ಐಹೊಳೆ – ವಾಸ್ತುಶಿಲ್ಪದ ತೊಟ್ಟಿಲು

ಐಹೊಳೆವಾಸ್ತುಶಿಲ್ಪದ ತೊಟ್ಟಿಲು

 ಚಾಲುಕ್ಯ ವಂಶದ ಉಗಮ

ಚಾಲುಕ್ಯರ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ಇನ್ನೂ ಭಿನ್ನಾಭಿಪ್ರಾಯವಿದೆ. ಒಂದು ಪೌರಾಣಿಕ ಕಥೆಯ ಪ್ರಕಾರ ಇಂದ್ರನ ವಿನಂತಿಯ ಮೇರೆಗೆ ಧರ್ಮ ಸ್ಥಾಪನೆಗಾಗಿ ಬ್ರಹ್ಮನು ತನ್ನ ಬೊಗಸೆ (ಚುಲಕ)ಯಿಂದ ವೀರಯೋಧ ನನ್ನು ಹುಟ್ಟಿಸಿದನಂತೆ, ಈ ವೀರಯೋಧನ ವಂಶವೇ ಮುಂದೆ ಸಾಮ್ರಾಜ್ಯವಾಗಿ ರೂಪಗೊಂಡಿತು.

ರಾಜ ಲಾಂಛನRaja Lanchan

ಬಾದಾಮಿ ಚಾಲುಕ್ಯರ ರಾಜ ಲಾಂಛನ ಅಥವಾ ರಾಜ ಚಿನ್ಹೆ ವರಾಹ, ಶಂಖ, ಚಕ್ರ ದರ್ಪಣವಾದರೆ ವರಾಹ, ಸೂರ್ಯ, ಚಂದ್ರ, ಖಡ್ಗ ವಿಜಯನಗರ ಸಾಮ್ರಾಜ್ಯದ ರಾಜಮುದ್ರೆಯಾಗಿದೆ.

ವರಾಹ ಇದು ಮಹಾವಿಷ್ಣುವಿನ ಮೂರನೆಯ ಅವತಾರ ತನ್ನ ದುಷ್ಕøತ್ಯಗಳಿಂದ ಭೂಲೋಕದ ಜನರನ್ನು ದುಃಖವೆಂಬ ಸಮುದ್ರದಲ್ಲಿ ಮುಳುಗಿಸಿ ಪ್ರಜಾಪೀಡಕನಾಗಿದ್ದ ಹಿರಣ್ಯಾಕ್ಷನನ್ನು ಸಂಹರಿಸಲು ವಿಷ್ಣುವು ವರಾಹವತಾರವನ್ನೆತ್ತಿ ಬಂದನು ರಾಕ್ಷಸನಾದ ಹಿರಣ್ಯಾಕ್ಷನನ್ನು ಕೊಂದು ಲೋಕಕ್ಕೆ ಸುಖಶಾಂತಿಯನ್ನು ಕೊಟ್ಟನು. ಬಾದಾಮಿ ಚಾಲುಕ್ಯ ಅರಸರು ಪ್ರಜೆಗಳಿಗೆ ಸಂತೋಷವಾಗುವಂತಹ ಜನಹಿತ ಕಾರ್ಯಗಳನ್ನು ಮಾಡಿದರು. ವರಾಹ ಲಾಂಛನ ಈ ಅಂಶವನ್ನು ಸೂಚಿಸುತ್ತದೆ.

ವಾಸ್ತುಶಿಲ್ಪದ ತೊಟ್ಟಿಲು- ಐಹೊಳೆAihole Details

 ಐಹೊಳೆಯ ಮೂಲರೂಪ ,ಅಯ್ಯಾವೊಳೆ, ಅಂದರೆ ಅಯ್ಯಗಳ ಹೊಳೆ ಅರ್ಥಾತ್ ಅಯ್ಯಗಳು ಅಂದರೆ ಬ್ರಾಹ್ಮಣರು ವಾಸಿಸುತ್ತಿರುವ ಊರು ಎಂದು ತಿಳಿದುಕೊಳ್ಳಬಹುದಾಗಿದೆ. ಅಯ್ಯಾವೊಳೆ ಸಂಸ್ಕøತದಲ್ಲಿ ಆರ್ಯಪುರವಾಗಿದೆ. ಆರ್ಯರು ಅಂದರೆ ಪಂಡಿತರು ಅಥವಾ ವಿದ್ವಾಂಸರು ಎಂದರ್ಥ. ಪುರ ಅಂದರೆ ಊರು ಅಥವಾ ಪಟ್ಟಣ ಒಟ್ಟಾರೆ ಆರ್ಯಪುರವೆಂದರೆ ಪಂಡಿತರಿಂದ ಹಾಗೂ ವಿದ್ವಾಂಸರಿಂದ ಕೂಡಿಕೊಂಡಂತಹ ಊರಾಗಿತ್ತು.

ಆರ್ಯಪುರವೆಂಬ ಹೆಸರಿನಲ್ಲಿ ಉಲ್ಲೇಖ ಐಹೊಳೆಯಲ್ಲಿರುವ ಲಾಡಖಾನ, ಗೌಡರ ಗುಡಿ ಶಾಸನಗಳಲ್ಲಿ ದೊರೆತಿದೆ. ಅಯ್ಯಾವೊಳೆ ಎಂಬುದನ್ನು ಸಂಸ್ಕøತದಲ್ಲಿ , ಅಹಿಹೊಳೆ, ಎಂದು ಅದಕ್ಕೆ ಅಹಿಚ್ಚತ್ರಪುರವೆಂದು ಹೆಸರಿಸಲಾಗಿದೆ ಇದರ ಉದ್ದೇಶ ಈ ಸ್ಥಳವು ಉತ್ತರ ಹಿಂದೂಸ್ಥಾನದಲ್ಲಿದ್ದ ಅಹಿಚ್ಚುತ್ರದಷ್ಟು ಪವಿತ್ರವಾಗಿದೆ. ಐಹೊಳೆ ‘ಐಪುರಿ’ ಯಂತಲೂ ‘ಐಪುರೀಶ್ವರ ಶತಕ’ ವನ್ನು ಬರೆದ ಬಗ್ಗೆ ಮಾಯಿ ದೇವನು ಈ ಊರಿನಲ್ಲಿ ಹುಟ್ಟಿದವನು ಎಂದು ನಂಬಲಾಗಿದೆ. ಅಡವೇಶ್ವರ ಸ್ವಾಮಿಗಳು ಈ ನೆಲದಲ್ಲಿ ಸಂಚರಿಸಿ ತಪಸ್ಸನ್ನು ಮಾಡಿ ಈ ನೆಲದ ಜನರನ್ನು ಎಲ್ಲಾ ದೃಷ್ಟಿಯಿಂದ ಪಾರು ಮಾಡಿ ರಕ್ಷಣೆ ಮಾಡಿದಂತಹ ಮಹಾಶಿವಶರಣರು. ಐಹೊಳೆಯ ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಈ ಶರಣರ ಗುಹೆಯನ್ನು ಇಂದಿಗೂ ನೋಡಲು ಸಿಗುತ್ತದೆ.

ಐಹೊಳೆಯ ಮಹತ್ವ

ಐಹೊಳೆಯು ಒಂದು ಅಗ್ರಹಾರ ತಾಣವಾಗಿತ್ತೆಂದು ಲಾಡಖಾನ ಗುಡಿಯ ಹೊರ ಗೋಡೆಯ ಮೇಲಿರುವ ಕ್ರಿ. ಶ. 8 ನೇ ಶತಮಾನದ ಶಾಸನ ಹಾಗೂ ಇಲ್ಲಿಯ ಇತರDurga Temple Complex ಶಾಸನಗಳಿಂದ ಮಾಹಿತಿ ದೊರೆಯುತ್ತದೆ. ಬಾದಾಮಿ ಚಾಲುಕ್ಯರ ಕಾಲದಲ್ಲಿ ಐಹೊಳೆ ಒಂದು ವಿದ್ಯಾಕೇಂದ್ರವಾಗಿತ್ತೆಂದು ಶಾಸನಗಳಿಂದ ವ್ಯಕ್ತವಾಗಿದೆ. ಚತುರ್ವೇದಗಳಲ್ಲಿ ವಿದ್ವಾಂಸರಾಗಿದ್ದ 500 ಮಹಾಜನಗಳು ಅಥವಾ ಶ್ರೀಮದ್ ಆರ್ಯಪುರದ (ಅಯ್ಯಾವೊಳೆಯ) ಶ್ರೀ ಮಹಾಚಾತುರ್ವಿಧ ಸಮುದಾಯವಯ್ಯೂರ್ವರು “ಮಹಾಜನಮುಂ” ಎಂಬ ವಿಶೇಷಣವನ್ನು ಅಯ್ಯಾವೊಳೆ ಐನೂರ್ವರಿಗೆ ನೀಡಲಾಗಿತ್ತು ಎಂಬ ಅಂಶ ತಿಳಿಯುತ್ತದೆ. ಈ ಎಲ್ಲಾ ಸಂಗತಿಗಳಿಗಿಂತಲೂ ಶಾಸನಗಳಲ್ಲಿ ಉಲ್ಲೇಖವಾಗಿರುವ ಅಯ್ಯಾವೊಳೆ ಐನೂರ್ವರು ಎಂಬ ವರ್ತಕರ ಸಂಘ ಇದ್ದು ಬೆಣ್ಣೆಯ ಸೋಮಯ್ಯಾಜಿ ಎಂಬುವನು ಅದರ ಅಧ್ಯಕ್ಷನಾಗಿರುವ ಅಂಶ ಗೊತ್ತಾಗಿದೆ. ಈ ಊರು ಹಿಂದೆ ದೊಡ್ಡ ಪುರವಾಗಿದ್ದು ಹಾಗೆ ಧಾರ್ಮಿಕ ಕ್ಷೇತ್ರವಾಗಿತ್ತೆಂದು ತಿಳಿದು ಬರುತ್ತದೆ. ರಾಷ್ಟ್ರಕೂಟ ಖೊಟ್ಟಿಗರ ಆಳ್ವಿಕೆಯಲ್ಲಿ ಶಾಂತಗಾವುಂಡನು ಗೋ ಸಹಸ್ರ ದಾನವನ್ನು ಐಹೊಳೆಯಲ್ಲಿ ಮಾಡಿದ್ದರ ಬಗೆಗೆ ಉಲ್ಲೇಖವಿದೆ.

