ಬಸವ ತತ್ವ ನಿಷ್ಠರು

ಶಿವನಾಗಪ್ಪ ದರಗಾದShivanagappa Daragad
12ನೇ ಶತಮಾನದ ಬಸವಾದಿ ಪ್ರಮಥರ ವಾಣಿಯಂತೆ ‘ಕಾಯಕವೇ ಕೆಲಸ’ ಎನ್ನುವದನ್ನು ಪ್ರಮಾಣಿಕತೆ ಹಾಗೂ ನಿಷ್ಠೆಯಿಂದ ಪಾಲಿಸುವವರ ಸಾಲಿನಲ್ಲಿ ಹುನಗುಂದದ ಶರಣ ಶ್ರೀ ಶಿವನಾಗಪ್ಪ ದರಗಾದ ಎಂದು ಹೇಳಿದರೆ ಅತಿಶಯೋಕ್ತಿ ಎನಿಸಲಾರದು.
ಎತ್ತರದ ನಿಲುವು, ಸದಾ ಹಸನ್ಮುಖಿ ಕೊರಳಲ್ಲಿ ಲಿಂಗ ವಿಭೂತಿ ಧರಿಸುವ ಇವರು ಅತಿ ಸರಳ ಜೀವಿಗಳು. ಕೃಷಿಕರಾಗಿರುವ ಶಿವನಾಗಪ್ಪನವರ ಬಹುದೊಡ್ಡ ಕಾಯಕ ವೃತ್ತಿ ಎಂದರೆ ಸೇವಾ ಮನೋಭಾವ.

10ರ ಹರೆಯದ ಬಾಲಕನಾದ ಶಿವನಾಗಪ್ಪನವರು ವಿಜಯ ಮಹಾಂತೇಶ ಮಠದಲ್ಲಿ ದೀಪ ಹಚ್ಚುವ ಸೇವೆಯಲ್ಲಿ ತೊಡಗಿದ ಇವರು ಇಂದಿನವರೆಗೂ ಮಠದ ಸದ್ಭಕ್ತರು. 1974ರಲ್ಲಿ ಕೆಳದಿ ಶ್ರೀಗಳಿಂದ ಗುರುಭೋದನೆ ಸ್ವೀಕರಿಸಿದ ಇವರು ನಸುಕಿನ ಜಾವ ಮಠದಲ್ಲಿ ಸುಪ್ರಭಾತ ಹಾಡುವುದರೊಂದಿಗೆ ಅಂದಿನ ಕಾಯಕ ಶುರುವಾಗುತ್ತದೆ. ಇವರ ಇನ್ನೊಂದು ಕಾಯಕ ನಿಷ್ಠೆ ಎಂದರೆ ಅಡುಗೆ ಮಾಡುವುದು. ತಮ್ಮದೇ ಆದ ವಿಶೇಷ ರುಚಿಯ ಕೈಚಳಕ ತೋರಿಸುವ ಇವರು ಕಮತಗಿಯಲ್ಲಿನ ಹೊಳೆ ಹುಚ್ಚೇಶ್ವರ ಶ್ರೀಗಳ ಚರಪಟ್ಟಾಧಿಕಾರ ಸಮಾರಂಭದ ಸಂದರ್ಭದಲ್ಲಿ ಕೇವಲ 12 ಗಂಟೆಗಳಲ್ಲಿ 70 ಕ್ವಿಂಟಾಲ್ ಬುಂದೆಯನ್ನು ಸಹಾಯಕರೊಂದಿಗೆ ಮಾಡಿ ದಾಖಲೆ ಮೆರೆದಿದ್ದಾರೆ.

