿ. ಜಾಗೀರರಾಮಪುರದವರು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಮಠವು ಒಂದು ವ್ಯವಸ್ಥಿತವಾದ ಮಟ್ಟಕ್ಕೇರಲು ಶ್ರೀಯುತ ವೆಂಕಟರಾಯರ ಶ್ರಮವೂ ಅಷ್ಟೇ ಪ್ರಧಾನವಾಗಿತ್ತೆಂದು ಹೇಳಲಾಗುತ್ತಿದೆ. ಮಠ ಹಾಗೂ ದೇವಾಲಯಗಳ ಸ್ಥಾಪಕರು ಇಂದು ನಾಡಿನಿಂದ ದೂರವಾಗಿದ್ದರೂ ಊರಿನ ಹಿರಿಯರು ಆ ಮಹಾನುಭಾವರು ಕಟ್ಟಿ ಬೆಳೆಸಿದ ಮಂದಿರಗಳನ್ನು ಅವರ ಆದರ್ಶಗಳಲ್ಲಿಯೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಪ್ರೊ. ಎಸ್. ಆರ್. ನಾಗಣ್ಣವರ
ಸಹಾಯಕ ಪ್ರಾಧ್ಯಾಪಕರು,
ವಿ.ಎಂ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ ಹುನಗುಂದ

Kalappajja math Guggalmari 01

Pound Guggalamari

Leave A Comment