ಅದೇ ರೀತಿ ರಾಷ್ಟ್ರಕೂಟ ಅಮೋಘವರ್ಷನ ಕಾಲದಲ್ಲಿ ಶ್ರೀಸೂರ್ಯ ಭಟಾರನು ಈ ಊರಿನಲ್ಲಿ ಚಾತುರ್ಮಾಸವನ್ನು ಕಳೆದನೆಂದು ಶಾಸನಗಳಿಂದ ತಿಳಿದು ಬರುತ್ತದೆ. ಐಹೊಳೆಯ ಜ್ಯೋತಿರ್ಲಿಂಗ ಗುಡಿಯಲ್ಲಿದ್ದ ಕ್ರಿ. ಶ. 1136 ನೆಯ ವರ್ಷದ ಶಾಸನದಲ್ಲಿ “ಶ್ರೀಮನ್ಮಹಾಕಾಶಿ ಅಯ್ಯಾವೊಳೆ” ಎಂದು ದಾಖಲಿಸಲಾಗಿದೆ. ಇದು ಪರಶುರಾಮ ಕ್ಷೇತ್ರವೆಂದು ಬಹುಕಾಲದಿಂದಲೂ ಪ್ರಸಿದ್ದವಾಗಿದೆ. ಈ ದಿನಗಳಲ್ಲಿಯೂ ಸಹ ಐಹೊಳೆ ಒಂದು ಪುಣ್ಯ ಕ್ಷೇತ್ರವೆಂದು ಜನರು ಸತ್ತವರ ಆಸ್ತಿಗಳನ್ನು ತಂದು ಈ ಊರಿನ ನದಿಯಲ್ಲಿ ವಿಸರ್ಜಿಸುವರು.

ಪ್ರಮುಖ ದೇವಾಲಯಗಳು

1. ಗೌಡರ ದೇವಾಲಯ ( 5 ನೆಯ ಶತಮಾನ )

ಈ ಊರಿನ ಮುಖ್ಯಸ್ಥ ಗೌಡರು ಈ ಗುಡಿಯಲ್ಲಿ ವಾಸಿಸುತ್ತಿದ್ದ ಅದಕ್ಕೆ ಸ್ಥಳೀಯ ಹೆಸರು ಈ ದೇವಾಲಯಕ್ಕೆ ಬಂದಿದೆ ಮೂಲತಃ ದುರ್ಗಾಭಗವತಿಯ ದೇವಾಲಯವೆಂದು ಈ ಗುಡಿಯಲ್ಲಿರುವ ಶಾಸನದಿಂದ ತಿಳಿದು ಬರುತ್ತದೆ.

 ಈ ದೇವಾಲಯದ ನವರಂಗದ ತೊಲೆಯ ಮೇಲೆ ಎರಡು ಸಾಲುಗಳ ಶಾಸನವಿದ್ದು ಕ್ರಿ. ಶ. 8 ನೇ ಶತಮಾನದಲ್ಲಿ ಐಹೊಳೆ ಪಟ್ಟಣದ ಮಹಾಚತುರ್ವೇದಗಳಾದ 500 ಮಹಾಜನರು, 8 ನಗರಗಳು ಮತ್ತು 120 ಊರಾಳಿಗರು (ಊರಾಳುವವರು) ದುರ್ಗಾಭಗವತಿ ದೇವಿಗೆ ಭೂಮಿಯನ್ನು ದಾನಕೊಟ್ಟ ಬಗೆಗೆ ಮಾಹಿತಿ ಸಿಗುತ್ತದೆ. ಈ ಲಕ್ಷ್ಮೀ ಭಗವತಿ ದೇವಾಲಯವೂ ಕರ್ನಾಟಕದ ಪ್ರಾಚೀನ ಲಕ್ಷ್ಮೀದೇವಿ ದೇವಾಲಯವೆಂದು ಪರಿಗಣಿಸಲಾಗಿದೆ.

2. ಲಾಡಖಾನ ದೇವಾಲಯ (ಕ್ರಿ.ಶ. 450)Ladakhana Temple

ಲಾಡಖಾನ ಎಂಬ ಮುಸ್ಲಿಂ ವ್ಯಕ್ತಿ ಈ ದೇವಾಲಯದಲ್ಲಿ ವಾಸಿಸುತ್ತಿರುವುದರಿಂದ ಈ ಹೆಸರು ಬಂದಿದೆ. ಇದೊಂದು ಶೈವ ದೇವಾಲಯವಾಗಿದ್ದು ಇದರಲ್ಲಿ ಕೇವಲ ಮುಖಮಂಟಪ ಮತ್ತು ನವರಂಗಗಳು ಮಾತ್ರ ಇವೆ. ನವರಂಗದಲ್ಲಿ ಒಂದು ಚಿಕ್ಕ ಗರ್ಭಗೃಹವನ್ನು ಕಟ್ಟಲಾಗಿದೆ. ಅದರ ಒಳಗಡೆ ಶಿವಲಿಂಗವಿದೆ. ಆಲದೇವತೆಗಳನ್ನು ದುರ್ಗಾದೇವಾಲಯದ ಬಾಗಿಲ ಪಕ್ಕದಲ್ಲಿ ಈ  ಹುಚ್ಚಪ್ಪಯ್ಯನಮಠ ಹಾಗೂ ಲಾಡಖಾನ ದೇವಾಲಯಗಳ ಸ್ತಂಭಗಳ ಮೇಲೆ ಕೆತ್ತಲಾಗಿದೆ. ಲಾಡಖಾನ ಗುಡಿಯ ನವರಂಗದ ಹೊರ ಭಾಗದ ಗೋಡೆಯಲ್ಲಿ ಎರಡು ಶಾಸನಗಳನ್ನು ಕೆತ್ತಲಾಗಿದೆ.

ಸ್ವಸ್ತಿಶ್ರೀ ಆರ್ಯಜನ ಸಮುದಾಯೋದಿತ ವರಾರ್ಯ ಪುರಾದುಷ್ಠಾಬದ ಮಗಾಚಾರ್ತುಯರ್ವಿದ್ಯ ಸಮುದಾಯದ ಐನೂರ್ವರಿಗೆ ಕೊಟ್ಟ ದಾನದ ಬಗೆಗೆ ಉಲ್ಲೇಖಿಸುತ್ತದೆ.

ಲಾಡಖಾನ ದೇವಾಲಯದ ಮುಖ ಮಂಟಪದ ಪಶ್ಚಿಮ ಗೋಡೆಯ ಮೆಲೆ ಎರಡು ಶಾಸನಗಳಿವೆ ಈ ಶಾಸನವು ಆರ್ಯಪುರದ ಜನರಿಂದ ಯೋಗ್ಯರೆಂದು ಆರಿಸಿ ಚತುರ್ವೇದಿಗಳಾದ ಐನೂರ್ವರಿಗೆ “ಬೆಣ್ಣಿಯ ಸೋಮಯಾಜಿಯ” ಕೊಟ್ಟ ದಾನವು ಅನ್ನಪ್ರಾಶನ, ಸೀಮಂತ, ಚೌಲ, ಧಾರಣ, ಉಪನಯನ, ಸಮಾನವರ್ತನಗಳಿಗೆ (ಸಮಾರಂಭ) ಒಂದು ಗದ್ಯಾಣ, ಚಾತುರ್ಮಾಸಕ್ಕೆ ಮೂರು ಗದ್ಯಾಣ, ಅಗ್ನಿಷ್ಟೋಮಕ್ಕೆ ನಾಲ್ಕು ಗದ್ಯಾಣ ಮೊದಲಾದ ವಿವರಗಳನ್ನು ದಾಖಲಿಸುತ್ತದೆ.

ಈ ದೇವಾಲಯದ ಇನ್ನೊಂದು ವಿಶೇಷತೆ ಎಂದರೆ ಗರ್ಭಗೃಹದ ಮೇಲೊಂದು ಗರ್ಭಗೃಹವಿದೆ. ಈ ಸಂಪ್ರದಾಯವು ಸಾಮಾನ್ಯವಾಗಿ ಜೈನ ಮತ್ತು ಬೌದ್ಧ ಧರ್ಮದಲ್ಲಿ ಕಂಡು ಬರುತ್ತದೆ.

3. ಚಕ್ರ ಗುಡಿ (8ನೆಯ ಶತಮಾನ)

ಈ ಗುಡಿಯು ಗೌಡರ ಗುಡಿಯ ಹತ್ತಿರವಿರುವ ಭಾವಿಯ ದಕ್ಷಿಣಕ್ಕೆ ಇದೆ. ಇದರ ಶಿಖರವು ಆ ಮೂಲಕ ಆಕಾರದ ಸ್ತೂಪಿಯನ್ನು ಹೋಲುವುದರಿಂದ ಈ ದೇವಾಲಯಕ್ಕೆ ಚಕ್ರ ದೇವಾಲಯ ಎಂದು ಹೆಸರು.