ಬಿಡುವಿನ ವೇಳೆಯಲ್ಲಿ ಶಿವದಾರದಿಂದ ಲಿಂಗುಗಳನ್ನು ಹೆಣೆಯುವ ಇವರು 1974ರಲ್ಲಿ ಜರುಗಿದ 63 ಮಂಟಪ ಪೂಜೆಯ ಸಂದರ್ಭದಲ್ಲಿ 500 ಶಿವದಾರದ ಲಿಂಗುಗಳನ್ನು ಹೆಣೆದಿದ್ದಾರೆ. ಇದುವರೆಗೂ ಹೆಣೆದ ಶಿವದಾರದ ಲಿಂಗುಗಳ ಸಂಖ್ಯೆ 12000.
ನಿಸ್ವಾರ್ಥ ಸೇವೆಗೆ ಹೆಸರಾದ ಶ್ರೀ ಶಿವನಾಗಪ್ಪನವರು ಸುಧಾರಿತ ಕೃಷಿಕರಾಗಿ ಅಷ್ಟೇ ಅಲ್ಲದೇ ಪ್ರಗತಿಪರ ರೈತರೆನಿಸಿದ ಇವರು ವಿಜಯ ಮಹಾಂತೇಶ ಭಜನಾ ಮಂಡಳಿಗೆ ಪ್ರೇರಕ ಶಕ್ತಿಯಾಗಿ ಶಿವಶರಣರ ವಚನಗಳ ಚಿಂತಕರಾಗಿರುವ ಇವರು ‘ದಿನದ ಬದುಕಿಗೆ ಕೃಷಿ, ಬಿಡುವಿಗೆ ಮಹಾಂತನ ಸೇವೆ’ ಎನ್ನುತ್ತಾರೆ.

ಸದಾ ವಿಜಯ ಮಹಾಂತೇಶನ ಸೇವೆಯಲ್ಲಿ ದಿನದ ಬದುಕನ್ನು ಕಳೆಯುತ್ತಾ, ಶರಣರ ಸಂಘದಲ್ಲಿ ಶರಣ ಸಾಹಿತ್ಯವನ್ನು ಪಸರಿಸುವ ಇವರು ಮಹಾಂತ ಶ್ರೀಗಳ ಕೃಪೆಗೆ ಪಾತ್ರರಾಗಿದ್ದಾರೆ.

ಶ್ರೀ ಶಿವಣ್ಣ ಆದಪ್ಪ ನಾಗೂರShivappa nagur

ಬಸವ ತತ್ವನಿಷ್ಠರೂ, ಶರಣ ತತ್ವವನ್ನೇ ಮೈಗೂಡಿಸಿಕೊಂಡು ಬೆಳೆದವರು ಶ್ರೀ ಶಿವಣ್ಣನವರು. 1955 ರ ಎಪ್ರಿಲ್ 4 ರಂದು ಕೃಷಿಕ ದಂಪತಿಗಳಾದ ಶರಣರಾದ ಆದಪ್ಪ ಮತ್ತು ಈರಮ್ಮನವನವರ ಉದರದಲ್ಲಿ ಜನಿಸಿದರು. ಬಾಲ್ಯದಿಂದಲೂ ಉದಾರವಾದಿಗಳಾಗಿಯೇ ಬೆಳೆದವರು. ಇವರ ಅತ್ತೆಯಾದ ಶ್ರೀಮತಿ ಬಸಮ್ಮ ನಾಗೂರ ಅವರು ಕೊಪ್ಪದ ಶ್ರೀ ಮ.ನಿ.ಪ್ರ. ಮಹಾಂತ ಶ್ರೀಗಳಿಂದ ಮತ್ತು ಇಲಕಲ್ಲದ ಚಿತ್ತರಗಿ ಸಂಸ್ಥಾನಮಠದ ಪರಮ ಪೂಜ್ಯ ಮ.ನಿ.ಪ್ರ. ಡಾ. ಮಹಾಂತ ಶ್ರೀಗಳವರಿಂದ ಕೃಪಾಶೀರ್ವಾದ ಮತ್ತು ಮಠಮಾಸ್ತರರಿಂದ ಗುರುಬೋಧನೆಯನ್ನು ಪಡೆದುಕೊಂಡು ಸದಾ ಹುನಗುಂದ ಮಠದ ಸೇವೆಯನ್ನು ಮಾಡುತ್ತ ಬಂದವರಾದ್ದಾರೆ. ಅಂತವರ ಪ್ರಭಾವದಿಂದ ಜಾಗೃತಗೊಂಡ ಶಿವಣ್ಣನವರೂ ಕೂಡಾ ಸುಮಾರು 20 ವರ್ಷಗಳಿಂದ ಇಂದಿನವರೆಗೂ ಮಠದ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಾ ಹೋಗುತ್ತಿದ್ದಾರೆ.