ಗರ್ಭಗೃಹದ ಬಾಗಿಲುವಾಡದ ಲಲಾಟದಲ್ಲಿ ಗರುಡನ ಬಿಂಬವಿದೆ ಮತ್ತು ಗರ್ಭಗೃಹದಲ್ಲಿ ಸ್ವಲ್ಪ ಎತ್ತರವಾದ ಪಾಣಿಪೀಠದ ಮೇಲೆ ಶಿವಲಿಂಗ ವಿರುತ್ತದೆ. ಗರ್ಭಗೃಹದ ಮೇಲಿನ ಶಿಖರವು ರೇಖಾನಾಗರ ಶೈಲಿಯಲ್ಲಿದೆ.

4. ಬಡಿಗೇರ ಗುಡಿ (ಸೂರ್ಯನ ಗುಡಿ 9ನೆಯ ಶತಮಾನ)

ಬಡಿಗ ಮನೆತನದವರು ಈ ದೇವಾಲಯದಲ್ಲಿ ವಾಸಿಸುತ್ತಿದ್ದರು ಆದ್ದರಿಂದ ಸ್ಥಳೀಯ ಹೆಸರು ಬಂದಿದೆ. ಈ ದೇವಾಲಯದ ಶಿಖರವು ರೇಖಾನಾಗರ ಪ್ರಸಾದ ಶೈಲಿಯಲಿದ್ದು ಇದರ ಮುಂಭಾಗದಲ್ಲಿರುವ ಚೈತ್ಯ ಗೂಡಿನೊಳಗೆ ಸೂರ್ಯನ ಮೂರ್ತಿ ಇದೆ ಮತ್ತು ಗರ್ಭಗೃಹದ ಲಲಾಟದಲ್ಲಿ ಸೂರ್ಯನ ಬಿಂಬವಿರುವದರಿಂದ ಈ ದೇವಾಲಯವು ಸೂರ್ಯನಿಗೆ ನಿರ್ಮಿತವಾದುದೆಂದು ಸ್ಪಷ್ಟವಾಗಿ ತಿಳಿಯುತ್ತದೆ.

ಈ ದೇವಾಲಯಕ್ಕೆ ಗರ್ಭಗೃಹ, ನವರಂಗ, ಮತ್ತು ಮುಖಮಂಟಪಗಳಿವೆ. ಮುಖಮಂಟಪದ ಬಲಭಾಗದಲ್ಲಿರುವ ಸ್ತಂಭದ ಮೇಲೆ ದಕ್ಷಬ್ರಹ್ಮನ ಮೂರ್ತಿಯನ್ನು ಕೆತ್ತಲಾಗಿದೆ. ಲಲಾಟದಲ್ಲಿರುವ ಗರುಡನ ಮೇಲ್ಭಾಗದಲ್ಲಿ ಸೂರ್ಯ ಮತ್ತು ಅಕ್ಕಪಕ್ಕದಲ್ಲಿ ಬಿಲ್ಲು ಹಿಡಿದ ಉಷಾ ಮತ್ತು ಪ್ರತ್ಯುಷೆಯರ ಶಿಲ್ಪಗಳಿವೆ.

5. ಸೂರ್ಯ ನಾರಾಯಣ ದೇವಾಲಯ (7ನೆಯ ಶತಮಾನ)

ಈ ದೇವಾಲಯದ ಗರ್ಭಗೃಹದಲ್ಲಿ ಸುಮಾರು 1.83 ಮೀಟರ ಎತ್ತರವಾದ ಕಪ್ಪು ಹಸಿರು ನುಣುಪಾದ ಕಲ್ಲಿನಿಂದ ಮಾಡಿರುವ ಸೂರ್ಯನ ಆಕರ್ಷಕ ಮೂರ್ತಿ ಇದೆ. ಈ ಮೂರ್ತಿಗೆ ದ್ವಿಬಾಹುಗಳಿದ್ದು, ಎರಡರಲ್ಲಿಯೂ ಕಮಲದ ಹೂವನ್ನು ಹಿಡಿದಿರುವನು ಮತ್ತು ಮುಖವು ಹರವಾಗಿದ್ದು ಅದು ಬಾದಾಮಿ ಗವಿಯಲ್ಲಿಯ ದೊಡ್ಡ ಮೂರ್ತಿಗಳ ಶೈಲಿಯನ್ನು ಹೋಲುತ್ತದೆ.

ಸೂರ್ಯನ ಕಾಲಿನ ಹತ್ತಿರ ಚೌರಿ ಹಿಡಿದ ಉಷಾ ಮತ್ತು ಪ್ರತ್ಯುಷೆಯರಿದ್ದಾರೆ. ಸೂರ್ಯನು ಮಕರಕುಂಡಲ, ಕಾಲ್ಗಡಗ, ಇತ್ಯಾದಿ ಆಭರಣಗಳನ್ನು ಧರಿಸಿರುವನು. ಹಿಂಭಾಗದಲ್ಲಿ ಪ್ರಭಾವಳಿಯಿದ್ದು ಮಧ್ಯದಲ್ಲಿ ಮಕರ ತೋರಣವಿದೆ. ಪೀಠದಲ್ಲಿ ಸೂರ್ಯನ ರಥದ ಎರಡು ಗಾಲಿಗಳಿದ್ದು ಮುಂಭಾಗದಲ್ಲಿ ಏಳು ಕುದುರೆಗಳಿವೆ.

ಈ ದೇವಾಲಯದ ಮುಖಮಂಟಪದ ಕಂಬದಲ್ಲಿ ಕ್ರಿ. ಶ. 9ನೇ ಶತಮಾನದಲ್ಲಿ ಐನೂರ್ವರು ಮತ್ತು ಎಂಟು ನಕರರು ಮಾಡಿದ “ಈ ಬಿಸಿಗೆ ಅರುವಲು” ಎಂದು ದಾಖಲಿಸುತ್ತದೆ. ಆದರೆ ‘ಬಿಸಿಗೆ ಅರುವಲು’ ಎಂಬುದು ಬಹುಶಃ ಬಿಸಿಲು ಅರವಟ್ಟಿಗೆ ಇರಬಹುದೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

6. ದುರ್ಗದ ದೇವಾಲಯ ( ಕ್ರಿ.ಶ.742)Durga Temple

ದುರ್ಗ ಅಂದರೆ ದೇವರ ಅಲ್ಲಕೋಟೆ ಎಂದರ್ಥ. ಈ ದೇವಾಲಯವು ಕೋಟೆಯ ಹತ್ತರವಿರುವದರಿಂದ ಈ ಹೆಸರು ಬಂದಿರಬಹುದೆಂದು ಕೆಲವರ ಅಭಿಪ್ರಾಯವಾಗಿದೆ. ಈ ದೇವಾಲಯವು ಗರ್ಭಗೃಹ, ಗರ್ಭಗೃಹ ಸುತ್ತಲೂ ಪ್ರದಕ್ಷಿಣಾಪಥ, ಸಭಾಮಂಟಪ, ಮುಖಮಂಟಪ ಮತ್ತು ಈ ಮುಖಮಂಟಪದ ಸುತ್ತಲೂ ಒಂದು ಪ್ರದಕ್ಷಣಾಪಥ ಹೊಂದಿರುವ ದೇವಾಲಯವಾಗಿದೆ.

ಈ ದೇವಾಲಯವು ರಚನೆಯಲ್ಲಿ ಕರ್ಲೆ, ಭಾಜಾ ಮೊದಲಾದ ಸ್ಥಳಗಳಲ್ಲಿರುವ ಬೌದ್ಧ ಚೈತ್ಯಾಲಯಗಳನ್ನು ಹೋಲುತ್ತದೆ.  ಗರ್ಭಗೃಹವು ಗಜಪುಷ್ಪಾಕಾರ ಅಥವಾ ಅರ್ಧವೃತ್ತಾಕಾರವಾಗಿದ್ದು ಇಂತಹ ದೇವಾಲಯಗಳು ಹಳೇ ಮಹಾಕೂಟ, ತೇರಛÀಜರ್ಲಾ ಮುಂತಾದ ಊರುಗಳಲ್ಲಿ ಇವೆ. ಗರ್ಭಗೃಹದ ಮೇಲೆ ರೇಖಾನಾಗರ ಪ್ರಾಸಾದ ಪದ್ದತಿಯ ಶಿಖರವಿದ್ದು ಅದರ ಮೇಲ್ಬಾಗದಲ್ಲಿ ಅಮಲದ ಮುತ್ತು ಕಲಶಗಳಿಲ್ಲ ಆದರೆ ನಡುವೆ ಚೈತ್ಯದ ಚಿನ್ಹೆಗಳಿವೆ.

ಇದರ ಮಹಾದ್ವಾರ ಮಂಟಪದ ಉತ್ತರ ಗೋಡೆಯ ಮೇಲೆ ಎರಡು ಶಾಸನಗಳಿದ್ದು ಒಂದರಲ್ಲಿ ಸ್ವಸ್ತಿಶ್ರೀ ವಿಕ್ರಮಾದಿತ್ಯ ಸತ್ಯಾಶ್ರಯನ ಉಲ್ಲೇಖ ವಿರುವ ಶಾಸನವು ಚಾಲುಕ್ಯDurga Devi ಇಮ್ಮಡಿ ವಿಕ್ರಮಾದಿತ್ಯನ ಕಾಲದ್ದಾಗಿದೆ. ಇದು ಆಟದ ಅಳಿಯ ಕೊಮಾರಸಿಂಗನು ಈ ದೇವಾಲಯನ್ನು ಕಟ್ಟಿಸಿ ಆದಿತ್ಯ ಭಟಾರನೆಂಬುವನಿಗೆ ದತ್ತಿ ಕೊಟ್ಟಿದ್ದನ್ನು ದಾಖಲಿಸುತ್ತ ಪಿರಿಯನ ಮಗನಾದ ‘ಸವಿರತನ್’ ಎಂಬುವನನ್ನು ಹೆಸರಿಸುತ್ತದೆ.

ದುರ್ಗದ ದೇವಾಲಯದ ಅಧಿಷ್ಠಾನದ ದಕ್ಷಿಣ ಭಾಗದಲ್ಲಿ ಶ್ರೀ ‘ಜಿನಾಲಯನ್’ ಎಂದು ಉಲ್ಲೇಖಿಸುವ ಕ್ರಿ.ಶ. 8 ನೇ ಶತಮಾನದ ಲಕ್ಷಣವುಳ್ಳ ಲಿಪಿಯಿದೆ. ಆದುದರಿಂದ ಈ ದೇವಾಲಯವು ಹಿಂದೆ ಜೈನ ಬಸದಿಯಾಗಿತ್ತೆಂದು ತಿಳಿಯಲಾಗಿದೆ. ಆದರೆ ಈ ಗುಡಿಯು ಮೂಲತಃ ವೈದಿಕ ಸಂಪ್ರದಾಯಕ್ಕೆ ¸ಂಭಂದಿಸಿತ್ತೆಂದು ಅದರ ಒಳಮಂಟಪದ ಹೊರ ಗೋಡೆಯ ಮಾಡಗಳಲ್ಲಿದ್ದ ಶಿವ, ವಿಷ್ಣು, ವರಾಹ, ಮಹಿಷಾಸುರ ಮರ್ದಿನಿ, ಹರಿಹರ ಮೂರ್ತಿಗಳಿಂದ ನಿಸ್ಸಂದೇಹವಾಗಿ ತಿಳಿಯುತ್ತದೆ. ಶ್ರೀ ಬಸವಯ್ಯನ್, ಶಿಸುವೊಳ ಲಚಟ್ಟ ಮತ್ತು ಸರೇನ್ದ್ರ ಎಂಬ ಶಾಸನವು ನಾಗರಿ ಲಿಪಿಯಲ್ಲಿದೆ.

7.  ನಾಯಿದರ ದೇವಾಲಯ 

ಎರಡು ಗರ್ಭಗೃಹಗಳನ್ನು ಒಳಗೊಂಡು ಇದೊಂದು ದ್ವಿಕೂಟಾಚಲ ದೇವಾಲಯವಾಗಿದೆ. ಈ ದೇವಾಲಯದ ಕಂಬಗಳು ವೃತ್ತಾಕಾರವಾಗಿದೆ. ಇವು ಬೇಲೂರು ಹಳೇಬಿಡು ದೇವಾಲಯಗಳಲ್ಲಿರುವ ಕಂಬಗಳನ್ನು ಹೋಲುತ್ತವೆ. ಒಳಗಡೆ ಗರ್ಭಗೃಹದಲ್ಲಿ ಯಾವುದೇ ಮೂರ್ತಿ ಇರುವುದಿಲ್ಲ ಗರ್ಭಗೃಹದ ಮೇಲೆ ದಕ್ಷಿಣದ ಭಾರತದ ದ್ರಾವಿಡ ಶೈಲಿಯ ಅಪೂರ್ಣ ಶಿಖರವಿದೆ.

8. ಚಪ್ಪರದ ದೇವಾಲಯ (ಕ್ರಿ.ಶ. 8ನೇಯ)

ಚಾಲುಕ್ಯ ಆಳ್ವಿಕೆ ಮಾಡುವ ಸಮಯದಲ್ಲಿ ಮನೆಗಳು ಚಪ್ಪರದ ಹಾಗೆ ಇರುವುದರಿಂದ ಮತ್ತು ಈ ದೇವಾಲಯವು ಇಳಿಜಾರು ಛಾವಣಿಯನ್ನು ಹೊಂದಿದ್ದು ಈ ದೇವಾಲಯಕ್ಕೆ ಗರ್ಭಗೃಹ ಪ್ರದಕ್ಷಣಾಪಥ, ಅಂತರಾಳ ಮುಖಮಂಟಪವನ್ನು ಹೊಂದಿದೆ. ಮುಖಮಂಟಪದ ದ್ವಾರ ಬಂಧದ ಲಲಾಟದಲ್ಲಿ ಗಜಲಕ್ಷ್ಮಿಯ ಶಿಲ್ಪವಿದೆ.

9. ಅಂಬಿಗೇರ ದೇವಾಲಯಗಳ ಸಂಕೀರ್ಣAmbiger Temple Complex

ಅಂಬಿಗರು ಇದರ ಪರಿಸರದಲ್ಲಿ ಮನೆಮಾಡಿಕೊಂಡಿದ್ದು ಇದು ಅಂಬಿಗೇರ ಗುಡಿಯೆಂದು ಸ್ಥಳೀಯ ಹೆಸರು ಪಡೆದಿರುತ್ತದೆ. ಇಲ್ಲಿ ಚಿಕ್ಕಪುಟ್ಟ ಮಾದರಿ ದೇವಾಲಯಗಳು ಇದ್ದು ರೇಖಾನಾಗರಿ ಶೈಲಿಯ ಶಿಖರವನ್ನು ಹೊಂದಿದ ಈ ದೇವಾಲಯದ ತಳಪಾಯಕ್ಕೆ ಇಟ್ಟಂಗಿಯನ್ನು ಉಪಯೋಗಿಸಿರುವದನ್ನು ಗಮನಿಸಬಹುದು.

10. ಚಿಕ್ಕಿಗುಡಿ ಸಮುದಾಯ (6-7 ನೆಯ ಶತಮಾನ)

ಗೌಡರ  ಗುಡಿಯಂತೆ ತಳವಿನ್ಯಾಸವುಳ್ಳ ಚಿಕ್ಕಿ ಗುಡಿಗೆ ಒಂದು ಮುಖಮಂಟಪದ, ರಂಗ ಮಂಟಪ ಮತ್ತು ಗರ್ಭಗೃಹಗಳಿವೆ. ಮುಖಮಂಟಪದ ಛಾವಣಿಯಲ್ಲಿ ನಟರಾಜ, ತ್ರಿವಿಕ್ರಮ, ವಿಷ್ಣು ಹಾಗೂ ಇತರ ಉಬ್ಬು ಶಿಲ್ಪಗಳನ್ನು ಒಳಗೊಂಡಿರುತ್ತವೆ.

11. ಹುಚ್ಚಿಮಲ್ಲಿ ದೇವಾಲಯ ( ಕ್ರಿ. ಶ. 708)Hucchimalli Temple

ಈ ದೇವಾಲಯದ ಒಳಗಡೆ ಮಲ್ಲಮ್ಮ ಎಂಬ ಹುಚ್ಚಿ ಹೆಣ್ಣುಮಗಳು ವಾಸಿಸುತ್ತಿದ್ದಳು ಅದಕ್ಕೆ ಈ ದೇವಾಲಯಕ್ಕೆ ಹುಚ್ಚಿಮಲ್ಲಿ ದೇವಾಲಯವೆಂದು ಸ್ಥಳೀಯ ಹೆಸರು ಬಂದಿದೆ.

ಈ ದೇವಾಲಯವು ಪಶ್ಚಿಮಾಭಿಮುಖವಾಗಿದ್ದು ಸುಮಾರು ಕ್ರಿ.ಶ. 7ನೇ ಶತಮಾನದಲ್ಲಿ ನಿರ್ಮಿತವಾಗಿದ್ದು ಮುಖಮಂಟಪದ ಛಾವಣಿಯು ಭುವನೇಶ್ವರಿಯನ್ನು ಹೊಂದಿದ್ದು ಅದರ ಮಧ್ಯದಲ್ಲಿ ಕಾರ್ತಿಕೇಯನ ಮೂರ್ತಿಯನ್ನು ಕೆತ್ತಲಾಗಿದೆ ಮತ್ತೆ ಈ ದೇವಾಲಯದ ಒಂದು ತೊಲೆಯ ಮೇಲೆ “ ಶ್ರೀಕೃವುಜ್ಞಾ” ಎಂದು ಕೆತ್ತಲಾಗಿರುವ ಕ್ರಿ. ಶ. 7ನೇ ಶತಮಾನದ ಶಾಸನವಿದೆ ಈ ದೇವಾಲದ ಪಶ್ಚಿಮ ಗೋಡೆಯ ಬಲಬದಿಗೆ ಚಾಲುಕ್ಯ ವಿಜಯಾದಿತ್ಯನ ಶಾಸನವಿದ್ದು ತನ್ನ ಆಳ್ವಿಕೆಯ 13 ನೇ ವರ್ಷದಲ್ಲಿ ಕ್ರಿ.ಶ. 708 ರಲ್ಲಿ ಅಶ್ವಯಜ್ಞ ಪೌರ್ಣಿಮೆಯಂದು ಎಣ್ಣೆಯನ್ನು ಈ ದೇವರಿಗೆ ಕೊಡಲು ಅನುಮತಿ ನೀಡಿದನೆಂದು ತಿಳಿಸುತ್ತದೆ. ಇದೇ ಗೋಡೆಯ ಇನ್ನೊಂದು ಭಾಗದಲ್ಲಿ ” ಶ್ರೀ ಕಾಞ್ಚಣನ್” ಎಂದು ಉಲ್ಲೇಖಿಸುವ ಸು.ಕ್ರಿ.ಶ. 7ನೇ ಶತಮಾನದ ಶಾಸನವಿದೆ.