1969 ರಲ್ಲಿ ಎಂಟನೆಯ ತರಗತಿಯವರೆಗೆ ಅಧ್ಯಯನ ಮಾಡಿದ ಇವರು ಶಿಕ್ಷಣವನ್ನು ಮುಂದುವರೆಸದೇ ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ಮಠಗುರುಗಳ ಮಾರ್ಗದರ್ಶನದಂತೆ ಪೂಜ್ಯ ಗುರುಬಸವಾರ್ಯ ಮಠದ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡರು. ಮೂಲತ: ಕೃಷಿಯೇ ಇವರ ಮೂಲ ಉದ್ಯೋಗವಾಗಿದ್ದರೂ 1999 ರಿಂದ ಖಾಸಗಿ ಗುತ್ತಿಗೆದಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸೇವಾಶಕ್ತರನ್ನು ಪರಿಗಣಿಸಿದ ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಮಹಾಂತ ಶ್ರೀಗಳು ಮತ್ತು ಶ್ರೀ ಮ.ನಿ.ಪ್ರ. ಗುರು ಮಹಾಂತ ಶ್ರೀಗಳು ಇತ್ತೀಚಿಗೆ ಜರುಗಿದ ಪೂಜ್ಯಶ್ರೀ ವಿಜಯಮಹಾಂತ ಶಿವಯೋಗಿಗಳ ಶತಮಾನೋತ್ಸವದ ಸಮಾರಂಭದಲ್ಲಿ ಹುನಗುಂದದಿಂದ 101 ಆಕಳಗಳನ್ನು ಬಡವರಿಗೆ ದಾನ ನೀಡಲು ಸಹಾಯ ಮಾಡಬೇಕೆಂಬ ಜವಾಬ್ದಾರಿಯನ್ನು ಇವರ ಮೇಲೆ ಹಾಕಿದಾಗ ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಶ್ರೀಯುತ ವೀರಣ್ಣ ಚಟ್ಟೇರ ಅವರ ಮಾರ್ಗದರ್ಶನದಲ್ಲಿ ಶ್ರೀ ಈರಣ್ಣ ಬಳೂಟಗಿ, ಶ್ರೀ ಬಸನಗೌಡ ಆರೇಗೌಡ್ರ, ಶ್ರೀ ಬಸಪ್ಪ ಆಲೂರ, ಶ್ರೀ ಶಿವನಾಗಪ್ಪ ದÀರಗಾದ ಶ್ರೀ ರಾಮನಗೌಡ ಬೆಳ್ಳಿಹಾಳ ಅವರ ಸಹಕಾರದೊಂದಿಗೆ ಊರಿನಲ್ಲಿ ಸಂಚರಿಸಿ ಹಣ ಸಂಗ್ರಹಿಸಿ 101 ಆಕಳನ್ನು ಖರೀದಿಸಿ ಶ್ರೀಗಳವರ ಸಾನಿಧ್ಯಕ್ಕೆ ಅರ್ಪಿಸಿದರು. ಸಮಾರಂಭದ ದಿನ ಶ್ರೀ ಶಿವಣ್ಣ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.