12. ರಾವಳಫಡಿ ಅಥವಾ ಬ್ರಾಹ್ಮಿಣಿಕಲ್ ಗುಹೆ (ಕ್ರಿ. ಶ. 675-700)Ravanaphadi

ಬಂಡೆಗಲ್ಲನ್ನು ಕಡಿದು ನಿರ್ಮಿಸಿರುವ ಗುಹಾಂತರ ದೇವಾಲಯಗಳು ಐಹೊಳೆಯಲ್ಲಿ ಕಂಡು ಬರುತ್ತವೆ ಇಲ್ಲಿ ಜೈನ್, ಬೌದ್ದ, ವೈದಿಕ ಸಂಪ್ರದಾಯಗಳಿಗೆ ಸೇರಿವೆ ಈ ರಾವಳಫಡಿ ಗುಹಾಲಯವು ವೈದಿಕ ಸಂಪ್ರದಾಯಕ್ಕೆ ಸೇರಿರುತ್ತದೆ. ಆಯಾತಾಕಾರದ ನವರಂಗದ ಬಲಭಾಗದ ಕೋಣೆಯಲ್ಲಿ ನರ್ತಿಸುತ್ತಿರುವ ನಟರಾಜನಿದ್ದು ಆತನ ಬಳಿಯಲ್ಲಿಯೇ ಅಪ್ಸರೆಯರಿರುವರು. ನಟರಾಜನೊಡನೆ ನರ್ತಿಸುತ್ತಿರುವ ಸಪ್ತಮಾತೃಕೆಯರಾದ ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವಾರಾಹಿ, ಇಂದ್ರಾಣಿ, ವೈಷ್ಣವಿ ಮತ್ತು ಗಣಪತಿ, ಷಣ್ಮುಖನ ಮೂರ್ತಿಗಳನ್ನು ಕೆತ್ತಲಾಗಿದೆ.

ಗರ್ಭಗೃಹದ ಪೀಠದ ಮೇಲೆ ಶಿವಲಿಂಗವಿದೆ ಮತ್ತು ಈ ಗುಹೆಯ ಗರ್ಭಗೃಹ ಎಡಬಲಗಳಲ್ಲಿ ಮಹಿಷಾಸುರ ಮರ್ದಿನಿ, ವರಾಹ ಮೂರ್ತಿಯನ್ನು ಕೆತ್ತಿರುವರು. ಒಳಮಗ್ಗುಲಲ್ಲಿ ಸುಮಾರು 1.6 ಮೀಟರ್ ಎತ್ತರವಾದ ಗಂಗಾಧರನ ಮೂರ್ತಿಯಿದೆ ಗಂಗಾಧರನ ಬಲಭಾಗದಲ್ಲಿ ಒಂದೇ ಕಾಲಿನಲ್ಲಿ ನಿಂತು ತಪಸ್ಸು ಮಾಡುತ್ತಿರುವ ಭೃಂಗಿಯ ಪಾರ್ವತಿಯ ಮೂರ್ತಿಯಿದೆ. ಗಂಗಾಧರನ ಮೇಲ್ಭಾಗದಲ್ಲಿರುವ ಕಮಲದಲ್ಲಿ ಮೂರು ದೇವಿಯರಿದ್ದು ಅವರನ್ನು ಜಲದೇವತೆಗಳಾದ ಗಂಗಾ, ಯಮುನಾ, ಮತ್ತು ಸರಸ್ವತಿಯರೆಂದು ಗುರುತಿಸಲಾಗಿದೆ.

13 ಬೌದ್ಧ ಚೈತ್ಯಾಲಯ (ಕ್ರಿ. ಶ. 6ನೇ ಶತಮಾನ)

ಇದು ಒಂದು ಬೌದ್ಧ ಚೈತ್ಯಾಲಯವಾಗಿದ್ದು ಉತ್ತರಾಭಿಮುಖವಾಗಿದೆ. ಈ ಚೈತ್ಯಾಲಯವನ್ನು ಸ್ವಲ್ಪ ಭಾಗ ಕಟ್ಟಿ ಉಳಿದ ಭಾಗಗಳನ್ನು ಕೊರೆದು ನಿರ್ಮಿಸಿರುವದು ವ್ಯಕ್ತವಾಗುತ್ತದೆ. ಪಡಶಾಲೆಯ ಛತ್ತಿನ ಮಧ್ಯದ ಅಂಕಣದಲ್ಲಿ ಎತ್ತರವಾದ ಬುದ್ಧನ ಮೂರ್ತಿಯಿದೆ. ಬುದ್ಧನು ಪದ್ಮಾಸನದಲ್ಲಿ ಕುಳಿತಿದ್ದು, ಹಿಂಭಾಗದಲ್ಲಿ ಪ್ರಭಾವಳಿಯಿದ್ದು ಇದರಲ್ಲಿ ಗಂಧರ್ವರ ಶಿಲ್ಪಗಳಿವೆ. ಮೇಲ್ಬಾಗದಲ್ಲಿ ಮುಕ್ಕೊಡೆ ಇದೆ. ಈ ಬುದ್ದನ ತಲೆಯ ಹಿಂದೆ ರೇಖೆಗಳುಳ್ಳ ಪ್ರಭಾಂಡಲ ಇರಬಹುದೆಂದು ಕಂಡು ಬರುತ್ತದೆ. ತಲೆಗೂದಲು ಗುಂಗುರು ಗುಂಗುರಾಗಿ, ಬುದ್ದನು ಹುಟ್ಟಿರುವ ಧೋತರವು ಮೊಣಕಾಲ ಕೆಳಗೆ ತೋರುತ್ತದೆ. ಬುದ್ದನ ಮುಖವು ಶಾಂತವಾಗಿದ್ದು ಧ್ಯಾನಾಸಕ್ತನಾಗಿರುವ ತನ್ಮಯತೆಯು ಮನ ಮೋಹಕವಾಗಿದೆ.

ಸನ್ನತಿ, ಬನವಾಸಿ, ಚಂದ್ರವಳ್ಳಿ, ಕಿರಿ ಇಂಡಿ, ಡಂಬಳ, ಕೋಳಿವಾಡ, ಬಬ್ರುವಾಡ, ಬಳ್ಳೆಗಾವಿ ಮುಂತಾದ ಸ್ಥಳಗಳಲ್ಲಿ ಬೌದ್ಧ ಅವಶೇಷಗಳು ದೊರೆತಿವೆ. ಇಲ್ಲಿ ಕೆಲವು ಶಾಸನಗಳಲ್ಲಿ “ಶ್ರೀ ಕಾಕಲೆ, ಶ್ರೀ ಬಿಣಮ್ಮನ್” ಶ್ರೀ ಬಿಸಾಟನ್, ಮಹೇಂದ್ರ, ಶ್ರೀ ಗುಣಪ್ರಿಯನ್ ಪತ್ತಿ ಚತ್ರಾಧಿಪತಿಶ್ರೀ ಎಂಬ ಉಲ್ಲೇಖಗಳಿವೆ.

14.  ಮೇಗುತಿ ಜಿನಾಲಯ (ಕ್ರಿ.ಶ. 634)Meguti Jinalaya

ಈ ಜಿನಾಲಯವನ್ನು ಇಮ್ಮಡಿ ಪುಲಿಕೇಶಿಯ ಆಶ್ರಯದಲ್ಲಿ ರವಿಕೀರ್ತಿಯು ಕಟ್ಟಿಸಿದನೆಂದು ಇದೆ. ದೇವಾಲಯದ ಪೂರ್ವದ ಹೊರಗೋಡೆಯಲ್ಲಿ ಕೊರೆದಿರುವ ಜೈನ ಶಾಸನವು ತಿಳಿಸುತ್ತದೆ. ಈ ಶಾಸನವು ಕಪ್ಪು ಹಸಿರಾದ ಕಲ್ಲಿನ ಮೇಲೆ ಕೆತ್ತಲಾಗಿದ್ದು ಪ್ರಥಮ ಬಾರಿಗೆ ಕಾಳಿದಾಸ ಮತ್ತು ಭಾರವಿಯ ಹೆಸರುಗಳನ್ನು ಉಲ್ಲೇಖಿಸುವದರಿಂದ ಕ್ರಿ. ಶ. 634 ಕ್ಕಿಂತಲೂ ಮೊದಲು ಇವರುಗಳು ಇದ್ದರೆಂಬ ಸಂಗತಿಯು ತಿಳಿಯುತ್ತದೆ.

ಐಹೊಳೆ ಪ್ರಶಸ್ತಿ ಶಾಸನದಲ್ಲಿ ಚಾಲುಕ್ಯ ಇಮ್ಮಡಿ ಪುಲಕೇಶಿಯ ದಿಗ್ವಿಜಯದ ವರ್ಣನೆಯ ಬಗೆಗೆ ಉಲ್ಲೇಖವಿದೆ. ಇದು ಇಮ್ಮಡಿ ಪುಲಕೇಶಿಯ ವಂಶಾವಳಿಯನ್ನು ನೀಡುತ್ತ ಆತನ ದಿಗ್ವಿಜಯಗಳ ಬಗೆಗೆ ವಿವರಿಸುತ್ತಾ, ಎಲ್ಲಾ ದಿಕ್ಕುಗಳಲ್ಲಿ ಜಯವನ್ನು ಗಳಿಸಿ ನಾವೆಯನ್ನು ಬಳಸಿ ಪೂರ್ವದ ಪುರಿಯನ್ನು ಕೈವಶಮಾಡಿಕೊಂಡ ಬಗೆಗೆ ಲಾಟ, ಮಾಳವ, ಮತ್ತು ಗೂರ್ಜರ ಅರಸರ ಸೊಕ್ಕು ಮುರಿದು ಮೂರು ಮಹಾರಾಷ್ಟ್ರಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ನಂತರ ಇಮ್ಮಡಿ ಪುಲಕೇಶಿಯ ರಾಜಧಾನಿ ವಾತಾಪಿಯನ್ನು ಪ್ರವೇಶಿಸಿದನೆಂದು ಹೇಳುತ್ತದೆ.

ರವಿ ಕೀರ್ತಿಯು ಕಾಳಿದಾಸ ಮತ್ತು ಭಾರವಿಯರ ಪಾಂಡಿತ್ಯಕ್ಕೆ ಸರಿಸಮನಾದ ಪಾಂಡಿತ್ಯವನ್ನು ಹೊಂದಿದ್ದನು. ಹಾಗೂ ಈ ಶಾಸನವನ್ನು ಆತನೇ ರಚಿಸಿದನೆಂದು ತಿಳಿಸುತ್ತದೆ. ಈ ಜಿನೇಂದ್ರಾಲಯಕ್ಕೆ ಮೂಲವಳ್ಳಿ, ಪಿಳ್ಮಳ್ತೆಕವಾಡಿ, ಮಚ್ಚನೂರು, ಗಂಗವೂರು, ಪುಲಿಗೆರೆ ಮತ್ತು ಗಂಡವ ಗ್ರಾಮಗಳನ್ನು ಉಪಭೋಗಕ್ಕಾಗಿ ದತ್ತಿಬಿಟ್ಟ ವಿಚಾರವನ್ನು ಐಹೊಳೆಯ ಪ್ರಶಸ್ತಿಯು ಉಲ್ಲೇಖಿಸುತ್ತದೆ. ಮೇಗುತಿ ಜಿನಾಲಯದ ನೆಲಮಹಡಿಯಲ್ಲಿರುವ ತೀರ್ಥಂಕರಮೂರ್ತಿ ಮಹಾವೀರನೆಂದು ಆರ್.ಎಸ್. ಗುಪ್ತೆ ಮೊದಲಾದವರು ಅಭಿಪ್ರಾಯಪಟ್ಟಿರುತ್ತಾರೆ.

15.  ಜೈನ ಗುಹೆ (ಕ್ರಿ.ಶ. 675-700)

ಮೆಗುತಿ ಗುಡಿಯ ಆಗ್ನೇಯಕ್ಕೆ ಸುಮಾರು ಎರಡು ಫರ್ಲಾಂಗು ಅಂತರದಲ್ಲಿ ಈ ಜೈನಗುಹೆ ಇದೆ. ಈ ಗುಹೆಗೆ ಪಡೆಶಾಲೆ, ನವರಂಗ, ಗರ್ಭಗೃಹ ಹಾಗೂ ಗುಹೆಯ ಎಡಭಾಗಕ್ಕೆ ಮತ್ತು ಬಲಭಾಗಕ್ಕೆ ಒಂದೊಂದು ಕೋಣೆ ಇವೆ. ಗುಹಾಲಯದ ಪಡಸಾಲೆಯನ್ನು ಸ್ವಲ್ಪ ಮಟ್ಟಿಗೆ ಕಲ್ಲಿನಲ್ಲಿ ಕೊರೆದು ಕಟ್ಟಿ ನಿರ್ಮಿಸಿರುತ್ತಾರೆ ಗುಹೆಯ ಎಡಭಾಗದಲ್ಲಿ ಗೊಮ್ಮಟೇಶ್ವರನು ತಪಸ್ಸು ಮಾಡುತ್ತಾ ಕಾಯೋತ್ಸರ್ಗ ಭಂಗಿಯಲ್ಲಿ ನಿಂತಿದ್ದು ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿದೆ. ಆತನ ಕಾಲು ಮತ್ತು ಕೈಗಳನ್ನು ಮಾಧವೀಲತೆಗಳು ಬಳಸಿವೆ.

ಪಡಸಾಲೆಯ ಬಲಗಡೆ ಪಾಶ್ರ್ವನಾಥನ ಎತ್ತರವಾದ ಕಾಯೋತ್ಸರ್ಗ ಭಂಗಿಯಲ್ಲಿರುವ ಆಕರ್ಷಕ ಮೂರ್ತಿ ಇದೆ ಗರ್ಭಗೃಹದಲ್ಲಿ ವಿರಾಜಮಾನನಾದ ತೀರ್ಥಂಕರನನ್ನು ಮಹಾವೀರನೆಂಬ ಅಭಿಪ್ರಾಯವಿದೆ ಈ ಗುಹೆಯಲ್ಲಿ ಕೆಲವು ವ್ಯಕ್ತಿಗಳ ಹೆಸರುಗಳಿವೆ. ಶ್ರೀ ಹಿರಿಯ, ವಿಕ್ರಮಪುತ್ರ, ಶ್ರೀ ಪ್ರಭಾವಿ, ಶ್ರೀ ಕಜರತಿ, ಶ್ರೀ ಪದ್ಮಸ್ವಾಮಿ, ಮಾದಿವ್ಯ ಮುಂತಾದವರು.

16. ಚರಂತಿಮಠ

ಜೈನ ದೇವಾಲಯಗಳ ಈ ಗುಂಪಿಗೆ ಚರಂತಿಮಠವೆಂದು ಸ್ಥಳೀಯವಾಗಿ ಕರೆಯಲಾಗಿದೆ. ಚರಂತಿಮಠದವರು ಕಾಲಾಂತರದಲ್ಲಿ ಇಲ್ಲಿ ವಾಸಿಸುತ್ತಿರುವದರಿಂದ ಈ ದೇವಾಲಯಕ್ಕೆ ಚರಂತಿಮಠವೆಂದು ಬಂದಿರಬಹುದು. ಗರ್ಭಗೃಹದ ಮೇಲೆ ಕಲ್ಯಾಣಿ ಚಾಲುಕ್ಯರ ಕಾಲದ ಶಿಥಿಲವಾದ ಕದಂಬನಾಗರ ಶಿಖರವನ್ನು ಹೊಂದಿದೆ. ಈ ದೇವಾಲಯಕ್ಕೆ ಮುಖಮಂಟಪ, ನವರಂಗ, ಅಂತರಾಳ, ಮತ್ತು ಮೂರು ಗರ್ಭಗೃಹಗಳಿವೆ ಇದೊಂದು ತ್ರಿಕೂಟಾಚಲ ದೇವಾಲಯವಾಗಿದೆ.

17.ಜೈನ ಬಸದಿಗಳು (11 ನೇ ಶತಮಾನ)

ಐಹೊಳೆಯ ಊರಿನ ಕೋಟೆಯ ಒಳಗೆ ಜೈನ ಬಸದಿಗಳ ಒಂದು ಸಮುಚ್ಛಯವಿದ್ದು ಅವನ್ನು ಜೈನ ನಾರಾಯಣ ಸಮೂಹ ಎನ್ನುತ್ತಾರೆ. ಇಲ್ಲಿನ ಮುಖ್ಯ ಬಸದಿಗೆ ಮೂರು ಗರ್ಭಗೃಹಗಳಿದ್ದು ಇದು 11 ನೆಯ ಶತಮಾನಕ್ಕೆ ಸೇರಿದ್ದಾಗಿದೆ. ಗರ್ಭಗೃಹಗಳಿಗೆ ಒಂದೇ ಮಂಟಪವಿದೆ, ಮಂಟಪದ ಬಾಗಿಲುವಾಡದ ಲಲಾಟದ ಮೇಲೆ ಮಹಾವೀರನು ಕುಳಿತ ಶಿಲ್ಪವಿದೆ. ಮಧ್ಯದ ಗರ್ಭಗೃಹದಲ್ಲಿ ಪಾಶ್ರ್ವನಾಥನು ಕುಳಿತ ಪ್ರತಿಮೆ ಇದ್ದು ಎಡಬಲಗಳಲ್ಲಿ ಐದು ಆನೆ ಮತ್ತು ಸಿಂಹಗಳಿವೆ. ಉಳಿದ ಗರ್ಭಗೃಹಗಳು ಬರಿದಾಗಿವೆ. ಒಂದು ಗರ್ಭಗೃಹದ ಮೇಲೆ ಮಾತ್ರ ಶಿಖರವಿದೆ, ಇಲ್ಲಿನ ಇನ್ನೊಂದು ಬಸದಿಯಲ್ಲಿ ಈಗ ತೀರ್ಥಂಕರ ಮೂರ್ತಿಯ ಬದಲಿಗೆ ಯಕ್ಷನ ಪ್ರತಿಮೆಯಿದೆ.

18. ಮಲ್ಲಿಕಾರ್ಜುನ ದೇವಾಲಯಗಳ ಸಂಕೀರ್ಣ (8ನೇ ಶತಮಾನ)Mallikarjun Temple Arch

ಈ ಸಂಕೀರ್ಣದಲ್ಲಿ ಐದು ದೇವಾಲಯಗಳಿದ್ದು ಮಲ್ಲಿಕಾರ್ಜುನ ಮಂದಿರ ಬಹುಶಃ 8ನೆಯ ಶತಮಾನದ್ದು ಇದ್ದು ಎತ್ತರದ ಅಧಿಷ್ಠಾನದಲ್ಲಿದ್ದು ಮುಖಮಂಟಪ, ರಂಗಮಂಟಪ ಮತ್ತು ಗರ್ಭಗೃಹಗಳನ್ನು ಹೊಂದಿದೆ. ಮಂಟಪದ ಕಂಬಗಳಲ್ಲಿ ಸುಂದರ ಶಿಲ್ಪಗಳಿವೆ ಇಬ್ಬರು ಸ್ತ್ರೀವಾದಕರು ಸಂಗೀತದೊಂದಿಗೆ ನರ್ತಿಸುವ ನರ್ತಕಿ ಕುಳಿತಿರುವ ನರಸಿಂಹ, ಮಿಥುನ ಶಿಲ್ಪಗಳು, ಪದ್ಮನಿಧಿ, ಇವೆಲ್ಲ ಇಲ್ಲಿನ ಶಿಲ್ಪಗಳಲ್ಲಿ ಸೇರಿವೆ.