ಪೂಜ್ಯರ ಪರಮ ಭಕ್ತರಾದ ಇವರು ಪ್ರತಿದಿನ ಸ್ನಾನ ಮಾಡಿ ಲಿಂಗಪೂಜೆ ಮಾಡಿಕೊಂಡ ನಂತರವೇ ತಮ್ಮ ಕೆಲಸ ಕಾರ್ಯಗಳಿಗೆ ಅಣಿಯಾಗುವುದನ್ನು ಮೊದಲಿನಿಂದಲೂ ರೂಢಿಸಿಕೊಂಡಿದ್ದಾರೆ. ಮಠಗುರುಗಳ ಪರಮ ಶಿಷ್ಯರಾದ ಇವರು ಗುರುಗಳ ನಂತರ ಮಠದ ಕಾರ್ಯಗಳ ಮೇಲ್ವಿಚಾರಣೆಯನ್ನು ಇಂದು ಶ್ರೀ ಶಿವನಾಗಪ್ಪ ದರಗಾದ ಅವರ ಸಹಕಾರದೊಂದಿಗೆ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಹುನಗುಂದ ಬಸವ ಮಂಟಪದ ನಿರ್ಮಾಣದ ಸಂದರ್ಭದಲ್ಲಿ ವಾಹನದ ಸೌಲಭ್ಯ ಇಲ್ಲದೇ ಇರುವಾಗ ಇವರು ತಮ್ಮ ಮುಂದಾಳತ್ವದಲ್ಲಿ ಶ್ರೀ ಶಿವನಾಗಪ್ಪ ದರಗಾದ, ಶ್ರೀ ಸಂಗಣ್ಣ ನಾಗರಾಳ ಶ್ರೀ ಗುರಪ್ಪ ಹಕಾರಿ, ಶ್ರೀ ಮಹಾಂತಪ್ಪ ಪಲ್ಲೇದ, ಶ್ರೀ ಸಿದ್ದಪ್ಪ ಹೊಸೂರು ಇವರ ಸಹಕಾರದೊಂದಿಗೆ ಹುನಗುಂದ ಭಕ್ತರ 41 ಚಕ್ಕಡಿಗಳನ್ನು ಹೂಡಿಕೊಂಡು ಕುಷ್ಟಗಿ ತಾಲೂಕಿನ ಸಂಕಲಾಪೂರದಿಂದ ಮರಳು ತಂದು ಕಟ್ಟಡ ನಿರ್ಮಾಣಕ್ಕೆ ಕಾರಣರಾದರು. ಇಂದಿಗೂ ಮಠದಲ್ಲಿ ವಿವಾಹ ಸಮಾರಂಭ ಮತ್ತಿತರ ಯಾವುದೇ ಸಮಾರಂಭಗಳು ಜರುಗಿದರೆ ಅವುಗಳ ಮೇಲ್ವಿಚಾರಣೆ ಇವರದಾಗಿದೆ. ಅಲ್ಲದೇ ಶ್ರೀ ಶಿವಣ್ಣನವರು ವಿದ್ಯಾವರ್ದಕ ಸಂಘದ ಸಾಮಾನ್ಯ ಸದಸ್ಯರಾಗಿ ದ್ದಾರೆ ಮತ್ತು ವಿಜಯ ಮಹಾಂತ ಮಠದ ತರುಣ ಸಂಘದ ಸದಸ್ಯರಾಗಿದ್ದಾರೆ. ಒಟ್ಟಾರೆ ಸಂಘಟನಾಶೀಲರೂ, ಬಸವತತ್ವ ನಿಷ್ಠರೂ ಆದ ಇವರು ಗಿಡ್ಡದಾದ ನಿಲವು, ಇವರು ತಲೆಯ ಮೇಲೆ ಗಾಂಧೀ ಟೋಪಿ ಹಾಗೂ ನೆಹರುಶರ್ಟ, ಧೋತಿ ಬಟ್ಟೆಯನ್ನು ಧರಿಸಿದ ಸರಳ ನುಡಿ, ಸರಳ ಸ್ವಭಾವದ ವ್ಯಕ್ತಿತ್ವ ಇವರದಾಗಿದೆ. ಹಸನ್ಮುಖಿಯಾದ ಇವರ ಜೀವನ ಇನ್ನಷ್ಟು ಒಳ್ಳೆಯ ಕಾರ್ಯಗಳಿಗೆ, ಸಮಾಜ ಸೇವೆಗಳಿಗೆ ಮೀಸಲಾಗಿರಲೆಂದು ನಮ್ಮ ಆಶೆ.

Comments
One Response to “ಬಸವ ತತ್ವ ನಿಷ್ಠರು”
  1. Suresh says:

    Shivanagappa is a simple in nature and serves at Mahantesh Math (Hungund) without expecting anything.

Leave A Comment