ಈ ದೇವಾಲಯ ಕದಂಬ ನಾಗರ ಶೈಲಿಯ ಶಿಖರ ಹೊಂದಿದೆ. ಇನ್ನೂ ಈ ಸಂಕೀರ್ಣದಲ್ಲಿ ಚಿಕ್ಕ ಪುಟ್ಟ ದೇವಾಲಯಗಳಿವೆ, ಇವೆಲ್ಲಾ ಹಿಂದೂ ದೇವಾಲಯಗಳನ್ನು ಯಾವ ರೀತಿಯಲ್ಲಿ ಕಟ್ಟಬೇಕೆಂದು ಪ್ರಯೋಗ ಮಾಡಿರುತ್ತಾರೆ. ಆದ್ದರಿಂದ ಐಹೊಳೆ ವಾಸ್ತುಶಿಲ್ಪದ ಪ್ರಯೋಗ ಶಾಲೆಯಾಗಿದೆ.

19. ಜ್ಯೋತಿರ್ಲಿಂಗ ದೇವಾಲಯಗಳ ಸಂಕೀರ್ಣ

ಡಾ|| ಅ. ಸುಂದರ ಅವರ ಪ್ರಕಾರ ಇಲ್ಲಿನ ಚಿಕ್ಕ ಮಂಟಪಗಳುಳ್ಳ ದೇವಾಲಯಗಳು ಐಹೊಳೆಯಲ್ಲಿಯೇ ಅತಿ ಪ್ರಚೀನ ದೇವಾಲಯಗಳಾಗಿವೆ. ಇಲ್ಲಿನ ಪ್ರಮುಖ ದೇವಾಲಯಕ್ಕೆ ಗರ್ಭಗೃಹ, ಗರ್ಭಗೃಹದ ಒಳಗಡೆ ಶಿವಲಿಂಗವಿದೆ. ಸಭಾಮಂಟಪ, ಮುಖಮಂಟಪ, ನಂದಿಮಂಟಪವನ್ನು ಹೊಂದಿದೆ ಇಲ್ಲಿನ ದೇವಾಲಯಗಳು ಕ್ರಮೇಣವಾಗಿ 7, 8, 9ನೆಯ ಶತಮಾನಕ್ಕೆ ಸೇರಿವೆ.

20. ವಿರೂಪಾಕ್ಷಗುಡಿ (ಗೌರಿಗುಡಿ 12 ನೆಯ ಶತಮಾನ)

ಗೌರಿ ಹುಣ್ಣಿಮೆಯಂದು ಈ ದೇವಾಲಯದಲ್ಲಿರುವ ಗೌರಿಯನ್ನು ಸ್ಥಳೀಯರು ಪೂಜಿಸಿರುವದರಿಂದ ಗೌರಿ ಗುಡಿ ಎಂದು ಸ್ಥಳೀಯ ಹೆಸರು ಬಂದಿದೆ. ಈ ದೇವಾಲಯವು ಮೇಲ್ನೋಟಕ್ಕೆ ಶೈವ ದೇವಾಲಯವೆಂದು ತಿಳಿದು ಬಂದರೂ ಗರ್ಭಗೃಹದಲ್ಲಿ ಶಿವಲಿಂಗವಿದ್ದರೂ ಗರ್ಭಗೃಹದ ಪ್ರವೇಶದ್ವಾರ ಇಕ್ಕೆಲಗಳಲ್ಲಿರುವ ವೈಷ್ಣವ ದ್ವಾರಪಾಲಕರು ಲಲಾಟದಲ್ಲಿರುವ ಗರುಡ ಶಿಲ್ಪ ಹಾಗೂ ಸ್ತಂಬಗಳ ಮೇಲಿರುವ ವೈಷ್ಣವ ಮೂರ್ತಿಗಳಿಂದ ಇದು ಪೂರ್ವದಲ್ಲಿ ವಿಷ್ಣು ದೇವಾಲಯವಾಗಿತ್ತೆಂದು ಹೇಳಬಹುದು. ಈ ದೇವಾಲಯವು ದಕ್ಷಿಣಾಭಿಮುಖವಾಗಿದೆ. ಇದು ಸಂಪ್ರದಾಯಕ್ಕೆ ವಿರೋಧವಾದರೂ ಅಪರೂಪವಾಗಿದೆ. ಏಕೆಂದರೆ ಕೇವಲ ಹನಮಂತ ದೇವಾಲಯಗಳು ಮಾತ್ರ ಈ ರೀತಿ ಇರುತ್ತದೆ.

21. ತೃಂಬಕೇಶ್ವರ ದೇವಾಲಯಗಳ ಸಂಕೀರ್ಣ (ಕ್ರಿ. ಶ. 12)

ತೃಂಬಕೇಶ್ವರ ದೇವಾಲಯದ ಗರ್ಭಗೃಹದಲ್ಲಿ ಹಸಿರು ಗ್ರಾನೈಟ ಕಲ್ಲಿನಲ್ಲಿ ಮಾಡಿರುವ ಶಿವಲಿಂಗವಿದೆ. ಇಲ್ಲಿರುವ ಮೂರು ದೇವಾಲಯಗಳು ತ್ರಿಕೂಟಾಲ ಮಾದರಿಯ ದೇವಾಲಯಗಳಾಗಿವೆ. ಈ ದೇವಾಲಯಗಳ ಮೇಲೆ ಕದಂಬ ನಾಗರ ಶೈಲಿಯ ಶಿಖರವನ್ನು ಹೊಂದಿದೆ. ಇದರ ನವರಂಗದಲ್ಲಿಯ ಸ್ತಂಭಗಳು ಕಪ್ಪುಶಿಲೆಯಲ್ಲಿ ಮಾಡಿದ್ದಾಗಿವೆ.

22. ಕೊಂತಿಗುಡಿಯ ಸಮುಚ್ಚಯ

ಇದೊಂದು ಸ್ಥಳೀಯ ಹೆಸರಾಗಿದೆ. ಈ ಗುಂಪಿನಲ್ಲಿ ನಾಲ್ಕು ಗುಡಿಗಳಿದ್ದು ಅವುಗಳಲ್ಲಿ ಮೊದಲನೆಯ ಕಾ¯ವನ್ನು ಸು,ಕ್ರಿ.ಶ. 750 ರಿಂದ ಪ್ರಾರಂಭವಾಗಿ 12ನೇ ಶತಮಾನದ ವರೆಗೆ ಮಿತಗೊಳಿಸಲಾಗಿದೆ. ಈ ದೇವಾಲಯದಲ್ಲಿ ವಿಷ್ಣುವಿನ ವಾಹನ ಗರುಡ ಗಜಲಕ್ಷ್ಮಿ, ಶಿವ ಬ್ರಹ್ಮ, ಹಿರಣ್ಯಕಶ್ಯಪುವಿನ ಸಂಹಾರ, ಗಜಾಸುರ ಮತ್ತು ಈ ಸಮುಚ್ಚಯದಲ್ಲಿ ಪ್ರತಿ ವರ್ಷ ದಸರಾದಿನ ತ್ರಿಶೂಲ ಪೂಜಿಸಿ ಗ್ರಾಮದಲ್ಲಿ ಮೆರವಣಿಗೆ ಕೈಗೊಂಡು ಬನ್ನಿ ಮುಡಿಸುತ್ತಾರೆ.

23. ಹುಚ್ಚಪ್ಪಯ್ಯ ಮಠ (6ನೆಯ ಶತಮಾನ)

ಈ ದೇವಾಲಯದ ಕಂಬದ ಮೇಲೆ ಸುಮಾರು ಕ್ರಿ. ಶ. 1077 ಕಾಲದ ಒಂದು ಶಾಸನವಿದೆ. ಈ ಸಮುಚ್ಚಯದಲ್ಲಿ ಎರಡು ದೇವಾಲಯಗಳನ್ನು ಒಳಗೊಂಡಿದೆ ಒಂದನೆಯ ದೇವಾಲಯದಲ್ಲಿ ನವರಂಗದಲ್ಲಿ ಐದು ಹೆಡೆಯ ಆದಿಶೇಷನ ಮೇಲೆ ವಿಷ್ಣು ಕುಳಿತಿರುವ ಭಂಗಿಯಿದೆ ಕೈಯಲ್ಲಿ ಶಂಖ ಮತ್ತು ಚಕ್ರಗಳನ್ನು ಹಿಡಿದಿರುವನು ನಮತರ, ಶಿವ ಮತ್ತು ಪಾರ್ವತಿಯರು ನಂದಿಯ ಮೇಲೆ ಕುಳಿತಿರುವರು. ಅಕ್ಕ ಪಕ್ಕದಲ್ಲಿ ಛತ್ರಿ ಚಾಮರಧಾರಿರುವರು. ಚತುರ್ಮುಖ ಬ್ರಹ್ಮನು ತನ್ನ ವಾಹನ ಹಂಸ ಪಕ್ಷಿಯ ಮೇಲೆ ಕುಳಿತಿದ್ದು ಅವನ ಅಕ್ಕಪಕ್ಕದಲ್ಲಿ ಋಷಿಮುನಿಗಳು ತಪ್ಪಸ್ಸನ್ನು ಮಾಡುತ್ತಿರುವರು.

24. ಜೈನ ಗುಡಿಗಳ ಗುಂಪು

ಅವಳಿ ಬಸ್ತಿಗಳು ದಕ್ಷಿಣಾಭಿಮುಖವಾಗಿದ್ದು ಅವುಗಳೆರಡಕ್ಕೂ ಒಂದೇ ಮುಖಮಂಟಪವಿದೆ. ಈ ಬಾಗಿಲುವಾಡದ ಲಲಾಟದಲ್ಲಿ ಜಿನ ಬಿಂಬವಿದ್ದು ಮೇಲ್ಭಾಗದಲ್ಲಿ ಮುಕ್ಕೊಡೆಯಿದೆ. ಇದರ ಮೇಲ್ಭಾಗದಲ್ಲಿ 12 ತೀರ್ಥಂಕರ ಶಿಲ್ಪಗಳಿವೆ. ಇದೆ ಬಸದಿಯಲ್ಲಿರುವ ಕ್ರಿ.ಶ. 1120 ಶಾಸನವು ಕೇಶವಶೆಟ್ಟಿ ಮತ್ತು ಅವನ ಪತ್ನಿ ಸಾವಿಯಕ್ಕ ದಂಪತಿಗಳು ಈ ಬಸದಿಯನ್ನು ಕಟ್ಟಿರುತ್ತಾರೆ.

25. ರಾಚಿ ಗುಡಿ (11 ನೆಯ ಶತಮಾನ)

ಕಲ್ಯಾಣ ಚಾಲುಕ್ಯ ಶೈಲಿಯ 11 ನೆಯ ಶತಮಾನದ ಈ ದೇವಾಲಯವು ತ್ರಿಕೂಟಾಚಲವಾಗಿದ್ದು ಮೂರು ಗರ್ಭಗೃಹಗಳಿರುವ ಶಿವಾಲಯವಾಗಿದೆ. ಈ ದೇವಾಲಯವು ಎತ್ತರದ ಅಧಿಷ್ಠಾನದ ಮೇಲೆ ಇದ್ದು ಗರ್ಭಗೃಹಗಳಿಗೆ ಮೂರು ದ್ವಾರಗಳಿವೆ. ರಂಗ ಮಂಟಪದಲ್ಲಿ ನಾಲ್ಕು ಕಂಬಗಳಿದ್ದು ಎರಡು ಗರ್ಭಗೃಹದ ಮೇಲೆ ಶಿಖರಗಳಿವೆ.

26. ಎಣಿಯರ ಗುಡಿ (11-12 ನೆಯ ಶತಮಾನ)

ಇದು ಕಲ್ಯಾಣ ಚಾಲುಕ್ಯರ ಕಾಲದ 11 ಮತ್ತು 12 ನೇಯ ಶತಮಾನದ 8 ದೇವಾಲಯಗಳ ಸಂಕೀರ್ಣವಾಗಿದೆ. ಮೊದಲನೆಯ ದೇವಾಲಯದ ಗರ್ಭಗೃಹದ ದ್ವಾರಬಂಧವು ಅತ್ಯಂತ ಸುಂದರವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯ ಶಿಲ್ಪವಿದೆ. ಎರಡನೆಯದರಲ್ಲಿ ಶಿವಲಿಂಗವಿದ್ದು ಮುಂದೆ ದ್ವಾರಪಾಲಕರಿದ್ದಾರೆ ನಾಲ್ಕರಲ್ಲಿ ಮೂರ್ತಿಇಲ್ಲ ಐದನೇಯ ದೇವಾಲಯದ ಹೊರಗೋಡೆಯ ಮೇಲೆ ವರಾಹ ಶಿಲ್ಪವಿದೆ. ಆರನೇಯ ದೇವಾಲಯದಲ್ಲಿ ಗಜಲಕ್ಷ್ಮಿ, ಗಣಪತಿ, ಮತ್ತು ಕಾರ್ತಿಕೇಯನ ಶಿಲ್ಪವಿದೆ. ಉಳಿದ ದೇವಾಲಯಗಳಲ್ಲಿ ಸಪ್ತ ಮಾತೃಕೇಯರ ಶಿಲ್ಪವನ್ನು ಕೆತ್ತಲಾಗಿದೆ.

27. ತಾರಾಬಸಪ್ಪ ಮತ್ತು ಹಳ್ಳಿ ಬಸಪ್ಪ ಸಂಕೀರ್ಣRamalinga Temple Arch

ಈ ಎರಡು ದೇವಾಲಯಗಳು ಶಿವಾಲಯವಾಗಿದ್ದು ಗರ್ಭಗೃಹ, ಸಭಾಮಂಟಪ, ಮುಖಮಂಟಪ ಮತ್ತು ನಂದಿಯನ್ನು ತಾರಾಬಸಪ್ಪ ದೇವಾಲಯ ಒಳಗೊಂಡಿದೆ ಮತ್ತು ಹಳ್ಳಿ ಬಸಪ್ಪ ದೇವಾಲಯದಲ್ಲಿ ಶಿವಲಿಂಗ ಹೊಂದಿದ್ದು ಅಕ್ಕಪಕ್ಕದಲ್ಲಿ ಚಿಕ್ಕಪುಟ್ಟ ದೇವಾಲಯವನ್ನು ಹೊಂದಿದೆ. ಹಿಂದೂ ದೇವಾಲಯವನ್ನು ಯಾವ ರೀತಿಯಲ್ಲಿ ನಿರ್ಮಿಸಬೇಕೆಂದು ಇಲ್ಲಿ ಪ್ರಯೋಗ ಮಾಡಿದ್ದಾರೆ ಆಗಿನ ಕಾಲದಲ್ಲಿ ಐಹೊಳೆ ಶಿಲ್ಪಕಲಾ ಕೇಂದ್ರವಾಗಿ ಪ್ರಸಿದ್ದವಾಗಿತ್ತು.

28. ಶ್ರೀ ರಾಮಲಿಂಗೇಶ್ವರ ದೇವಾಲಯಗಳ ಸಮೂಹ

ಈ ದೇವಾಲಯವನ್ನು ಮಲಪ್ರಭಾ ನದಿಯ ದಂಡೆಯ ಮೇಲೆ ನಿರ್ಮಿಸಲಾಗಿದೆ. ಇಲ್ಲಿ ಶ್ರೀ ರಾಮಲಿಂಗೇಶ್ವರನಿಗೆ ಪ್ರತಿ ನಿತ್ಯ ಪೂಜೆ ನಡೆಯುವದು ಇಲ್ಲಿ ಮಲಪ್ರಭಾ ನದಿಯು ದಕ್ಷಿಣವಾಹಿನಿಯಿಂದ ಉತ್ತರವಾಹಿನಿಯಾಗಿ ಹರಿದು ನಂತರ ಪೂರ್ವದಿಂದ ಪಶ್ಚಿಮವಾಹಿನಿಯಾಗಿದೆ ಪುರಾಣ ಕಥೆಗಳಲ್ಲಿ ಪಶ್ಚಿಮವಾಹಿನಿಯಾಗಿ ಹರಿಯುವ ನೀರು ಪುಣ್ಯ ಜಲ ಅಲ್ಲಿ ಸ್ನಾನ ಮಾಡಿದರೆ ಪಾಪ ವಿಮೋಚನೆಯಾಗುವದು ಎಂಬ ನಂಬಿಕೆ ಇದೆ. ಸಂಕ್ರಾಂತಿಯ ದಿನ ಭಕ್ತರ ಸಮೂಹ ಬಂದು ಈ ದೇವಾಲಯದ ಪಕ್ಕದಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಸ್ನಾನ ಮಾಡುತ್ತಾರೆ, ಫೆಬ್ರುವರಿ, ಮಾರ್ಚ ತಿಂಗಳಲ್ಲಿ ಮೂಲಾ ನಕ್ಷತ್ರದಿನದಂದು ರಥೋತ್ಸವ ಜರುಗುವುದು. ಇದೊಂದು ತ್ರಿಕೂಟಾಚಲವಾಗಿದೆ ಇದರಲ್ಲಿ ಶಿವ ಪಾರ್ವತಿ ಮತ್ತು ನಂದಿ ಶಿಲ್ಪವನ್ನು ಕಾಣುವಿರಿ.

29. ಗಳಗನಾಥ ದೇವಾಲಯಗಳ ಸಮುಚ್ಚಯGalaganath Temple Complex 1

ಗಳಗನಾಥ ಎಂಬುದು ಶಿವನ 108 ಹೆಸರುಗಳಲ್ಲಿ ಒಂದು ಹೆಸರಾಗಿದೆ. ಈ ಸಂಕೀರ್ಣವೂ ಕೂಡಾ ಮಲಪ್ರಭಾ ನದಿಯ ದಂಡೆಯ ಮೇಲಿದೆ. ರಾಷ್ಟ್ರಕೂಟರ ರನ್ನರ ಕಾಲದಲ್ಲಿ ಮೋನಿ ಭಟಾರರು ಗಳಗನಾಥ ಗುಂಪಿನ ಒಂದು ದೇವಾಲಯದಲ್ಲಿ ವಾಸವಾಗಿದ್ದರು ಅಂತ ಶಾಸನಗಳ ಮುಖಾಂತರ ತಿಳಿಯುತ್ತದೆ.

Ravanaphadi shiva

Leave A Comment